ನವದೆಹಲಿ : 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಆದ್ರೆ, ಈಗ 50 ವರ್ಷ ತುಂಬುವ ಮೊದಲೇ ಹೃದಯಾಘಾತ ಬರುತ್ತಿದೆ. ಅಲ್ಲಿಯವರೆಗೆ ಲವಲವಿಕೆಯಿಂದ ಇದ್ದವರೂ ದಿಢೀರ್ ಕುಸಿದು ಬೀಳುತ್ತಿದ್ದಾರೆ. ಅದ್ರಲ್ಲೂ ಕೊರೊನಾ ನಂತ್ರ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಹೃದಯರಕ್ತನಾಳದ ಸಮಸ್ಯೆಗಳು ಹೆಚ್ಚಾಗುತ್ತಿವೆ. ದೈಹಿಕ ಚಟುವಟಿಕೆಯ ಕೊರತೆಯೇ ಹೃದಯ ಸಂಬಂಧಿ ಕಾಯಿಲೆಗಳಿಗೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು. ಹೆಚ್ಚು ಗಂಟೆಗಳ ಕಾಲ ಕುಳಿತು ಕೆಲಸ ಮಾಡುವವರಲ್ಲಿ ಹೃದಯದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸಂಗತಿಗಳನ್ನ ಬಹಿರಂಗಪಡಿಸಿದೆ. WHO ಪ್ರಕಾರ, ವ್ಯಾಯಾಮದ ಕೊರತೆಯಿಂದಾಗಿ ಹೃದಯರಕ್ತನಾಳದ ಸಮಸ್ಯೆಗಳು ಭಾರತೀಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ.
ಒಬ್ಬ ವ್ಯಕ್ತಿ ವಾರಕ್ಕೆ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದ್ರೆ, ಶೇಕಡಾ ಐವತ್ತಕ್ಕೂ ಹೆಚ್ಚು ಭಾರತೀಯರು ವ್ಯಾಯಾಮ ಮಾಡುವುದಿಲ್ಲ. ಹಾಗಾಗಿಯೇ ಭಾರತದಲ್ಲಿ ಹೃದ್ರೋಗ ಸಮಸ್ಯೆಗಳು ಹೆಚ್ಚು ಎನ್ನುತ್ತಾರೆ. 150 ನಿಮಿಷ ಲೆಕ್ಕ ಹಾಕದೇ ಇರುವುದು ಹಾಗೂ ದಿನಕ್ಕೆ 30 ನಿಮಿಷ ಮೀಸಲಿಡದಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ವೈದ್ಯರು. ಅಂತಹವರು ನಾವು ನಡೆಯುವ ಹೆಜ್ಜೆಗಳನ್ನ ಎಣಿಸುವ ಮೊಬೈಲ್ ಅಪ್ಲಿಕೇಶನ್’ಗಳನ್ನ ಬಳಸಬೇಕೆಂದು ಸಲಹೆ ನೀಡುತ್ತಾರೆ.
ಅಮೆರಿಕದ ಎಂಐಟಿಯ ಸಂಶೋಧಕರು ವ್ಯಾಯಾಮ ನಿಜವಾಗಿಯೂ ಹೃದಯ ಸಂಬಂಧಿ ಕಾಯಿಲೆಗಳನ್ನ ಕಡಿಮೆ ಮಾಡುತ್ತದೆ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಭಾರತ ಸೇರಿದಂತೆ 42 ದೇಶಗಳ 20 ಸಾವಿರ ಜನರ ವ್ಯಾಯಾಮದ ವಿವರಗಳನ್ನ ಪರಿಶೀಲಿಸಲಾಗಿದೆ. ಪ್ರತಿದಿನ 6 ರಿಂದ 9 ಸಾವಿರ ಹೆಜ್ಜೆಗಳನ್ನ ನಡೆಯುವವರಲ್ಲಿ ಹೃದ್ರೋಗ ಸಮಸ್ಯೆಗಳು ಶೇಕಡಾ 60ರಷ್ಟು ಕಡಿಮೆಯಾಗಿದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ. ಏತನ್ಮಧ್ಯೆ, ಭಾರತೀಯರು ಅದರಲ್ಲೂ ವಿಶೇಷವಾಗಿ ಕೆಲಸದಿಂದ ನಿವೃತ್ತರಾದವರು ದೈಹಿಕ ಚಟುವಟಿಕೆಯಿಂದ ದೂರವಿದ್ದು, ಅಂತಹವರು ತಮ್ಮ ಹೆಜ್ಜೆಗಳನ್ನ ಎಣಿಸಿ ಈ ರೀತಿ ನಡೆದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನ ತಪ್ಪಿಸಬಹುದು ಎಂದು ಸಂಶೋಧಕರು ಹೇಳುತ್ತಾರೆ.