ನವದೆಹಲಿ : ಮುಖ್ಯಮಂತ್ರಿಗಳ ಬದಲಾವಣೆಯ ವಿಷಯ ಮಾಧ್ಯಮಗಳ ಸೃಷ್ಠಿಯಾಗಿದ್ದು, ಊಹಾಪೋಹಗಳಿಗೆ ಆಸ್ಪದವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಅವರು ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯದಲ್ಲಿ ಶಾಸಕರನ್ನು ಭೇಟಿ ಮಾಡುತ್ತಿರುವ ಉದ್ದೇಶ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯವಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದವರೇ ಮುಖ್ಯಮಂತ್ರಿಗಳ ಬದಲಾವಣೆಯ ಪ್ರಶ್ನೆಯನ್ನು ಅಲ್ಲಗೆಳೆದ ಮೇಲೆ , ಈ ವಿಷಯದ ಬಗ್ಗೆ ಊಹಾಪೋಹಗಳಿಗೆ ಆಸ್ಪದವಿಲ್ಲ. ಈ ಊಹಾಪೋಹಗಳನ್ನು ಮಾಧ್ಯಮಗಳ ಸೃಷ್ಟಿಯಾಗಿರುವುದೇ ಹೊರತು, ಕಾಂಗ್ರೆಸ್ ವಲಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯ ಚರ್ಚೆಯೇ ಆಗಿಲ್ಲ ಎಂದರು.
ಅಧಿಕಾರ ಹಸ್ತಾಂತರದ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ
ಈ ವಿಷಯದ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನವನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಹಮತಿಸಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದು, ವರಿಷ್ಠರ ತೀರ್ಮಾನಕ್ಕೆ ತಲೆಬಾಗುವುದಾಗಿ ನಾವಿಬ್ಬರೂ ಹಲವು ಬಾರಿ ತಿಳಿಸಿದ್ದೇನೆ. ಸರ್ಕಾರಕ್ಕೆ ಎರಡೂವರೆ ವರ್ಷವಾಗಿರುವ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ವಿಷಯವೇಳುವುದು ಸಹಜ. ಆದರೆ ಈ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ. ಇತ್ತೀಚೆಗಷ್ಟೇ ‘ಐದು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯಲಿದ್ದೇನೆ’ ಎಂದು ಸ್ಪಷ್ಟಪಡಿಸಿದ ಮೇಲೆ ಮಾಧ್ಯಮಗಳಲ್ಲಿ ಇಂತಹ ಗಾಳಿಸುದ್ದಿಗಳು ಏಕೆ ಹಬ್ಬಿಸಲಾಗುತ್ತಿದೆ ಎಂದು ಮರುಪ್ರಶ್ನಿಸಿದರಲ್ಲದೇ ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಗಳ ಸ್ಥಾನ ಖಾಲಿಯಿಲ್ಲವೇಂದು ಅವರೇ ತಿಳಿಸಿದ್ದಾರೆ ಎಂದರು.
ಶಾಸಕರ ಅಭಿಪ್ರಾಯ ಪಕ್ಷದ ವರಿಷ್ಠರ ತೀರ್ಮಾನವಲ್ಲ
ಕಾಂಗ್ರೆಸ್ ನ ಕೆಲ ಶಾಸಕರೇ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಅಭಿಪ್ರಾಯ ತಿಳಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೆಲವು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆಯೇ ಹೊರತು, ಇದು ಪಕ್ಷದ ತೀರ್ಮಾನವಲ್ಲ. ಅಧಿಕಾರ ಹಸ್ತಾಂತರದ ಊಹೆಗೆ ಯಾವುದೇ ಅರ್ಥವಿಲ್ಲ ಎಂದರು.
ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿಯ ಭೇಟಿ
ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಸಂಭವವಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಸಾಧ್ಯತೆಯಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಇಂದು ಸಂಜೆ ಭೇಟಿ ಮಾಡಿ, ಎಂ ಎಲ್ ಸಿ , ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಬಗ್ಗೆ ಚರ್ಚಿಸಲಾಗುವುದು ಎಂದರು.
ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ
ಕರ್ನಾಟಕದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಎಂದು ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ಪುನರುಚ್ಚರಿಸಿದ್ದೇವೆ ಎಂದರು. ಕರ್ನಾಟಕದ ಮುಖ್ಯಮಂತ್ರಿ ನಾನೇ ಎಂದರು. ಡಿ.ಕೆ.ಶಿವಕುಮಾರ್ ಆಗಲಿ ಅಥವಾ ಶಾಸಕರು ಯಾರೇ ಆಗಲಿ ಮುಖ್ಯಮಂತ್ರಿಯಾಗಬೇಕೆAಬ ಆಸೆ ಇಟ್ಟುಕೊಂಡಿದ್ದರೆ ಅದರಲ್ಲ ತಪ್ಪೇನಿಲ್ಲ ಎಂದರು.
ಸಚಿವ ಸಂಪುಟ ಪುನರ್ರಚನೆ ಬಗ್ಗೆ ಚರ್ಚೆಯಿಲ್ಲ
ಸಚಿವ ಸಂಪುಟ ಪುನರ್ರಚನೆ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡುತ್ತಾ, ಸಚಿವ ಸಂಪುಟ ಪುನರ್ರಚನೆ ಬಗ್ಗೆ ಯಾವುದೇ ಚರ್ಚೆಯಾಗುವುದಿಲ್ಲ ಎಂದರು.
ಜನೌಷಧಿ ಕೇಂದ್ರ ಬಂದ್-ಮಾಹಿತಿ ಪಡೆದು ಪ್ರತಿಕ್ರಿಯೆ
ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಜನೌಷಧಿ ಕೇಂದ್ರ ಬಂದ್ ಮಾಡಿರುವ ಆದೇಶಕ್ಕೆ ಹೈಕೋರ್ಟ್ ತಡೆನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡಲಾಗುವುದು ಎಂದರು.
ಸಚಿವಸಂಪುಟದಲ್ಲಿ ಚರ್ಚೆಯಾಗಿಲ್ಲ
ಸಿಬಿಎಸ್ ಸಿ ಕನ್ನಡ ಪತ್ರಿಕೆಯನ್ನು 125 ಅಂಕಗಳಿಂದ 100 ಕ್ಕೆ ಇಳಿಸುವ ಪ್ರಸ್ತಾಪ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಸಚಿವ ಸಂಪುಟದಲ್ಲಿ ಮಂಡನೆಯಾಗಲೀ, ಚರ್ಚೆಯಾಗಲೀ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಗ್ಯಾರಂಟಿ ಯೋಜನೆಗಳು ಸಮಾಜದ ಬಡವರ ಪರಿಸ್ಥಿತಿಯನ್ನು ಉತ್ತಮಪಡಿಸಿದೆ
ರಂಭಾಪುರಿ ಮಠದ ಸ್ವಾಮೀಜಿಗಳು ಗ್ಯಾರಂಟಿ ಯೋಜನೆಗಳಿಂದಾಗಿ ಜನ ಸೋಮಾರಿಗಳಾಗಿದ್ದಾರೆ ಎಂದು ಹೇಳೀಕೆ ನೀಡಿರುವ ಬಗ್ಗೆ ಮಾತನಾಡಿ ಯಾವ ಹಿನ್ನೆಲೆ ಅಥವಾ ಸಂದರ್ಭದಲ್ಲಿ ಸ್ವಾಮೀಜಿಗಳು ಈ ರೀತಿ ಹೇಳಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ ಹೆಣ್ಣುಮಕ್ಕಳು ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಿದರೆ ಸೋಮಾರಿಗಳಾಗುತ್ತಾರೆಯೇ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ 7 ಕೋಟಿ ಜನರಿದ್ದು ಅದರ ಅರ್ಧ ಭಾಗವಿರುವ 3.5 ಕೋಟಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸಿದರೆ ಹಣ ಉಳಿತಾಯವಾಗುತ್ತದೆ. ಅವರ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ 2000 ರೂ.ಗಳನ್ನು ಒದಗಿಸಿದರೆ ಅವರು ಮಕ್ಕಳನ್ನು ಓದಿಸುತ್ತಾರೆ ಎಂದರು.
ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ದೊರೆತಿರುವ ಸ್ವಾತಂತ್ರö್ಯ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು ಎಂದಿದ್ದರು. ಅವರು ಮೇಧಾವಿಗಳಾಗಿದ್ದು, ಅವರು ಹೇಳಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಜಾತಿ ಹೋಗಬೇಕಾದರೆ ಆರ್ಥಿಕವಾಗಿ ಸಬಲರಾಗಲು, ಸಮಾನತೆ ತರಲು ಸಮಾಜಿಕ ಆರ್ಥಿಕ ಶಕ್ತಿ ದೊರಕಬೇಕು ಎಂದರು. ದೇಶ ಕಂಡ ಮೇಧಾವಿಗಳಲ್ಲಿ ಅಪ್ರತಿಮ ಮೇಧಾವಿಗಳಾದ ಅಂಬೇಡ್ಕರ್ ಅವರು ದೇಶದಲ್ಲಿನ ಅಸಮಾನತೆ ಹೋಗದೇಹೋದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ. ಸಮಸಮಾಜದ ನಿರ್ಮಾಣಕ್ಕೆ ಜಾತೀಯತೆ, ವರ್ಗ ವ್ಯವಸ್ಥೆ ಹೋಗಬೇಕು ಎಂದಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಗಳು ಸಮಾಜದ ಬಡವರ ಪರಿಸ್ಥಿತಿಯನ್ನು ಉತ್ತಮಪಡಿಸಬಹುದು ಎಂದು ಸಾಕಷ್ಟು ಚರ್ಚೆಯ ನಂತರ ನಿರ್ಣಯ ಮಾಡಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬರುವುದು ಹಗಲು ಗನಸು
ಮೇಕೆದಾಟು ಅಣೆಕಟ್ಟು ನಾವು ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನಾವು ಅಧಿಕಾರಕ್ಕೆ ಬಂದ ಕೂಡಲೆ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲಾಗುವುದು ಎಂದು ಲೋಕಸಭಾ ಚುನಾವಣೆಯ ವೇಳೆ ಹೇಳುತ್ತಿದ್ದರು. ಈಗ ಯಾಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಅವರು ಅಧಿಕಾರಕ್ಕೆ ಬರುವುದಿಲ್ಲ. ಹಾಗೆಂದು ಮೇಕೆದಾಟು ಅಣೆಕಟ್ಟು ರಾಜ್ಯಕ್ಕೆ ಬೇಡವೆ ಎಂದು ಪ್ರಶ್ನಿಸಿದರು. ನಾನು ಜನತಾದಳದ (ಎಸ್) ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 2004 ಅತಿ ಹೆಚ್ಚು ಅಂದರೆ 59 ಸ್ಥಾನಗಳನ್ನು ಪಡೆದಿದ್ದೆವು. ಅವರ ಶಕ್ತಿ ಚುನಾವಣೆಯಿಂದ ಚುನಾವಣೆಗೆ ಕುಂಠಿತವಾಗಿದೆಯೇ ಹೊರೆತು ಹೆಚ್ಚಾಗಿಲ್ಲ. ಈಗ ಎಷ್ಟು ಸ್ಥಾನಗಳಿವೆ ಅವರಿಗೆ ಎಂದು ಪ್ರಶ್ನಿಸಿದ ಸಿಎಂ, ಅವರದ್ದು ಹಗಲು ಗನಸು ಎಂದರು.
ಕ್ಯಾಂಪಸ್ ಆಯ್ಕೆ ಪರಿಚಯಿಸಲು ಸರ್ಕಾರದ ಚಿಂತನೆ
ಕ್ಯಾಂಪಸ್ ಆಯ್ಕೆಯನ್ನು ವಿವಿ. ಕಾಲೇಜುಗಳಲ್ಲಿ ಪುನ: ಪರಿಚಯಿಸುವ ಬಗ್ಗೆ ಚಿಂತನೆ ಸರ್ಕಾರಕ್ಕಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅತಿ ಹೆಚ್ಚಿನ ಶಾಸಕರ ಬೆಂಬಲ ಸಿದ್ದರಾಮಯ್ಯ ಅವರಿಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅವರು ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಅವರನ್ನೇ ಪ್ರಶ್ನಿಸಿ ಎಂದರು.
ಸಿಎಂ ಪತ್ನಿಗೆ ನೋಟೀಸು : ವಿಷಯ ತಿಳಿದಿಲ್ಲ
ಮುಡಾ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯ ಮುಖ್ಯಮಂತ್ರಿಗಳ ಪತ್ನಿಗೆ ನೋಟೀಸು ಜಾರಿ ಮಾಡಲು ಆದೇಶ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನನಗೆ ತಿಳಿದಿಲ್ಲ, ಎಂದರು.
ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಹೆಚ್ಚಿನ ಹೋರಾಟ ಮಾಡುತ್ತಿದ್ದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಪೈಕಿ ಸಿದ್ದರಾಮಯ್ಯ ಅವರು ಮಾತ್ರ ಒಬಿಸಿ ಸಿಎಂ ಆಗಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಯಾರೋ ಒಬ್ಬರು ಇಬ್ಬರು ಹೇಳಿದರೆ ಅದು ಹೈ ಕಮಾಂಡ್ ಚರ್ಚೆ ಮಾಡಿದಂತೆ ಅಲ್ಲ ಎಂದರು.
ಬೆಂಗಳೂರು ಜನತೆ ಗಮನಕ್ಕೆ: ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ ತಾತ್ಕಾಲಿಕವಾಗಿ ಸ್ಥಗಿತ