ಬೆಂಗಳೂರು: ಮೀಸಲಾತಿಗೂ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ, ಹೀಗಾಗಿ ವೀರಶೈವ ಲಿಂಗಾಯತರು ಗಣತಿ ವೇಳೆ ನೈಜ ಮಾಹಿತಿ ನೀಡುವಂತೆ ಮನವಿ ಮಾಡಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಧರಿಸಿದೆ ಎಂದು ಮಹಾಸಭಾದ ಹಿರಿಯ ಉಪಾಧ್ಯಕ್ಷ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಮೀಸಲಾತಿ ದೊರಕಬಹುದು ಎಂದು ತಮ್ಮ ಉಪಜಾತಿಗೆ ಸಮೀಪದ ಮತ್ತೊಂದು ಜಾತಿಯ ಹೆಸರು ಬರೆಸುತ್ತಿದ್ದಾರೆ. ಈ ಸಮೀಕ್ಷೆಯ ವರದಿ ಗೌಪ್ಯವಾಗಿದ್ದು, ಇದರಿಂದ ಜಾತಿ ಪ್ರಮಾಣ ಪತ್ರ ಲಭಿಸುವುದಿಲ್ಲ ಎಂದು ತಿಳಿಸಿದರು.
ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಅವರ ಅನುಪಸ್ಥಿತಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿಯೇ ನಡೆದ ಸಚಿವರು, ಶಾಸಕರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸುಳ್ಳು ಸತ್ಯ ಆಗಲ್ಲ:
ಬಿಜೆಪಿಯವರು ಧರ್ಮಸ್ಥಳ ವಿಚಾರದಲ್ಲಿ ಯಾತ್ರೆ ಮಾಡುತ್ತಾ ಮಿಥ್ಯಾರೋಪ ಮಾಡುತ್ತಿದ್ದಾರೆ, ಸುಳ್ಳು ಎಷ್ಟೇ ಸಾರಿ ಹೇಳಿದ್ರು ಅದು ಸತ್ಯ ಆಗಲು ಸಾಧ್ಯವಿಲ್ಲ ಎಂದು ಈಶ್ವರ ಖಂಡ್ರೆ ತಿರುಗೇಟು ನೀಡಿದರು.
ಧರ್ಮಸ್ಥಳದ ಬಗ್ಗೆ ನಮಗೂ ಗೌರವ ಇದೆ. ನಾವೂ ಮಂಜುನಾಥನ ಭಕ್ತರೇ, ನಮಗೂ ಭಕ್ತಿ ಗೌರವ ಎಲ್ಲವೂ ಇದೆ. ಜನರ ಮನದಲ್ಲಿ ಮೂಡಿದ ಶಂಕೆ ನಿವಾರಿಸುವ ಜವಾಬ್ದಾರಿ ಹೊತ್ತ ಸರ್ಕಾರ ನ್ಯಾಯಸಮ್ಮತವಾಗಿ ತನಿಖೆ ನಡೆಸುತ್ತಿದೆ. ಪಾರದರ್ಶಕವಾಗಿ ಎಲ್ಲ ಆಯಾಮದಲ್ಲೂ ತನಿಖೆ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ನಾಟಕ ಮಾಡುವುದನ್ನು ನಿಲ್ಲಿಸಿ, ಸರ್ಕಾರದೊಂದಿಗೆ ಸಹಕರಿಸಲಿ ಎಂದರು.
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ