ಶಿವಮೊಗ್ಗ : ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ 65 ಕೆವಿ ಜನರೇಟರ್ ಕಳ್ಳತನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಗರ ಮಂಡಲದಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಜನರೇಟರ್ ಕಳ್ಳತನದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಲಾಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಎಸಿ ಕಚೇರಿ ಮುಂದೆ ಸಾಗರ ಬಿಜೆಪಿ ನಗರ ಮಂಡಲದಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜನರೇಟರ್ ಕದ್ದವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದಂತ ಸಾಗ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬೆಲೆಬಾಳುವ ಜನರೇಟರ್ ಕಳ್ಳತನವಾಗಿದೆ. ಸದಾ ಜನಜಂಗುಳಿಯಿಂದ ಕೂಡಿರುವ ಆಸ್ಪತ್ರೆ ಆವರಣದಿಂದ ಜನರೇಟರ್ ಕಳ್ಳತನ ಮಾಡಿದ್ದಾರೆ ಎಂದರೆ ಯಾವುದೋ ಕಾಣದ ಶಕ್ತಿ ಇದರ ಹಿಂದೆ ಇದೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಕಳೆದ ಎರಡೂವರೆ ವರ್ಷದಿಂದ ಕ್ಷೇತ್ರವ್ಯಾಪ್ತಿಯಲ್ಲಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಆಸ್ಪತ್ರೆಯ ಅಗತ್ಯಕ್ಕೆ ಬೇಕು ಎಂದು ಒಟ್ಟು ಆರು ಜನರೇಟರ್ ಹಾಲಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ಮಂಜೂರು ಮಾಡಲಾಗಿತ್ತು. ಈ ಪೈಕಿ ಮೂರು ಜನರೇಟರ್ ಕಳೆದು ಹೋಗಿದೆ ಎಂದು ದೂರಿದರು.
ಸಾಗರದಲ್ಲಿ ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಹಳಿ ತಪ್ಪಿದೆ. 31 ವೈದ್ಯರು ಇದ್ದ ಕಡೆ ಈಗ 16 ವೈದ್ಯರು ಇದ್ದಾರೆ. ಉತ್ತಮ ಕೆಲಸ ಮಾಡುವ ವೈದ್ಯರನ್ನು ವರ್ಗಾವಣೆ ಮಾಡಲಾಗುತ್ತಿದೆ. ಸೂಕ್ತ ಆರೋಗ್ಯ ಸೌಲಭ್ಯ ಸಿಗದೆ ರೋಗಿಗಳು ಫಜೀತಿ ಪಡುತ್ತಿದ್ದಾರೆ. ಆಸ್ಪತ್ರೆಯ ಜನರೇಟರ್ ಕಳ್ಳತನವಾಗಿರುವುದು ಆರೋಗ್ಯ ರಕ್ಷಾ ಸಮಿತಿಗೆ ಶಾಸಕರಿಗೆ ಇಷ್ಟು ದಿನಗಳವರೆಗೆ ಏಕೆ ಗೊತ್ತಾಗಿಲ್ಲ. ತಕ್ಷಣ ಜನರೇಟರ್ ಕಳವು ಆಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ದ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ಜನರೇಟರ್ ಕಳ್ಳತನ ಆಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾಲ್ಕಾರು ಕ್ವಿಂಟಾಲ್ ಭಾರದ ಜನರೇಟರ್ ಕಳ್ಳತನವಾಗಿದ್ದು ಹೇಗೆ? ಇದರ ಹಿಂದೆ ಇರುವವರು ಯಾರು ಎನ್ನುವುದು ತನಿಖೆ ನಡೆಸಬೇಕು. ಆಡಳಿತ ವೈಫಲ್ಯವೇ ಇದಕ್ಕೆ ಕಾರಣ. ಕಳ್ಳರನ್ನು ವಶಕ್ಕೆ ಪಡೆಯುವವರೆಗೂ ಬಿಜೆಪಿ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಮುಖಂಡರಾದಂತ ಪ್ರೇಮ ಸಿಂಗ್, ಪರಶುರಾಮ್, ಶ್ರೀನಿವಾಸ್ ಮೇಸ್ತ್ರಿ, ಸುಧಾ, ಶ್ವೇತಾ, ರಾಯಲ್ ಸಂತೋಷ್, ಕೃಷ್ಣ ಶೇಟ್, ಅರುಣ ಕುಗ್ವೆ, ಬಿ.ಟಿ.ರವೀಂದ್ರ, ಪ್ರದೀಪ್ ಆಚಾರಿ ಸೇರಿದಂತೆ ಇತರರು ಹಾಜರಿದ್ದರು.
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು
BREAKING: ಬೆಂಗಳೂರು ಕಾಲ್ತುಳಿತ ದುರಂತ: IPS ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದು