ಚಿತ್ರದುರ್ಗ: ಮಾಧ್ಯಮಗಳು ಗಾಳಿ ಸುದ್ದಿಗಳಿಗೆ ಗವಾಕ್ಷಿಗಳಾಗದೆ ಸತ್ಯಕ್ಕೆ ಕಿಟಕಿಗಳಾಗಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಚಿತ್ರದುರ್ಗ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲೆಲ್ಲಾ ಸಮಾಜದಲ್ಲಿ ಗಾಳಿ ಸುದ್ದಿಗಳು ವ್ಯಾಪಿಸಿದಾಗ ಸತ್ಯ ತಿಳಿಯಲು ಜನರು ಮಾಧ್ಯಮಗಳನ್ನು ಗಮನಿಸುತ್ತಿದ್ದರು. ಈಗ ಮಾಧ್ಯಮಗಳೇ ಗಾಳಿ ಸುದ್ದಿಗಳಿಗೆ ಮನಸೋತಿರುವುದರಿಂದ ಜನರಿಗೆ ಸತ್ಯ ಮತ್ತು ಸುಳ್ಳಿನ ನಡುವೆ ವ್ಯತ್ಯಾಸವೇ ಗೊತ್ತಿಲ್ಲದಂತಾಗಿದೆ ಎಂದರು.
ಪತ್ರಿಕಾ ವೃತ್ತಿಯ ಆದ್ಯತೆಗಳೇ ಈಗ ತಲೆ ಕೆಳಗಾಗಿದ್ದು, ಅಭಿವೃದ್ಧಿ-ತನಿಖಾ ಪತ್ರಿಕೋದ್ಯಮ ಹೋಗಿ ಹೇಳಿಕೆ ಪತ್ರಿಕೋದ್ಯಮ ಮಾತ್ರ ಉಳಿದಿದೆ ಎಂದರು.
ಸುಳ್ಳು ಸುದ್ದಿ ಮತ್ತು ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಅತ್ಯಂತ ಅಪಾಯಕಾರ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಮೊದಲು ಸುದ್ದಿ ಕೊಡಬೇಕು ಎನ್ನುವ ಧಾವಂತದಲ್ಲಿ ಸತ್ಯವನ್ನು ಮುಲಾಜಿಲ್ಲದೆ ಸಾಯಿಸುವುದು ವೃತ್ತಿಪರತೆಗೆ ಧಕ್ಕೆಯಾಗುತ್ತದೆ ಎಂದರು.
ಬ್ರೇಕಿಂಗ್ ಸುದ್ದಿಗಳ ಭರಾಟೆಯಲ್ಲಿ ಸಂಬಂಧಗಳನ್ನು, ಸಮಾಜವನ್ನು ಬ್ರೇಕ್ ಮಾಡಬಾರದು ಎಂದು ಮನವಿ ಮಾಡಿದರು. ಪತ್ರಿಕೋದ್ಯಮದಲ್ಲಿ ಆದಾಯಕ್ಕೆ ಕೊರತೆ ಇದ್ದಾಗಲೂ ಸತ್ಯಕ್ಕೆ ಬಡತನ ಬಂದಿರಲಿಲ್ಲ. ಈಗ ಆದಾಯಕ್ಕೆ ಕೊರತೆ ಇಲ್ಲ, ಸತ್ಯಕ್ಕೆ ಬಡತನ ಬಂದಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಪತ್ರಕರ್ತರ ಹಲವು ಬೇಡಿಕೆಗಳನ್ನು ಪಟ್ಟಿ ಮಾಡಿದಾಗ ಮಾನ್ಯ ಮುಖ್ಯಮಂತ್ರಿಗಳು ಮೊದಲಿಗೆ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಸಮಸ್ಯೆಯನ್ನು ಕೈಗೆತ್ತಿಕೊಂಡರು. ಏಕೆಂದರೆ ಮಹಾತ್ಮಗಾಂಧಿಜಿಯವರ ಗ್ರಾಮ ಸ್ವರಾಜ್ಯ ಕನಸು ನನಸಾಗಬೇಕಾದರೆ ಗ್ರಾಮೀಣ ಪತ್ರಕರ್ತರ ವೃತ್ತಿಪರತೆ ಅತೀ ಮುಖ್ಯ ಎನ್ನುವುದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ನೈಜ ವರದಿಗಾರಿಕೆ, ಕಾಳಜಿಯ ವರದಿಗಳು ಹೆಚ್ಚಾಗಿ ಗ್ರಾಮೀಣ ಪತ್ರಕರ್ತರಿಂದಲೇ ವರದಿಯಾಗುತ್ತಿರುವುದನ್ನು ಮುಖ್ಯಮಂತ್ರಿಗಳು ಗಮನಿಸಿದ್ದಾರೆ. ಹೀಗಾಗಿ ಗ್ರಾಮೀಣ ಪತ್ರಕರ್ತರ ಮೇಲೆ ಮುಖ್ಯಮಂತ್ರಿಗಳಿಗೆ ಬಹಳ ನಿರೀಕ್ಷೆ ಇದೆ. ಈ ನಿರೀಕ್ಷೆ ಸುಳ್ಳಾಗದಿರಲಿ ಎಂದು ಬಯಸುತ್ತೇನೆ ಎಂದರು.
ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಆರೋಗ್ಯ ಸಂಜೀವಿನಿ ಮತ್ತು ಬಸ್ ಪಾಸ್ ವ್ಯವಸ್ಥೆ ಜಾರಿಯಾಗಿದೆ. ಇದರ ಹೊರತಾಗಿ ವಸತಿ ಬೇಡಿಕೆ ಬಗ್ಗೆ ವಸತಿ ಸಚಿವರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಹೊಳಲ್ಕೆರೆ ಶಾಸಕ ಡಾ.ಎಂ ಚಂದ್ರಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿದ್ಧರಾಜು, ರಾಜ್ಯ ಸಮಿತಿ ಸದಸ್ಯ ಎಂ.ಯೋಗೀಶ್, ಖಜಾಂಚಿ ಡಿ.ಕುಮಾರಸ್ವಾಮಿ, ಉಪಾಘ್ಯಕ್ಷರಾದ ಸಿ.ಪಿ ಮಾರುತಿ, ತಿಪ್ಪೇಸ್ವಾಮಿ ನಾಕೀಕೆರೆ, ಕಾರ್ಯದರ್ಶಿಗಳಾದಂತ ನಾಗರಾಜ್ ಕಟ್ಟೆ, ವೀರೇಶ್.ವಿ, ವಿನಾಯಕ.ಬಿಎಸ್ ತೊಡೆರನಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಪ್ರತೀಕ್ ಚೌಹಾಣ್ ಬೇರೆ ಹುಡ್ಗೀರ ಜೊತೆ ವಿಡಿಯೋ ಕಾಲ್, ಚಾಟ್ ಮಾಡಿದ್ದಾನೆ: ಸಂತ್ರಸ್ತೆ ಸಹೋದರ ಆರೋಪ
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ | Power Cut