ಮೈಸೂರು/ ಬೆಂಗಳೂರು: “ಉದಯಗಿರಿಯಲ್ಲಿ ಕಲ್ಲು ತೂರಾಟ ಮಾಡಿರುವವರು 15- 16 ವರ್ಷದ ಹುಡುಗರು. ಈ ವೇಳೆ ಪೊಲೀಸರು ಅತ್ಯುತ್ತಮವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಯಾರಿಗೂ ಅಪಾಯವಾಗದ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಿದ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ತಿಳಿಸುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಮೈಸೂರಿನ ಗಲಭೆ ಪೀಡಿತ ಪ್ರದೇಶ ಉದಯಗಿರಿಗೆ ಬುಧವಾರ ಭೇಟಿ ನೀಡಿದ ನಂತರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು, “ಇಲ್ಲಿ ಯಾರೇ ತಪ್ಪು ಮಾಡಿದ್ದರೂ ತಪ್ಪು. ಯಾವುದೇ ರೀತಿಯ ತಪ್ಪು ನಡೆದಿದ್ದರೂ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ನಾನು ಪೊಲೀಸರಿಂದ ವರದಿ ತರಿಸಿಕೊಂಡಿದ್ದೇನೆ. ಘಟನೆ ನಡೆದ ತಕ್ಷಣ ಮುಸಲ್ಮಾನ ಸಮುದಾಯದ ಹಿರಿಯ ಮುಖಂಡರುಗಳು ಬಂದು ಪರಿಸ್ಥಿತಿ ನಿಭಾಯಿಸಿದ್ದಾರೆ. ಗಲಾಟೆ ತಡೆಯಲು ಬಂದ ಮುಸ್ಲಿಂ ಮುಖಂಡರಿಗೂ ಏಟುಗಳು ಬಿದ್ದಿವೆ. ಪೊಲೀಸ್ ಅಧಿಕಾರಿ ಮುತ್ತುರಾಜ್ ಅವರ ಕಾಲಿಗೂ ಏಟಾಗಿದೆ. ಈ ವಿಡಿಯೋವನ್ನು ನಾನು ನೋಡಿದ್ದೇನೆ” ಎಂದು ಹೇಳಿದರು.
ಮೈಸೂರಿನ ಉದಯಗಿರಿಯಲ್ಲಿನ ಗಲಭೆ ಹಾಗೂ ಈ ಪ್ರಕರಣದಲ್ಲಿ ಪೊಲೀಸರದ್ದೇ ತಪ್ಪಿದೆ ಎನ್ನುವ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸಚಿವರ ಹೇಳಿಕೆ ಕುರಿತು ಮುಖ್ಯಮಂತ್ರಿಗಳು, ಗೃಹಸಚಿವರು ಉತ್ತರಿಸಲಿದ್ದಾರೆ. ಉದಯಗಿರಿ ಪ್ರಕರಣದಲ್ಲಿ ಪೊಲೀಸ್ ನವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಯಾರು ಏನು ಪದ ಬಳಸಿದ್ದಾರೆ ಎಂಬುದು ಗೊತ್ತಿಲ್ಲ. ಪೊಲೀಸ್ ಅವರಿಗಾದರೆ ರಕ್ಷಣೆಯಿತ್ತು, ಅಲ್ಲಿದ್ದ ಸಾರ್ವಜನಿಕರಿಗೆ ಅದೂ ಇರಲಿಲ್ಲ” ಎಂದರು.
ಪೊಲೀಸರ ಪರವಾಗಿ ಇಲ್ಲಿಯೇ ನಿಂತು ಮಾತನಾಡುತ್ತಿದ್ದೇನೆ
ಸರ್ಕಾರ ಪೊಲೀಸರ ಪರವಾಗಿ ನಿಲ್ಲುತ್ತದೆಯೇ ಎಂದು ಕೇಳಿದಾಗ, “ನಾನು ಡಿಸಿಎಂ ಆಗಿ ಘಟನೆ ನಡೆದ ಇದೇ ಭೂಮಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಇದಕ್ಕಿಂತ ಅಧಿಕೃತ ಹೇಳಿಕೆ ಇನ್ಯಾರದ್ದು ಬೇಕು? ಮುಖ್ಯಮಂತ್ರಿಗಳು ಚೇತರಿಸಿಕೊಳ್ಳಲು ಎಂಟತ್ತು ದಿನಗಳು ಬೇಕು, ಆನಂತರ ಅವರು ಇದರ ಬಗ್ಗೆ ಮಾತನಾಡುತ್ತಾರೆ” ಎಂದರು.
ಎಫ್ ಐಆರ್ ಹಾಕಲು ತಡವಾದ ಕಾರಣಕ್ಕೆ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ ಎಂದಾದರೆ ಗಲಭೆಕೋರರ ಮನಸ್ಥಿತಿ ಎಂತಹದ್ದು ಎಂದು ಕೇಳಿದಾಗ, “ಪೊಲೀಸರು ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ. ಗಲಭೆಯಲ್ಲಿ ಉಂಟಾದ ಹಾನಿಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಕ್ಯಾಮೆರಾದಲ್ಲಿ ದಾಖಲಾದ ವಿವರಗಳನ್ನು ಸಂಗ್ರಹಿಸುತ್ತಿದ್ದು, ತಪ್ಪು ಮಾಡಿದ ಎಲ್ಲರ ಮೇಲೆಯೂ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದರು.
ಅವರು ಹಿರಿಯ ನಾಯಕರು, ನಾನು ಕಾರ್ಯಕರ್ತ
ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಅವರ ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, “ಅವರು ದೊಡ್ಡವರು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರೆಲ್ಲಾ ಪಕ್ಷದ ಹಿರಿಯ ನಾಯಕರು ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ” ಎಂದು ಕುಟುಕಿದರು.
ಕೆ.ಎನ್,ರಾಜಣ್ಣ ಅವರು ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆಯನ್ನು ಪದೇ, ಪದೇ ನೀಡುತ್ತಿರುತ್ತಾರೆ ಎಂದು ಕೇಳಿದಾಗ, “ಇದರ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡುತ್ತಾರೆ” ಎಂದರು.