ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ, ಚಾಮರಾಜನಗರ
ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿ ಎಸ್ಪಿಯವರ ಫ್ಲೆಕ್ಸ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಚಾಮರಾಜನಗರದಲ್ಲೂ ಅಂತಹದ್ದೇ ಘಟನೆ ಮರುಕಳಿಸಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ‘ಕೆಎನ್ಎನ್’ (KNN) ಈ ಬಗ್ಗೆ ವರದಿ ಬಿತ್ತರಿಸಿದ ಫಲಶೃತಿಯಾಗಿ, ಇದೀಗ ವಿವಾದಾತ್ಮಕ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿದೆ.
ವಿವಾದಕ್ಕೆ ಕಾರಣವಾಗಿದ್ದೇನು?
ಚಾಮರಾಜನಗರ ವಿಶ್ವವಿದ್ಯಾನಿಲಯ ಮತ್ತು ಮೈಸೂರಿನ ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ ಇವರ ಸಂಯುಕ್ತಾಶ್ರಯದಲ್ಲಿ ‘ಕೈವಾರ ಸದ್ಗುರು ಯೋಗಿನಾರಾಯಣ ಯೋಗಿಗಳ ಪರಿಚಯ’ ಹಾಗೂ ‘ಯತೀಂದ್ರ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಖಾಸಗಿ ಕಾರ್ಯಕ್ರಮದ ಪ್ರಚಾರಕ್ಕಾಗಿ ಆಯೋಜಕರು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ಭಾವಚಿತ್ರಗಳನ್ನು ಬಳಸಿಕೊಂಡು ನಗರದಾದ್ಯಂತ ಬೃಹತ್ ಫ್ಲೆಕ್ಸ್ಗಳನ್ನು ಅಳವಡಿಸಿದ್ದರು.
ಅಧಿಕಾರಿಗಳ ಅನುಮತಿ ಪಡೆದೇ ಈ ಫ್ಲೆಕ್ಸ್ ಹಾಕಲಾಗಿದೆಯೇ ಎಂಬ ಸಂಶಯ ಒಂದೆಡೆಯಾದರೆ, ರಾಜಕಾರಣಿಗಳ ಮಾದರಿಯಲ್ಲಿ ಅಧಿಕಾರಿಗಳ ಫೋಟೋ ಪ್ರದರ್ಶನ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿತ್ತು.
ಎಚ್ಚೆತ್ತುಕೊಂಡ ನಗರಸಭೆ – ತೆರವು ಕಾರ್ಯಾಚರಣೆ
ಈ ಕುರಿತು ವ್ಯಾಪಕ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ನಗರಸಭಾ ಅಧಿಕಾರಿಗಳು, ವಿವಾದಿತ ಫ್ಲೆಕ್ಸ್ಗಳನ್ನು ತೆರವುಗೊಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿಗಳು ಈಗಾಗಲೇ ಅನಧಿಕೃತ ಫ್ಲೆಕ್ಸ್ಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದರೂ, ಜಿಲ್ಲಾ ಮಟ್ಟದ ಅಧಿಕಾರಿಗಳ ಫೋಟೋ ಇರುವ ಫ್ಲೆಕ್ಸ್ಗಳ ಬಗ್ಗೆ ನಗರಸಭೆ ಮೌನ ವಹಿಸಿದ್ದು ಟೀಕೆಗೆ ಗುರಿಯಾಗಿತ್ತು.
ದಂಡ ಯಾರಿಗೆ? ಕ್ರಮ ಏನು?
ಫ್ಲೆಕ್ಸ್ ಸಂಸ್ಕೃತಿ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಿಗೂ ಹರಡುತ್ತಿರುವ ಆತಂಕದ ನಡುವೆ, ಜಿಲ್ಲಾ ಮಟ್ಟದ ಅಧಿಕಾರಿಗಳ ಫೋಟೋ ಬಳಸಿಕೊಂಡ ಆಯೋಜಕರಿಗೆ ದಂಡ ವಿಧಿಸಲಾಗುತ್ತದೆಯೇ ಎಂಬ ಪ್ರಶ್ನೆ ಈಗ ಮೂಡಿದೆ. ಅಧಿಕಾರಿಗಳ ಫೋಟೋವನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ನಗರಸಭೆ ಯಾವ ರೀತಿಯ ಕಾನೂನು ಕ್ರಮ ಜರುಗಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಮಂಡ್ಯದ ಫ್ಲೆಕ್ಸ್ ಹಾವಳಿಯ ನಂತರ ಚಾಮರಾಜನಗರದಲ್ಲೂ ಸೃಷ್ಟಿಯಾಗಿದ್ದ ವಿವಾದ ಸದ್ಯಕ್ಕೆ ಫ್ಲೆಕ್ಸ್ ತೆರವಿನೊಂದಿಗೆ ತಣ್ಣಗಾಗಿದೆ. ಆ ಮೂಲಕ ಕನ್ನಡ ನ್ಯೂಸ್ ನೌ ಸುದ್ದಿಯ ಪರಿಣಾಮವಾಗಿ ಫ್ಲೆಕ್ಸ್ ತೆರವುಗೊಳಿಸಲಾಗಿದೆ.
ಮಂಡ್ಯದಲ್ಲಿ ‘IPS ಅಧಿಕಾರಿ’ಯ ‘ಫ್ಲೆಕ್ಸ್’ ಹವಾ: ರಾಜಕಾರಣಿಗಳನ್ನೇ ಮೀರಿಸಿದ ‘ಎಸ್ಪಿ ಶೋಭರಾಣಿ’!
IPL 2026: ವಿರಾಟ್ ಕೊಹ್ಲಿ ಮುರಿಯಲಿರುವ 5 ಬೃಹತ್ ಬ್ಯಾಟಿಂಗ್ ದಾಖಲೆಗಳಿವು!








