ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಸದ್ಯದ ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ. ಆದರೆ ಗ್ಯಾರಂಟಿಗಳಿಗೆ ನಾವು ಕೊಡುತ್ತಿರುವುದು 60 ಸಾವಿರ ಕೋಟಿ ರೂಪಾಯಿ. ಹೀಗಾಗಿ ವಿಪಕ್ಷ ನಾಯಕ R Ashoka ಅವರ ಮಾತುಗಳಿಗೆ ಅರ್ಥವಿಲ್ಲ. ಆರ್.ಅಶೋಕ್ ಗೆ ಇದೆಲ್ಲಾ ಅರ್ಥ ಆಗುವುದೂ ಇಲ್ಲ , ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಅವರಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ, ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ. 2015 ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆ ಆದಾಗಲೂ ಅದರ ಲಾಭವನ್ನು ದೇಶದ ಜನರಿಗೆ ನೀಡದೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು ಮೂರು ಸಾವಿರ ಕೋಟಿ ರೂಪಾಯಿಗಳು ರಾಜ್ಯದ ಖಜಾನೆಗೆ ಸಂದಾಯವಾಗುತ್ತದೆ, ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ ಅದು ನಮ್ಮ ಜೇಬಿಗೆ ಹೋಗುವುದಿಲ್ಲ ಎಂದರು.

ಈ ಬೆಲೆ ಏರಿಕೆಯಿಂದ ಸುಮಾರು 3,000 ಕೋಟಿ ರೂ. ಸಂಪನ್ಮೂಲ ದೊರೆಯಲಿದೆ. ಗ್ಯಾರಂಟಿ ಯೋಜನೆಗಳಿಗೆ 60,000 ಕೋಟಿ ರೂ. ಅಗತ್ಯವಿದೆ. ಸರ್ಕಾರ ಪಾಪರ್‌ ಆಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಗೆ ಹೇಳುತ್ತಾರೆ? ನಾವು ಯಾರದ್ದಾದರೂ ಸಂಬಳ ನಿಲ್ಲಿಸಿದ್ದೇವೆಯೇ? ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸದೇ ಸ್ಥಗಿತ ಗೊಳಿಸಿದ್ದೇವೆಯೇ? ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಪೆಟ್ರೋಲ್‌ ಮೇಲೆ ಕೇಂದ್ರ ಅಬಕಾರಿ ಸುಂಕ 9.48 ರೂಗಳಷ್ಟಿತ್ತು. 2020ರ ಮೇ ನಲ್ಲಿ 32.98 ರೂ.ಗಳಿಗೆ ಹೆಚ್ಚಾಗಿದೆ. ಈ ಮಟ್ಟದ ಏರಿಕೆ ವಿರುದ್ಧ ಬಿಜೆಪಿಯವರಾಗಲೀ, ಆರ್.ಅಶೋಕ್ ಆಗಲಿ ಬಾಯಿ ಬಿಟ್ಟಿಲ್ಲ. ಅವರಿಗೆ ಇದು ಅರ್ಥ ಆಗಿದೆಯೋ? ಇಲ್ಲವೋ? ಎಂಬುದೇ ನನಗಿರುವ ಅನುಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.

Share.
Exit mobile version