ಬೆಂಗಳೂರು: “ಜನಪರ ಉದ್ದೇಶ, ಅರ್ಥಗರ್ಭಿತ ಕಾರಣವಿಲ್ಲದ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
“ಎಸ್.ಎಂ ಕೃಷ್ಣ ಅವರು ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ದರು. ಭಾರತವನ್ನು ಒಂದುಗೂಡಿಸಲು, ಬೆಲೆ ಏರಿಕೆ, ನಿರುದ್ಯೋಗ ಖಂಡಿಸಿ, ಭ್ರಷ್ಟಾಚಾರ ವಿರುದ್ಧ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ್ದರು. ನಾವು ಗಣಿ ಲೂಟಿ ಖಂಡಿಸಿ ರಾಜ್ಯ ಹಾಗೂ ದೇಶದ ಸಂಪತ್ತು ರಕ್ಷಣೆಗೆ ಬಳ್ಳಾರಿ ಪಾದಯಾತ್ರೆ ಮಾಡಿದೆವು. ಕಾವೇರಿ ಜಲಾನಯನದ 10 ಜಿಲ್ಲೆಗಳಿಗೆ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ್ದೆವು” ಎಂದು ತಿಳಿಸಿದರು.
“ಈಗ ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆ ಸದ್ದಿದೆಯಾ? ಅವರ ಪಾದಯಾತ್ರೆಯ ವಿಚಾರವೇನು? ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾಗದೇ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಪಾದಯಾತ್ರೆಯಲ್ಲಿ ಬೇರೆ ಏನಾದರೂ ಮಹತ್ವದ ವಿಚಾರವಿದೆಯೇ? ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆ ನೋಡುತ್ತಿದ್ದಾರೆ. ಅವರ ಪಾದಯಾತ್ರೆಗೆ ಜನರಿಂದ ಸ್ಪಂದನೆಯಿಲ್ಲ. ಪಾದಯಾತ್ರೆಯಲ್ಲಿ ಜನತಾದಳದ ಕಾರ್ಯಕರ್ತರೇ ಇಲ್ಲ. ಅವರು ಪಾದಯಾತ್ರೆಯಲ್ಲಿ ಹೊಡೆದಾಡಲಿ ಏನಾದರೂ ಮಾಡಿಕೊಳ್ಳಲಿ” ಎಂದು ತಿಳಿಸಿದರು.
“ರಾಮನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ಎಷ್ಟು ಜನ ಜೆಡಿಎಸ್ ಕಾರ್ಯಕರ್ತರು ಇದ್ದರು ಎಂಬುದನ್ನು ಮಾಧ್ಯಮಗಳ ಬಳಿ ಇರುವ ವಿಡಿಯೋಗಳಲ್ಲಿ ನೋಡಿ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಿಜೆಪಿ ಕಾರ್ಯಕರ್ತರನ್ನು ಪಾದಯಾತ್ರೆಗೆ ಕರೆಸಲಾಗಿದೆ. ಅವರಲ್ಲಿ ಹೊಂದಾಣಿಕೆ ಎಲ್ಲಿದೆ? ಒಗ್ಗಟ್ಟು ಎಲ್ಲಿದೆ? ಅವರ ನಡುವೆ ಸಮನ್ವಯತೆ ಇಲ್ಲ ಎಂದು ಅವರೇ ಹೇಳಿದ್ದಾರೆ. ಅವರು ಒಂದಾಗಿರಲಿ ಅಥವಾ ಬೇರೆಯಾಗಿರಲಿ ನಮಗೆ ಯಾವುದೇ ಅಭ್ಯಂತರವಿಲ್ಲ” ಎಂದು ತಿಳಿಸಿದರು.
ಕುಮಾರಸ್ವಾಮಿ ವಿಚಾರದಲ್ಲಿ ರಾಜ್ಯಪಾಲರ ನಡೆ ಏನೆಂದು ಕಾದು ನೋಡಬೇಕು:
ಕುಮಾರಸ್ವಾಮಿ ಅವರು 2007ರಲ್ಲಿ ಸಿಎಂ ಆಗಿದ್ದಾಗ ಸಂಡೂರು 550 ಎಕರೆ ಅಕ್ರಮವಾಗಿ ಗಣಿಗಾರಿಕೆಗೆ ನೀಡಿದ ಬಗ್ಗೆ ರಾಜ್ಯಪಾಲರು ವಿಚಾರಣೆಗೆ ನೀಡಲು ಹಿಂದೇಟು ನೀಡುತ್ತಿದ್ದಾರೆ ಎಂದು ಕೇಳಿದಾಗ, “ಈ ವಿಚಾರವಾಗಿ ಮಾಧ್ಯಮ ವರದಿ ಬಂದಿದೆ ಎಂದು ಕೇಳಿದೆ. ನಾನು ಅದನ್ನು ನೋಡಿಲ್ಲ. ಆ ಪ್ರಕರಣದಲ್ಲಿ ಚಾರ್ಜ್ ಶೀಟ್ ಆಗಿದೆ, ಸುಪ್ರೀಂ ಕೋರ್ಟ್ ನಿಂದ ವಿಚಾರಣೆಗೆ ಬಂದಿದೆ, ಈ ಬಗ್ಗೆ ತನಿಖೆ ಮಾಡಲು ಹೇಳಿದ್ದರಂತೆ. ಸುಪ್ರೀಂ ಕೋರ್ಟ್ ವಿಚಾರಣೆ ನಂತರ ಲೋಕಾಯುಕ್ತ ತನಿಖೆ ಮಾಡಿ ಕುಮಾರಸ್ವಾಮಿ ಅವರ ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೇಳಿದರಂತೆ. ರಾಜ್ಯಪಾಲರು ಆ ಕಡತವನ್ನು ತಮ್ಮಲ್ಲೇ ಇರಿಸಿಕೊಂಡಿದ್ದಾರೆ ಎಂದು ನನಗೆ ಮಾಹಿತಿ ನೀಡಿದರು. ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಪರಿಶೀಲಿಸಬೇಕು. ಜಂತಕಲ್ ಹಾಗೂ ಇತರೆ ಗಣಿ ವಿಚಾರವಾಗಿ ಮಧ್ಯಮ ಸ್ನೇಹಿತರೆ ನನಗೆ ಮಾಹಿತಿ ಕಳುಹಿಸಿದ್ದು, ಅದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಿದೆ. ಈ ವಿಚಾರವಾಗಿ ರಾಜ್ಯಪಾಲರು ಯಾವ ತೀರ್ಮಾನ ಮಾಡುತ್ತಾರೆ ಎಂದು ಕಾದುನೋಡೋಣ” ಎಂದು ತಿಳಿಸಿದರು.
ಕುಟುಂಬದವರ ರಕ್ಷಣೆ, ನಮ್ಮನ್ನು ಒಳಗೆ ಹಾಕಿಸಲು ಪ್ರಯತ್ನ ನಡೆಯುತ್ತಿದೆ:
ದೇವೇಗೌಡರು ನಿನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, “ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಿಕೊಳ್ಳಲು ಅವರು ಹೋಗಲೇ ಬೇಕಲ್ಲವೇ? ನಮ್ಮ ವಿರುದ್ಧ ದೂರು ನೀಡಿ, ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಒಳಗೆ ಹಾಕಲೇಬೇಕು ಎಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ನಾನು ಎಲ್ಲದಕ್ಕೂ ಸಿದ್ಧವಿದ್ದೇನೆ” ಎಂದು ತಿಳಿಸಿದರು.
ದಿನಾ ಸಾಯುವವರಿಗೆ ಅಳುವವರಾರು?
ಸಿಎಂ ಹಾಗೂ ಡಿಸಿಎಂ ಅವರನ್ನು ಚಕ್ರವ್ಯೂಹಕ್ಕೆ ಸಿಲುಕಿಸಿದರೆ ಸರ್ಕಾರ ಪತನ ಸುಲಭ ಎಂಬುದು ಅವರ ಲೆಕ್ಕಾಚಾರವೇ ಎಂದು ಕೇಳಿದಾಗ, “ನಮ್ಮ ಹಳ್ಳಿ ಕಡೆ ಹೇಳುವಂತೆ ದಿನಾ ಸಾಯುವವರಿಗೆ ಅಳುವವರಾರು? ದಿನಾ ಬೆಳಗ್ಗೆ ಇವರ ಗೋಳು ಇದ್ದದ್ದೆ. ಮುಂಚೆಯಿಂದಲೂ ಇದರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದು, ಈಗಲೂ ಹೋರಾಟ ಮುಂದುವರಿಸುತ್ತೇವೆ” ಎಂದು ತಿಳಿಸಿದರು.
ಶುಭ ದಿನ, ಗಳಿಗೆ, ನಕ್ಷೆತ್ರ ನೋಡಿ ಕುಮಾರಸ್ವಾಮಿ ಸಹೋದರನ ಆಸ್ತಿ ದಾಖಲೆ ಬಿಡುಗಡೆ: ಡಿಸಿಎಂ ಡಿ.ಕೆ ಶಿವಕುಮಾರ್
7ನೇ ವೇತನ ಆಯೋಗ : ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ | 7th Pay Commission
BREAKING :`PG’ ವೈದ್ಯರ ಕಡ್ಡಾಯ ಸೇವಾ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ | Karnataka High Court