ಹೊಸಪೇಟೆ: ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದರು, ಈಗ ನಮ್ಮದೇ ಗ್ಯಾರಂಟಿಗಳನ್ನು ಕಾಪಿ ಮಾಡಿ ಅದಕ್ಕೆ, “ಮೋದಿ ಗ್ಯಾರಂಟಿ” ಎಂದು ಹೆಸರಿಟ್ಟಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.
ಐತಿಹಾಸಿಕ ಹಂಪಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ವಿಜಯನಗರ ಕಾಲದ ವೈಭವ ಮತ್ತು ಬಸವಾದಿ ಶರಣರ ಆಶಯಗಳು ಮತ್ತು ಧೀಮಂತ ನಾಯಕರು ಹಾಕಿಕೊಟ್ಟ ಮಾರ್ಗವೇ ಮಾದರಿ. ಆದ್ದರಿಂದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.
ಬಸವಾದಿ ಶರಣರ ಆಶಯ, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ. ಸಹಿಷ್ಣುತೆ, ಸಹಬಾಳ್ವೆ, ಸಂಪತ್ತಿನ ಸಮಾನ ಹಂಚಿಕೆ, ಅವಕಾಶಗಳ ಸಮಾನ ಹಂಚಿಕೆ ಬಸವಾದಿ ಶರಣರು ಮತ್ತು ಅಂಬೇಡ್ಕರ್ ಅವರ ಆಶಯವಾಗಿದೆ. ಈಗ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದರು.
ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು. ಪರ ಧರ್ಮಗಳನ್ನು ಗೌರವಿಸಬೇಕು. ಧರ್ಮ – ಧರ್ಮದ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ, ವೈಷಮ್ಯ ಹರಡುವವರನ್ನು ತಿರಸ್ಕರಿಸದೇ ಹೋದರೆ ನಾಡಿನ, ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಸವಣ್ಣನವರ ಆಶಯದ ಸಹಬಾಳ್ವೆ, ಸಹಿಷ್ಣುತೆ ನಮಗೆ, ನಿಮಗೆ ಮಾದರಿಯಾಗಲಿ ಎಂದು ತಿಳಿಸಿದರು.