ಶಿವಮೊಗ್ಗ : ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ನಮ್ಮ ಮಾರಿಕಾಂಬ ಹಿತರಕ್ಷಣಾ ಸಮಿತಿಯಿಂದ ಒಟ್ಟು 33 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂದು ಸಮಿತಿ ಸಂಚಾಲಕ ಎಂ.ಡಿ.ಆನoದ್ ತಿಳಿಸಿದ್ದಾರೆ. ಈ ಮೂಲಕ ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣಾ ಕಣಕ್ಕೆ ಹಿತರಕ್ಷಣಾ ಸಮಿತಿ ಧುಮುಕೋದನ್ನು ಖಚಿತ ಪಡಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾರದರ್ಶಕ ಹಾಗೂ ದೇವಸ್ಥಾನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಆಸಕ್ತಿ ಇರುವ ನಮ್ಮ ತಂಡಕ್ಕೆ ಮತದಾರರು ಬೆಂಬಲ ನೀಡಬೇಕು. ಹಾಲಿ ಸಮಿತಿ 13 ವರ್ಷಗಳಿಂದ ಅನಧಿಕೃತವಾಗಿ ಆಡಳಿತ ನಡೆಸಿಕೊಂಡು ಬರುತ್ತಿದೆ. ಲೆಕ್ಕಪತ್ರವನ್ನು ಪಾರದರ್ಶಕವಾಗಿ ಇರಿಸಿರಲಿಲ್ಲ. ಇದೀಗ ಮತ್ತೆ ಚುನಾವಣೆ ನಿಲ್ಲಲು ಹಾಲಿ ಅಧ್ಯಕ್ಷ ನಾಗೇಂದ್ರ ಕೆ.ಎನ್. ಮತದಾರರಿಗೆ ಫೋನ್ ಮೂಲಕ ಬೆಂಬಲ ಯಾಚನೆ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದರು.
13 ವರ್ಷ ಆಡಳಿತ ನಡೆಸಿ, ನಾಲ್ಕು ಜಾತ್ರೆ ಮಾಡಿದರೂ ಮತ್ತೆ ನಾಗೇಂದ್ರ ಮತ್ತವರ ತಂಡ ಅಧಿಕಾರಕ್ಕೆ ಅಂಟಿಕೊಳ್ಳಲು ಕಾರಣ ಏನು ಎಂದು ಪ್ರಶ್ನಿಸಿದ ಅವರು ಸಮಿತಿಯಲ್ಲಿ ಏನೋ ಲಾಭ ಸಿಗುತ್ತದೆ ಎನ್ನುವ ಕಾರಣಕ್ಕೆ ಮತ್ತೆ ಸ್ಪರ್ಧೆ ಮಾಡುತ್ತಿದ್ದು ಇದನ್ನು ಸದ್ಯದಲ್ಲಿಯೆ ಬಹಿರಂಗ ಪಡಿಸುತ್ತೇವೆ ಎಂದು ಗುಡುಗಿದರು.
ಈಗಾಗಲೇ ನಮ್ಮ ಸಮಿತಿಯಿಂದ ವಿವಿಧ ಜಾತಿಯಿಂದ ಐವರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಗೆ ನಮ್ಮ ಸಮಿತಿಯ 33 ಜನರು ಕಣಕ್ಕೆ ಇಳಿಯುತ್ತಿದ್ದಾರೆ. ಈ ಪೈಕಿ ನಾಲ್ವರು ಮಹಿಳೆಯರಿದ್ದು, ಇನ್ನೋರ್ವ ಮಹಿಳೆ ಸ್ಥಾನ ಸದ್ಯದಲ್ಲಿಯೆ ಭರ್ತಿ ಮಾಡಲಾಗುತ್ತದೆ. ಎಲ್ಲ ಜಾತಿ ವರ್ಗದಿಂದಲೂ ಹಿತರಕ್ಷಣಾ ಸಮಿತಿ ಸದಸ್ಯರನ್ನು ಕಣಕ್ಕೆ ಇಳಿಸಲಾಗುತ್ತಿದೆ ಎಂಬುದಾಗಿ ಘೋಷಿಸಿದರು.
ಈ ಹಿಂದಿನ ಸಮಿತಿ ಸುಮಾರು 6 ಕೋಟಿ ರೂ. ಲೆಕ್ಕಾಚಾರವನ್ನೆ ಕೊಟ್ಟಿಲ್ಲ. ವಿವಿಧ ಸಮಿತಿ ಹೆಸರಿನಲ್ಲಿ ಹಣವನ್ನು ದುಂದುವೆಚ್ಚ ಮಾಡಲಾಗಿದೆ. ಇದೆಲ್ಲವನ್ನೂ ನಮ್ಮ ಸಮಿತಿ ಅಧಿಕಾರಕ್ಕೆ ಬಂದರೆ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಮಾರಿಕಾಂಬಾ ಹಿತರಕ್ಷಣಾ ಸಮಿತಿ ಕಾನೂನು ಸಲಹೆಗಾರ ವಿ.ಶಂಕರ್ ಮಾತನಾಡಿ, ಹಾಲಿ ಸಮಿತಿ 13 ವರ್ಷ ಆಡಳಿತ ನಡೆಸಿದ್ದು ಮತ್ತೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಬೇರೆಯವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಚುನಾವಣೆ ನಡೆಸಲು ಸೂಚನೆ ನೀಡಿದ್ದರೂ, ಅದನ್ನು ವಿಳಂಬ ಮಾಡಿದೆ. ಹಾಲಿ ಸಮಿತಿ ಕಾರ್ಯದರ್ಶಿ ಬಿ. ಗಿರಿಧರ ರಾವ್ ಸೇರಿ ಹಲವರಿಗೆ ಈಗಲೂ ಚುನಾವಣೆ ನಡೆಸಲು ಮನಸ್ಸಿಲ್ಲ. ಹಾಲಿ ಸಮಿತಿ ದುರಾಡಳಿತ ನಡೆಸಿದರೂ ಮತ್ತೆ ಚುನಾವಣೆಗೆ ನಿಲ್ಲಲು ಪ್ರಯತ್ನ ನಡೆಸಿದೆ. ಚುನಾವಣೆ ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗಬಹುದು. ಹಾಲಿ ಸಮಿತಿ ವಿರುದ್ದ ಸದಸ್ಯರಲ್ಲಿ ಆಕ್ರೋಶ ಜಾಸ್ತಿ ಇದೆ ಎಂದರು.
ಈ ಸುದ್ದಿಗೋಷ್ಟಿಯಲ್ಲಿ ಮಂಜುನಾಥ್, ರಾಮಪ್ಪ ಟಿ., ನಿತ್ಯಾನಂದ ಶೆಟ್ಟಿ, ಜಿ.ರಾಮಪ್ಪ, ಧರ್ಮರಾಜ್ ಬೆಳಲಮಕ್ಕಿ ಹಾಜರಿದ್ದರು.
ಮಧುಗಿರಿಯಲ್ಲಿ RTO ನೂತನ ಕಟ್ಟಡ, ಪರೀಕ್ಷಾ ಪಥ ನಿರ್ಮಾಣಕ್ಕೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ








