ಬೆಂಗಳೂರು: ಕಬ್ಬು ಬೆಳೆಗಾರರ ವಿಚಾರದಲ್ಲಿ ರಾಜ್ಯ ಸರಕಾರ ಜವಾಬ್ದಾರಿಯಿಂದ ವರ್ತಿಸಿ ಸಂಧಾನ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರ, ಕೆಲವು ಸಚಿವರು, ಮುಖ್ಯಮಂತ್ರಿಗಳು ಈ ಕಬ್ಬು ಬೆಲೆ ನಿಗದಿ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಕಬ್ಬು ವರ್ಷದ ಪ್ರಾರಂಭಕ್ಕೆ ಮೊದಲು ಕೇಂದ್ರವು ಎಫ್‍ಆರ್‍ಪಿ ನಿಗದಿ ಮಾಡುತ್ತದೆ. ಈಗ ನಾವು 350 ರೂ. ಎಫ್‍ಆರ್‍ಪಿ ನಿಗದಿ ಮಾಡಿದ್ದೇವೆ ಎಂದು ವಿವರಿಸಿದರು.
ಇದರ ಜೊತೆಗೆ ಎಥೆನಾಲ್ ಖರೀದಿ ಶುರು ಮಾಡಿದ ಬಳಿಕ ಮೊದಲು 3-4 ವರ್ಷ ಹಣ ಪಾವತಿ ಬಾಕಿ ಇರುತ್ತಿತ್ತು. ಈಗ ಕಳೆದ ಸಕ್ಕರೆ ವರ್ಷದ್ದು, 97.2 ಶೇಕಡಾ ಪಾವತಿ ಆಗಿದೆ. ರಾಜ್ಯ ಸರಕಾರವು ಕಾರ್ಖಾನೆಗಳ ಮಾಲೀಕರು, ರೈತರ ಜೊತೆ ಮಾತುಕತೆ ಮಾಡಿ ಸೂಕ್ತ ಸಂಧಾನ ಮಾಡಬೇಕು. ಸುಮ್ಮಸುಮ್ಮನೇ ಹೇಳಿಕೆ ಕೊಟ್ಟು ಪರಿಸ್ಥಿತಿಯನ್ನು ಕೆಡಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.
ಕಬ್ಬು ಕಾರ್ಖಾನೆಗಳ ಮಾಲೀಕರು ರಫ್ತಿಗೆ ಅವಕಾಶ ಕೋರಿದ್ದಾರೆ. 15ರಿಂದ 20 ಲಕ್ಷ ಟನ್ ಸಕ್ಕರೆ ಹೆಚ್ಚುವರಿ ಇದೆ ಎಂದು ಅಂದಾಜು ಮಾಡಿದ್ದು, ಅದರಲ್ಲಿ 15 ಲಕ್ಷ ಟನ್ ರಫ್ತಿಗೆ ಅವಕಾಶ ಮಾಡಲಿದ್ದೇವೆ ಎಂದು ಪ್ರಕಟಿಸಿದರು. ಇದಲ್ಲದೇ ಮೊಲಾಸಿಸ್ ರಫ್ತಿಗೆ ಅನುಮತಿಯನ್ನು ಕೇಳಿದ್ದು, ನಾವು ಈಗಾಗಲೇ ಕೊಟ್ಟಿದ್ದೇವೆ ಎಂದರು.
ರೈತರು ಪ್ರತಿ ಟನ್‍ಗೆ 3,500 ರೂ. ಕೇಳುತ್ತಿದ್ದು, ಕೇಂದ್ರ ಸರಕಾರ 350 ರೂ. ನೀಡಿದೆ. ಅದರ ಜೊತೆಗೆ ರಫ್ತಿಗೂ ಅವಕಾಶ ಕೊಟ್ಟಿದೆ. ರಾಜ್ಯ ಸರಕಾರವು ನ್ಯಾಯಯುತ ಬೇಡಿಕೆ ಪರಿಹರಿಸಲಿ. ಮುಖ್ಯಮಂತ್ರಿಗಳು ಮತ್ತು ಸಚಿವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. ವಿನಾಕಾರಣ ಕಾಲಹರಣ ಸಲ್ಲದು ಎಂದು ನುಡಿದರು. ರಾಜಕೀಯ ಹೇಳಿಕೆ ಮೂಲಕ ಕಾಲಹರಣ ಮಾಡುವುದು ಒಂದು ರಾಜ್ಯ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ರೈತರನ್ನು ರಸ್ತೆ ಮೇಲೆ ಕೂರಲು ಬಿಡದಿರಿ..
ಕಳೆದ ಬಾರಿ ಎಥೆನಾಲ್ ಬ್ಲೆಂಡಿಂಗ್ 35 ಲಕ್ಷ ಮೆಟ್ರಿಕ್ ಟನ್ ಆಗಿದೆ. ಅದು ಶೇ 20ರಷ್ಟಿದೆ. ಆ ಕಾರಣದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಸಕ್ಕರೆ ಮಿಲ್‍ಗಳು ಸುಸ್ಥಿರತೆ ಸಾಧಿಸಿವೆ. ಸರಕಾರ ಸಂಧಾನ ಮಾಡಿ ಸಮಸ್ಯೆ ಪರಿಹರಿಸಬೇಕು. ರೈತರನ್ನು ರಸ್ತೆ ಮೇಲೆ ಕೂರಲು ಬಿಡುವುದು ಅಪೇಕ್ಷಣೀಯವಲ್ಲ ಎಂದು ಹೇಳಿದರು.
ಕರ್ನಾಟಕದ ಸಚಿವರು ಸಮಸ್ಯೆ ಬಗ್ಗೆ ಬಂದಾಗ ನಾವು ಅದನ್ನು ಪರಿಹರಿಸಿದ್ದೇವೆ. ಇದರಲ್ಲೂ ಎಫ್‍ಆರ್‍ಪಿ 340 ಇದ್ದುದನ್ನು 350 ಮಾಡಿದ್ದೇವೆ. ಇನ್ನು ಮುಂದೆ ಒಂದು ಕ್ಷಣವೂ ರೈತರು ರಸ್ತೆ ಮೇಲೆ ಕೂರಲು ಬಿಡದಿರಿ ಎಂದು ಆಗ್ರಹಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಸಭೆ ಕರೆದಿದ್ದರೆ ಬಹಳ ಸಂತೋಷ. ಅವರು ಮಾತುಕತೆಗೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಬೆಲೆ ಏರಿಕೆ ವಾಪಸ್ ಪಡೆಯಿರಿ..
ರಾಜ್ಯ ಸರಕಾರವು ತುಪ್ಪ, ಬೆಣ್ಣೆ ಬೆಲೆ ಹೆಚ್ಚಿಸಿದೆ. ಜಿಎಸ್‍ಟಿ ಕಡಿಮೆ ಮಾಡಿದ ಬಳಿಕ ನಮ್ಮ ಬಗ್ಗೆ ಇವರು ಟೀಕಿಸಿದ್ದರು. ಇದು ರಾಹುಲ್ ಗಾಂಧಿ ಸಹವಾಸ ದೋಷದ ಕಾರಣ ಎಂದು ಟೀಕಿಸಿದರು. ಹುಲಿ ಮರಿ ಕುರಿ ಮರಿಯಂತೆ ಇದ್ದುದಾಗಿ ಕತೆಯೊಂದನ್ನು ಉದಾಹರಣೆಯಾಗಿ ನೀಡಿದರು. ರಾಹುಲ್ ಗಾಂಧಿ ಸಹವಾಸ ದೋಷದಿಂದ ಕಾಂಗ್ರೆಸ್ ಮುಖಂಡರು ಏನೇನೋ ಮಾತನಾಡುತ್ತಾರೆ ಎಂದು ಆರೋಪಿಸಿದರು. ಬೆಲೆ ಏರಿಕೆಯ ಬೆಂಕಿಗೆ ರಾಜ್ಯ ಸರಕಾರ ತುಪ್ಪ ಸುರಿದಿದೆ. ಇದನ್ನು ತಕ್ಷಣ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಮತ್ತದೇ ಮತಗಳ್ಳತನದ ಮಾತು..
ರಾಹುಲ್ ಗಾಂಧಿಯವರು ಮತ್ತದೇ ಮತಗಳ್ಳತನದ ಮಾತನಾಡಿದ್ದಾರೆ. ಇವತ್ತು ಆ ಮಹಿಳೆ ನಾನು ಬ್ರೆಝಿಲ್, ಕೊಲಂಬಿಯದವಳಲ್ಲ; ನಾನು ಇಲ್ಲಿನವಳೇ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾನು ನನ್ನ ನೈಜ ಹೆಸರು ಹೇಳಿ ಮತ ಹಾಕಿದ್ದೇನೆ ಎಂದಿದ್ದಾರೆ. ಇವರು ಎಷ್ಟು ಮೂರ್ಖರಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ತಿಳಿಸಿದರು. ಆಳಂದದ ಬಗ್ಗೆ ಹೇಳಿದ್ದು ಠುಸ್ ಆಯಿತು ಎಂದರು.
ರಾಹುಲ್ ಗಾಂಧಿ ಮೊದಲು ಇವಿಎಂ ಎಂದರು; ಆಮೇಲೆ ಚುನಾವಣಾ ಆಯೋಗ ಎಂದು ಹೇಳಿದರು. ಈಗ ಮತಗಳ್ಳತನ ಎನ್ನುತ್ತಾರೆ. ಮುಂದೆ ನಾವು ಆಳಲೆಂದೇ ಹುಟ್ಟಿದವರು; ನಮ್ಮ ಸರಕಾರವನ್ನೇ ಇವರು ಕಳ್ಳತನ ಮಾಡಿದ್ದಾರೆಂದು ಇವರು ಹೇಳಲಿದ್ದಾರೆ ಎಂದು ಭವಿಷ್ಯ ನುಡಿದರು.
ಈ ನಮೂನೆ ಟ್ಯೂಬ್‍ಲೈಟ್ ಆದರೆ..
ಸೋತಿದ್ದಕ್ಕೆ ಜನರನ್ನು ಬೈಯ್ಯುವುದನ್ನು ಅವರು ನಿಲ್ಲಿಸಬೇಕು ಎಂದರು. ಹರಿಯಾಣದ ಚುನಾವಣೆ ನಡೆದು ಒಂದು ವರ್ಷದ ಬಳಿಕ ಆ ರಾಜ್ಯದ ಕುರಿತು ಮಾತನಾಡುತ್ತಿದ್ದಾರೆ. ಹರಿಯಾಣದ ಬಳಿಕ ಜಾರ್ಖಂಡ್, ಜಮ್ಮು- ಕಾಶ್ಮೀರ, ಮಹಾರಾಷ್ಟ್ರ ಚುನಾವಣೆ ನಡೆದಿದೆ. ಇದಾದ ಬಳಿಕ ಅವರು ಜಾರ್ಖಂಡ್, ನಂತರ ಜಮ್ಮು- ಕಾಶ್ಮೀರ, ಆಮೇಲೆ ಮಹಾರಾಷ್ಟ್ರ ಚುನಾವಣೆ ಬಗ್ಗೆ ಮಾತನಾಡಬೇಕಿದೆ. ಮುಂದಿನ ವರ್ಷ ಬಿಹಾರ ಬಗ್ಗೆ ಮಾತನಾಡಬೇಕಾಗುತ್ತ್ತದೆ. ಈ ನಮೂನೆ ಟ್ಯೂಬ್‍ಲೈಟ್ ಆದರೆ ಇದೊಂದು ದೊಡ್ಡ ಸಮಸ್ಯೆ ಎಂದು ವಿಶ್ಲೇಷಿಸಿದರು.
ಇವರಿಗೆ ಬಿಹಾರದಲ್ಲಿ ಸೋಲುವುದಾಗಿ ಗೊತ್ತಾಗಿದೆ. ಸ್ಪರ್ಧಿಸಿದ್ದೇ 61 ಸೀಟು. ಬಿಹಾರ ಸೋಲು ಖಾತರಿ ಆದ ಕಾರಣ ಹೀಗೆ ಮಾತನಾಡುತ್ತಾರೆ. ಮೊನ್ನೆ ಬಿಹಾರಕ್ಕೆ ಹೋಗಿದ್ದೆ. ಸ್ಪರ್ಧೆಯೇ 61 ಸೀಟು. ನಮ್ಮದೇ ಗ್ಯಾರಂಟಿ ಗೆಲುವು ಎನ್ನುತ್ತಾರಲ್ಲ ರಾಹುಲ್ ಗಾಂಧಿ ಎಂದು ವ್ಯಕ್ತಿಯೊಬ್ಬರು ನನ್ನನ್ನು ಪ್ರಶ್ನಿಸಿದರು ಎಂದು ಗಮನ ಸೆಳೆದರು. ಹಿಂದಿನ ಬಾರಿ 71ರಲ್ಲಿ 19 ಗೆದ್ದಿದ್ದರು. ಮಹಾ ಘಟಬಂಧನ್ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿ ಫೋಟೊ ಹಿಂದಿನ ಕೆಂಪಿನ ನಾಲ್ಕಾಣೆ ಸ್ಟಾಂಪ್‍ಗಿಂತ ಸಣ್ಣದಾಗಿದೆ ಎಂದು ವಿವರಿಸಿದರು. ದೇಶದ ವಿಪಕ್ಷ ನಾಯಕ ಹೀಗೆ ಹಾಸ್ಯಾಸ್ಪದ ವ್ಯಕ್ತಿ ಆಗುತ್ತಿರುವುದು ಅತ್ಯಂತ ದುಃಖದ ಸಂಗತಿ ಎಂದು ನುಡಿದರು. ವಿಪಕ್ಷ ನಾಯಕ ಪ್ರಬುದ್ಧತೆಯಿಂದ ಇರಬೇಕು ಎಂದು ತಿಳಿಸಿದರು. ಜನರ ತೀರ್ಪನ್ನು ಸ್ವೀಕರಿಸದೇ ಜನರಿಗೆ ಅಪಮಾನ ಮಾಡುವ ಕೆಲಸ ಇವರದು ಎಂದು ಆಕ್ಷೇಪಿಸಿದರು.
ಡಿ.ಕೆ.ಶಿವಕುಮಾರ್ ಹೇಳಿಕೆ ಅಭದ್ರತೆಯ ಸಂಕೇತ..
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯು ಅಭದ್ರತೆಯ ಸಂಕೇತ. ರಾಜಕೀಯ ಕ್ರಾಂತಿ ಆಗುವುದಾಗಿ ಬಿಜೆಪಿಯವರು ಹೇಳಿದ್ದಾರಾ? ಅದನ್ನು ನೀವೇ ಹೇಳಿ ನೀವೇ ಇಲ್ಲ ಎನ್ನುತ್ತೀರಿ ಎಂದು ತಿಳಿಸಿದರು. ಮುಖ್ಯಮಂತ್ರಿ ದಿನಾ ಬೆಳಿಗ್ಗೆ ನಾನೇ ಸಿಎಂ ಎನ್ನುತ್ತಾರೆ. ಒಬ್ಬೊಬ್ಬರು ಒಂದೊಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸರಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದು ಟೀಕಿಸಿದರು.
ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಅವರು ಈ ಸಂದರ್ಭದಲ್ಲಿ ಇದ್ದರು.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ








