ಮಂಡ್ಯ : ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಾಗಿಲ್ಲ. ರಾಜ್ಯದ ಮೂಲೆ ಮೂಲೆಗೂ ರಸಗೊಬ್ಬರ ಪೂರೈಕೆ ಮಾಡುವಾಗ ಸ್ವಲ್ಪ ವಿಳಂಬವಾಗುತ್ತಿದ್ದು, ಹೀಗಾಗಿ ರೈತರು ಗೊಂದಲಕ್ಕೆ ಒಳಗಾಗಬಾರದು ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.
ಮದ್ದೂರು ವಿಧಾನಸಭಾ ಕ್ಷೇತ್ರದ ಆತಗೂರು ಹೋಬಳಿಯ ಹೊಸಹಳ್ಳಿ, ವಳಗೆರೆದೊಡ್ಡಿ ಗ್ರಾಮಗಳಲ್ಲಿ ಅಂದಾಜು 1.50 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಎಲ್ಲೆಡೆ ಮುಂಗಾರು ಮಳೆಯಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ.
ಆದರೆ, ವಿರೋಧ ಪಕ್ಷಗಳಿಗೆ ಬೇರೆ ಕೆಲಸ ಇಲ್ಲ. ಆಗಾಗಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಾ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.
ರಾಜ್ಯದ ಮೂಲೆ ಮೂಲೆಗೂ ರಸಗೊಬ್ಬರ ಪೂರೈಕೆ ಮಾಡುವಾಗ ಸ್ವಲ್ವ ಮಟ್ಟಿಗೆ ವಿಳಂಬವಾಗುತ್ತಿದೆ. ಹೀಗಾಗಿ ಕೆಲವು ಕಡೆ ರೈತರು ತಳ್ಳಾಟ, ನೂಕಾಟ ನಡೆಸಿರಬೇಕು ಆದರೆ, ಎಲ್ಲಾ ರೈತರಿಗೂ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಸಮರ್ಪಕವಾಗಿ ಸರ್ಕಾರ ನಿಡಲಿದೆ ಹೀಗಾಗಿ ರೈತರು ಗೊಂದಲಕ್ಕೆ ಒಳಗಾಗಬಾರದು ಎಂದು ಶಾಸಕ ಉದಯ್ ಮನವಿ ಮಾಡಿದರು.
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ದೆಹಲಿ ಭೇಟಿಯಿಂದ ಯಾವುದೇ ರಾಜಕೀಯ ಬೆಳವಣಿಗೆಯಾಗುವುದಿಲ್ಲ. ಸಿಎಂ ಮತ್ತು ಡಿಸಿಎಂ ಪಕ್ಷ ಸಂಘಟನೆ, ನಿಗಮ, ಮಂಡಳಿ ಮತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಈ ಎಲ್ಲಾ ಕಾರ್ಯಕ್ರಮಗಳು ಪೂರ್ವಯೋಜಿತ ನಿಗದಿಯಾದ ಕಾರ್ಯಕ್ರಮಗಳಾಗಿವೆ. ಇದನ್ನೆ ರಾಜ್ಯದ ಮಹತ್ವದ ರಾಜಕೀಯ ಬೆಳವಣಿಗೆ ಎಂದು ಅರ್ಥ ಕಲ್ಪಿಸುವುದು ಅಗತ್ಯವಿಲ್ಲ ಎಂದರು.
ನಿಗಮ, ಮಂಡಳಿಯ ಯಾವುದೇ ಹುದ್ದೆಗೆ ನಾನು ಆಕಾಂಕ್ಷಿಯಲ್ಲ. ಕ್ಷೇತ್ರದ ಜನರಿಗೆ ಈ ಹಿಂದೆ ನೀಡಿದ ವಾಗ್ದಾನದಂತೆ ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದ್ದೇನೆ. ನನ್ನನ್ನು ಹೊರತುಪಡಿಸಿ ನಮ್ಮ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನ ಕೊಡಿಸುವ ಉದ್ದೇಶ ಹೊಂದಿದ್ದೇನೆ ಎಂದು ಶಾಸಕ ಉದಯ್ ಸ್ಪಷ್ಟಪಡಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ