ಬೆಂಗಳೂರು: ಸಾಂವಿಧಾನಿಕ ಅವಕಾಶಗಳಂತೆ ನ್ಯಾಯಾಲಯಗಳಲ್ಲಿ ಆಂಗ್ಲ ಭಾಷೆ ಬಳಸಬೇಕೆಂಬ ಸೂಚನೆಗಳಿದ್ದರೂ ಸ್ಥಳೀಯ ಭಾಷೆಯ ಬಳಕೆಗೆ ಯಾವುದೇ ನಿರ್ಬಂಧವಿಲ್ಲವೆನ್ನುವ ಅಂಶವನ್ನು ವಕೀಲರು ಗಮನಿಸಿ ತಮ್ಮ ವಾದ ಮಂಡನೆಯಲ್ಲಿ ಕನ್ನಡ ಬಳಕೆಗೆ ಮುಂದಾಗಬೇಕೆಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ನರೇಂದ್ರ ಪ್ರಸಾದ್ ಅವರು ಕರೆ ನೀಡಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಗುರುವಾರ ವಕೀಲರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡೇತರ ವಕೀಲರಿಗೆ ಕನ್ನಡ ಕಲಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಕೀಲರಿಗೆ ಕಕ್ಷಿದಾರ ಮುಖ್ಯನಾಗಬೇಕು. ನ್ಯಾಯಾಲಯದ ಪ್ರಕ್ರಿಯೆ ಅವನಿಗೆ ಅರ್ಥವಾಗುವಂತೆ ನಡೆದಾಗ ಮಾತ್ರ ನ್ಯಾಯದಾನ ಒದಗಲು ಸಾಧ್ಯ. ಹೀಗಾಗಿ ಎಲ್ಲ ವಕೀಲರು ಕನ್ನಡ ಕಲಿತು, ಕಕ್ಷಿದಾರರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು ಎಂದರು.
ರಾಜ್ಯಾದ್ಯಂತ ಕನ್ನಡ ಕಲಿಕಾ ಕೇಂದ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದ್ದು, ರಾಜ್ಯಾದ್ಯಂತ ಕನ್ನಡ ಕಲಿಕಾ ಕೇಂದ್ರಗಳನ್ನು ವಿಸ್ತರಿಸುವ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡೇತರ ವಕೀಲರಿಗೆ ಕನ್ನಡ ಕಲಿಸುವ ಯೋಜನೆಯನ್ನು ಪ್ರಾಧಿಕಾರವು ರೂಪಿಸಿದ್ದು, ಈ ಕಾರ್ಯಕ್ಕೆ ಸಹಕರಿಸಿದ ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಕ್ರಮ ಅಭಿನಂದನೀಯವೆಂದ ಬಿಳಿಮಲೆ, ಇತ್ತೀಚೆಗೆ ಪ್ರಾಧಿಕಾರದ ವತಿಯಿಂದ ೧೮೦ ಮದರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಿರುವ ಮಹತ್ವದ ಕಾರ್ಯವನ್ನು ಸ್ಮರಿಸಿದರು.
ಸ್ಥಳೀಯರೊಂದಿಗೆ ವ್ಯವಹರಿಸಬೇಕಾದರೆ ಕನ್ನಡೇತರರು ಕನ್ನಡವನ್ನು ಕಲಿಯುವುದು ಬಹಳ ಮುಖ್ಯವೆಂದ ಬಿಳಿಮಲೆ, ಇದು ವಿವಿಧ ರೀತಿಯ ಸಾಂಸ್ಕೃತಿಕ ಸಂಘರ್ಷಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು. ಸೌಹಾರ್ದ ಸಮಾಜ ನಿರ್ಮಾಣದಲ್ಲಿ ಭಾಷೆಯ ಪ್ರಾಮುಖ್ಯತೆ ಹಿರಿದಾಗಿದೆ ಎಂದ ಅವರು, ಕನ್ನಡೇತರರು ಹೆಮ್ಮೆಯಿಂದ ಕನ್ನಡವನ್ನು ಕಲಿತಾಗ ಮಾತ್ರ ಈ ಆಶಯವು ಈಡೇರಲು ಸಾಧ್ಯವಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ ಬಿ. ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 9 IAF ಅಧಿಕಾರಿಗಳಿಗೆ ವೀರ ಚಕ್ರ ಪದಕ