ಮಂಡ್ಯ : ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಮೇಯವಿಲ್ಲ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಶನಿವಾರ ಸ್ಪಷ್ಟಪಡಿಸಿದರು.
ಮದ್ದೂರು ನಗರದ ವಿವಿ ನಗರದ ಬಳಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 16 ಕೋಟಿ ರೂ ವೆಚ್ಚದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಮುಂದೆ 13 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕ ಉದಯ್ ಅವರು, ಮದ್ದೂರು ಕ್ಷೇತ್ರದ ಜನತೆ ಅಭಿವೃದ್ಧಿ ದೃಷ್ಟಿಯಿಂದ ನನ್ನನ್ನು ಭಾರಿ ನಿರೀಕ್ಷೆಯೊಂದಿಗೆ ಮೊದಲ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ರೈತರು, ಬಡವರು, ಶ್ರಮಿಕರಿಗೆ ಸಹಾಯ ಮಾಡುವ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಕೆಲಸ ಮಾಡುತ್ತಿದ್ದೇನೆ ವಿನಃ ಪ್ರತಿಭಟನೆ, ಮುಷ್ಕರ ಮಾಡುತ್ತಿರುವವರಿಗೆ ಉತ್ತರ ನೀಡುವಷ್ಟು ನನಗೆ ಸಮಯವಿಲ್ಲ ಹೀಗಾಗಿ, ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಮೇಯವಿಲ್ಲ ಎಂದು ತಿಳಿಸಿದರು.
ನಗರಸಭೆಯಾಗಿ ಮೇಲ್ದರ್ಜೆಯಾದ ಬಳಿಕ ಗೆಜ್ಜಲಗೆರೆಯ ಕೆಲವು ಸಂಘಟನೆಗಳು ನಗರಸಭೆಗೆ ಸೇರ್ಪಡೆ ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರು.
ಬಳಿಕ ಸಭೆ ನಡೆಸಿ ಮಾತುಕತೆ ನಡೆಸೋಣ ಎಂದು ಭರವಸೆ ನೀಡಿದ್ದೆ. ಆದರೆ ಅವರು ಏಕಾಏಕಿ ಹೈಕೋರ್ಟ್ ಮೊರೆ ಹೋದರು. ಸಂಘಟನೆಯವರು ನನ್ನನ್ನು ಭೇಟಿ ಮಾಡಿದ್ದರೆ ಕಾನೂನಿನ ವ್ಯವಸ್ಥೆಯಲ್ಲಿಯೇ ಸಹಾಯ ಮಾಡುತ್ತಿದ್ದೆ, ಆದರೆ, 50 ಜನ ನಗರಸಭೆ ಬೇಡ ಅಂತ ಹೋರಾಟ ಮಾಡ್ತಿದ್ದಾರೆ. 50 ಸಾವಿರ ಜನ ನಗರಸಭೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ಬೆಂಬಲ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಂಘಟನೆಗೆ ತಿರುಗೇಟು ನೀಡಿದರು.
ಈಗಾಗಲೇ ನಗರಸಭೆ ವ್ಯಾಪ್ತಿಗೆ ಸೇರಿರುವ ನಾಲ್ಕು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಮತ್ತು ಕುಡಿಯುವ ನೀರು ಯೋಜನೆಗೆ 200 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರ ಜೊತೆಗೆ ನಗರದಲ್ಲಿ ಮಾರುಕಟ್ಟೆ, ವಿದ್ಯುತ್ ಚಿತಾಗಾರ ಸೇರಿದಂತೆ ಹಲವು ಯೋಜನೆಗಳಿಗೆ ಒಂದು ತಿಂಗಳೊಳಗೆ ಹಂತ ಹಂತವಾಗಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೇವಲ ಎರಡುವರೇ ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ 1800 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಪರ್ವ ನಡೆಯುತ್ತಿರುವ ಜನತೆಯ ಕಣ್ಣ ಮುಂದಿದೆ. ರೈತರ ದಶಕಗಳ ಬೇಡಿಕೆಯಾದ ಕೆಮ್ಮಣ್ಣು ನಾಲಾ ಕಾಮಗಾರಿ ಇನ್ನು ಒಂದುವರೇ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಬೇಸಿಗೆ ಬೆಳೆಗೆ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಜೊತೆಗೆ ಪೇಟೆ ಬೀದಿ ಅಗಲೀಕರಣ, ಒಳಚರಂಡಿ ಕಾಮಗಾರಿ, ಬೈರನ್ ನಾಲೆ, ಸೋಮನಹಳ್ಳಿಯಲ್ಲಿ 220 ಕೆವಿ ವಿದ್ಯುತ್ ಸಬ್ ಸ್ಟೇಷನ್ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಒಂದು ವರ್ಷದೊಳಗೆ ಮದ್ದೂರು ನಗರದ ಚಿತ್ರಣವೇ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ್, ನಗರಸಭಾ ಮಾಜಿ ಸದಸ್ಯರಾದ ಸಚ್ಚಿನ್, ಸಿದ್ದರಾಜು, ಕಮಲ್ ನಾಥ್, ಬಸವರಾಜು, ಮಹಾಲಿಂಗಯ್ಯ, ಇಂತಿಯಾಜ್, ಶಾಂತಮ್ಮ, ಆರೀಫ್, ಮರಿದೇವರು ನಗರಸಭಾ ಪೌರಾಯುಕ್ತೆ ರಾಧಿಕಾ, ಕಾವೇರಿ ನೀರಾವರಿ ನಿಗಮದ ಎಇಇ ನಾಗರಾಜ್, ಸ್ಲಂ ಬೋರ್ಡ್ ಇಇ ನಡಾಫ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ವಾಹನ ತಪಾಸಣೆ, ಪರಿಶೀಲನೆ ವೇಳೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಚಾಲಕರೊಂದಿಗೆ ಗೌರವದಿಂದ ವರ್ತಿಸಿ: ರಾಜ್ಯ ಸರ್ಕಾರ ಆದೇಶ
BREAKING : ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ ; ಕನ್ನಡಿಗ ‘ಕೆ.ಎಲ್ ರಾಹುಲ್’ಗೆ ಸ್ಥಾನ!








