ಬೆಂಗಳೂರು : “ಜಗತ್ತಿನ ಯಾವುದೇ ಧರ್ಮದವರ, ಜಾತಿಯ, ಕರಿಯ, ಬಿಳಿಯ ಜನಾಂಗದ ವ್ಯಕ್ತಿಗಳ ರಕ್ತದ ಬಣ್ಣ ಕೆಂಪಾಗಿರುತ್ತದೆ. ಎಲ್ಲರ ಕಣ್ಣೀರು, ಬೆವರಿನ ರುಚಿ ಉಪ್ಪಾಗಿಯೇ ಇರುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ನಾರಾಯಣ ಗುರುಗಳ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
“ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ ದೇವನೊಬ್ಬ ನಾಮ ಹಲವು. ಇದೇ ತತ್ವವನ್ನು ನಾರಾಯಣ ಗುರುಗಳು ಸಾರಿದ್ದು” ಎಂದು ಹೇಳಿದರು.
ಜಾತಿ ಮೇಲೆ ನಿಂತ ವ್ಯಕ್ತಿ ನಾನಲ್ಲ
“ಜಾತಿ ಹೇಳಬೇಡ, ಜಾತಿ ಕೇಳಬೇಡ, ಜಾತಿ ಮಾಡದೆ ಬದುಕನ್ನು ಸಾಗಿಸು ಎಂದವರು ನಾರಾಯಣ ಗುರುಗಳು. ಶೋಷಿತ ವರ್ಗಗಳಿಗೆ ದೇವರನ್ನು ತೋರಿಸಿದ ಸಂತಶ್ರೇಷ್ಠರು. ಇವರ ಆಚಾರ, ವಿಚಾರದಲ್ಲಿ ನಾವುಗಳು ನಡೆಯಲೇ ಬೇಕು. ನಾನು ಜಾತಿ ಮೇಲೆ ನಿಂತಿರುವ ವ್ಯಕ್ತಿಯಲ್ಲ. ಪ್ರೀತಿ, ವಿಶ್ವಾಸಕ್ಕೆ, ಮಾನವನ ಬದುಕಿನ ಉನ್ನತಿ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುವವನು. ನನ್ನನ್ನು ಬಳಸಿಕೊಂಡು ಕೆಲಸ ಮಾಡಿಕೊಳ್ಳಿ” ಎಂದರು.
ಬಂಗಾರಪ್ಪನವರು ನನ್ನ ತಿದ್ದಿ, ತೀಡಿ ಬೆಳೆಸಿದ ಗುರುಗಳು
“ಬಂಗಾರಪ್ಪ ಅವರು ಪಕ್ಷಕ್ಕೆ ರಾಜಿನಾಮೆ ನೀಡುವ ಸಂದರ್ಭ ಬಂದಿತು. ಆಗ ನಾನು ಮತ್ತು ಬೆಳ್ಳಿಯಪ್ಪ ಅವರ ಬಳಿ ಹೋಗಿ ‘ನಾವು ಏನು ಮಾಡುವುದು’ ಎಂದೆವು. ಅವರ ತಲೆಯಲ್ಲಿ ಬೇರೆ ಪಕ್ಷ ಕಟ್ಟುವ ಆಲೋಚನೆಯಿತ್ತು. ಆದರೂ ನನ್ನ ಬೆಳವಣಿಗೆ ಬಗ್ಗೆ ಕಳಕಳಿಯಿದ್ದ ಅವರು ಎಸ್.ಎಂ.ಕೃಷ್ಣ ಅವರ ಜೊತೆಯಲ್ಲಿ ಹೋಗು ಎಂದರು. ನನಗೆ ಎಸ್.ಎಂ.ಕೃಷ್ಣ ಅವರು ಬೇರೆ ರೀತಿಯಲ್ಲಿ ಗುರುವಾದರೆ. ನನಗೆ ಮಾರ್ಗದರ್ಶನ ನೀಡಿ, ಅಡಿಪಾಯ ಹಾಕಿ, ತಿದ್ದಿ ತೀಡಿದವರು ಬಂಗಾರಪ್ಪನವರು” ಎಂದರು.
“1979 ರಿಂದಲೂ ನಾನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ನೆನೆಯಲೇ ಬೇಕು. ನನ್ನ ರಾಜಕಾರಣದ ಬದುಕಿನಲ್ಲಿ ಅವರ ಶಿಷ್ಯನಾಗಿ ಬೆಳೆದೆ. ನನ್ನನ್ನು ಚಿಕ್ಕ ವಯಸ್ಸಿಗೆ ಮಂತ್ರಿ ಮಾಡಿ ಬೆಳೆಸಿದವರು” ಎಂದರು.
“ವಿದ್ಯಾರ್ಥಿ ನಾಯಕನಾಗಿದ್ದ ನನ್ನ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದ್ದರು. ನನ್ನಲ್ಲಿ ನಾಯಕತ್ವದ ಗುಣವಿದೆ ಎಂದು ಇವನನ್ನು ಬೆಳೆಸಬೇಕು ಎಂದು ನನ್ನ ಬಗ್ಗೆ ವಿಶೇಷವಾದ ಅನ್ಯೂನ್ಯತೆಯನ್ನಿಟ್ಟುಕೊಂಡಿದ್ದರು” ಎಂದರು.
“ಮಧು ಬಂಗಾರಪ್ಪ ಅವರು ಅವರ ತಂದೆಯ ಜೊತೆಯಲ್ಲಿಯೇ ಬೇರೆ ಪಕ್ಷಕ್ಕೆ ಹೋಗಿದ್ದರು. ನಾನು ಆ ಕಡೆ ಸರಿಯಿಲ್ಲ ಎಂದು ಎಳೆದುಕೊಂಡು ಬಂದೆ. ನಾನು ಜೊತೆಯಲ್ಲಿ ಇದ್ದೇನೆ ಎಂದು ಅವರಿಗೆ ಹೇಳಿದೆ. ಖಾತೆ ಹಂಚಿಕೆ ವೇಳೆ ಸ್ವಲ್ಪ ಹೆಚ್ಚು ಕಡಿಮೆಯಾಗಿತ್ತು. ನಾನು, ಸಿದ್ದರಾಮಯ್ಯ ಅವರು, ಸುರ್ಜೇವಾಲ ಅವರು ಚರ್ಚೆ ಮಾಡಿ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿ ನೀಡಿದೆವು. ಇಂದು ನಾರಾಯಣ ಗುರುಗಳ ಹಾದಿಗೆ ಆಧಾರ ಸ್ಥಂಭವಾಗಿ ನಿಂತು ಕೆಲಸ ಮಾಡುತ್ತಿದ್ದಾರೆ” ಎಂದರು.
“ಜನಾರ್ದನ ಪೂಜಾರಿಯವರನ್ನು ಸಹ ನಾನು ಮರೆಯುವಂತಿಲ್ಲ. ಈ ಹಿಂದೆ ಮಾರವಾಡಿಗಳ ಬಳಿ ಅಡವಿಟ್ಟು ಹೆಚ್ಚಿನ ಬಡ್ಡಿಗೆ ಹಣ ಪಡೆಯಬೇಕಿತ್ತು. ಇಂತಹ ಸಂದರ್ಭದಲ್ಲಿ ಬಡವರಿಗೆ ಸಾಲಮೇಳ ಮಾಡಿ ಹಣಕಾಸಿನ ನೆರವು ನೀಡಿದವರು. ಬ್ಯಾಂಕ್ ನವರೇ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುವ ಸೌಲಭ್ಯ ಒದಗಿಸಿದರು” ಎಂದು ಹೇಳಿದರು.
ಶಿವಮೊಗ್ಗ: ಸಾಗರದ ಸಂಪಿಗೆಸರ ಬಳಿಯಲ್ಲಿ ಆಟೋ-ಬೈಕ್ ನಡುವೆ ಅಪಘಾತ, ಓರ್ವನಿಗೆ ಗಂಭೀರ ಗಾಯ
ನಿಮ್ಮ ಮೊಬೈಲ್ ನಲ್ಲೇ `ಚಂದ್ರಗ್ರಹಣ’ ಲೈವ್ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ