ಕೊಪ್ಪಳ: ಬ್ರೇಕಿಂಗ್ ಸುದ್ದಿ ನೀಡುವ ಆತುರದಲ್ಲಿ ಸುದ್ದಿಯ ಖಚಿತತೆ ಮಾಡಿಕೊಳ್ಳದೆ ಸುದ್ದಿ ಬಿತ್ತರಿಸುವ ಕೆಲಸವಾಗುತ್ತಿದ್ದು, ಇದರಿಂದ ಸುದ್ದಿಯ ಮೌಲ್ಯ ಕುಸಿಯುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೆಗಳ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಪ್ರಶ್ನಾರ್ಥಕ ಚಿಹ್ನೆ ಹಾಕಿ ಸುದ್ದಿ ಬರೆದರೆ, ಅದೇ ಸತ್ಯ ಎಂದು ಓದುಗರು ನಂಬುತ್ತಾರೆ. ಹೀಗಾಗಿ ಸುದ್ದಿಯ ಖಚಿತತೆ ಪಡೆದು ಸುದ್ದಿ ಬರೆಯಬೇಕಿದೆ ಎಂದು ಸಚಿವರು ಸಲಹೆ ನೀಡಿದರು.
ಬ್ರೇಕಿಂಗ್ ನ್ಯೂಸ್ ತನ್ನ ಮೌಲ್ಯವನ್ನೇ ಕಳೆದುಕೊಳ್ಳುತ್ತಿದೆ. ಹತ್ತು ವರ್ಷಗಳ ಹಿಂದೆ ಯಾವುದಾದರೂ ಚಾನೆಲ್ ನಲ್ಲಿ ಬ್ರೇಕಿಂಗ್ ಬಂದರೆ ನಿಂತು ಅದನ್ನು ನೋಡಿಕೊಂಡು ಹೋಗುತ್ತಿದ್ದೆವು. ಆದರೆ ಸುದ್ದಿ ನೀಡುವ ಬರದಲ್ಲಿ ಅದರ ಖಚಿತತೆಯನ್ನು ಪಡೆದುಕೊಳ್ಳದೇ ಬ್ರೇಕಿಂಗ್ ಸುದ್ದಿ ನೀಡಲಾಗುತ್ತಿದೆ. ಚಾಕುವಿಗಿಂತ ಅರಿತವಾದ ಅಸ್ತ್ರ ಎಂದರೆ ಲೇಖನಿ. ಈ ಲೇಖನಿಯಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಅಂತಹ ಲೇಖನಿಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಯಾವುದೇ ಸುದ್ದಿಯನ್ನು ಬಿತ್ತರಿಸಿ, ಅದಕ್ಕೆ ಸಂಬಂಧಪಟ್ಟವರ ಪ್ರತಿಕ್ರಿಯಿಯೆ ಪಡೆಯುವ ಕೆಲಸ ಆಗಬೇಕು. ಆದರೆ ಪ್ರತಿಕ್ರಿಯೆಯನ್ನು ಪಡೆಯದೇ ಕೇವಲ ಒಂದೆಡೆಗೆ ಸುದ್ದಿ ನೀಡುವ ಕೆಲಸ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮಗೆ ಬೆಳಗ್ಗೆ ಎದ್ದ ಕೂಡಲೇ ಪತ್ರಿಕೆ ಓದದಿದ್ದಲ್ಲಿ ನಮ್ಮ ದಿನಚರಿ ಪ್ರಾರಂಭವಾಗುವುದಿಲ್ಲ. ಅದರಲ್ಲೂ ವರ್ಷದಲ್ಲಿ ಮೂರ್ನಾಲ್ಕು ಬಾರಿ ಹಬ್ಬಗಳಿಗೆಂದು ಪತ್ರಿಕೆಗಳಿಗೆ ರಜೆ ನೀಡಲಾಗುತ್ತದೆ. ಅಂದು ನಾನು ಪತ್ರಿಕೆ ಓದಲಾರದೆ ಒಂದು ರೀತಿಯ ಕಸಿವಿಸಿಯನ್ನ ಅನುಭವಿಸುತ್ತೇನೆ ಎಂದರು.
ನಾವು ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತೇವೆ. ಹೊಸದಾಗಿ ಪತ್ರಿಕಾ ವಿತರಿಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಇಂದು ಪತ್ರಿಕಾ ವಿತರಕರು ಮಳೆ, ಚಳಿ, ಗಾಳಿ ಎನ್ನದೇ ಮನೆ – ಮನೆಗೆ ಹೋಗಿ ಪತ್ರಿಕೆ ಹಾಕುತ್ತಿದ್ದಾರೆ. ಅವರ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಇಂದು ಸುಳ್ಳು ಸುದ್ದಿ ಕ್ಷಣ ಮಾತ್ರದಲ್ಲಿ ಎಲ್ಲರನ್ನು ತಲುಪುತ್ತಿದೆ. ಆದರೆ ಅದಕ್ಕೆ ನೀವೇ ಒಂದಲ್ಲ, ಹತ್ತು ಬಾರಿ ಸುದ್ದಿಯ ಖಚಿತತೆ ಪಡಿಸಿಕೊಂಡು ಸುದ್ದಿ ನೀಡಬೇಕು ಎಂದು ಸಲಹೆ ನೀಡಿದರು. ಸರ್ಕಾರವನ್ನು ಬದಲಾವಣೆ ಮಾಡುವ ಶಕ್ತಿ ಮಾಧ್ಯಮಗಳಿಗಿದೆ. ಸೋಷಿಯಲ್ ಮೀಡಿಯಾದಿಂದ ಜನರ ದಿಕ್ಕು ತಪ್ಪಿಸುವ ಕೆಲಸ ಹೆಚ್ಚಾಗಿದೆ. ಸುಳ್ಳು ಸುದ್ದಿಯ ಮೇಲೆ ನಿಗಾ ಇಡುವ ಕೆಲಸ ಸರ್ಕಾರದಿಂದ ಆಗುತ್ತಿದೆ. ಈ ಸಮಾಜದಲ್ಲಿ ಸರ್ಕಾರದಷ್ಟೇ ಜವಾಬ್ದಾರಿ ಪತ್ರಿಕಾ ರಂಗದ ಮೇಲೆ ಇದೆ ಎಂದು ಹೇಳಿದರು.
ಕುಡಿತ ನಮ್ಮ ದೇಶಕ್ಕೆ ಅಗತ್ಯವಿಲ್ಲ, ನಮ್ಮದು ಸಮಶೀತೋಷ್ಣ ದೇಶ: ಮಾಜಿ ಸಚಿವ ಹರತಾಳು ಹಾಲಪ್ಪ
ಶಿವಮೊಗ್ಗ: ಸಾಗರದ ‘ಗಣಪತಿ ಬ್ಯಾಂಕ್’ನಿಂದ ಗ್ರಾಹಕ ಸ್ನೇಹಿ ಯೋಜನೆ ಜಾರಿ- ಅಧ್ಯಕ್ಷ ಆರ್.ಶ್ರೀನಿವಾಸ್