ಬೆಂಗಳೂರು: ನಗರದಲ್ಲಿ ಗುಂಡಿ ಮುಚ್ಚಲು ಬಿಡಿಗಾಸು ಇಲ್ಲದ ಕಾಂಗ್ರೆಸ್ ಸರ್ಕಾರ, ಸುರಂಗ ಮಾಡುತ್ತೇವೆ ಎಂದು ಜನರಿಗೆ ಮಂಕುಬೂದಿ ಎರಚುತ್ತಿದೆ ಎಂದು ಮಾಜಿ ಶಾಸಕ ಹಾಗೂ ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡರು ದೂರಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡ ಬಿದರುಕಲ್ಲು ವಾರ್ಡಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷದ ಸದಸ್ಯತ್ವ ನೊಂದಣಿ ಮಿಸ್ಡ್ ಕಾಲ್ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದೆ. ಅವುಗಳ ನೆಪದಲ್ಲಿ ಬರೀ ಘೋಷಣೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದೆ. ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಹಳಿ ತಪ್ಪಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದ್ದಾರೆ. ಇಡೀ ದೇಶಕ್ಕೆ ಕಾಂಗ್ರೆಸ್ ಸರ್ಕಾರ ಕೆಟ್ಟ ಪರಂಪರೆಯನ್ನು ಹಾಕಿಕೊಟ್ಟಿದೆ ಎಂದು ಅವರು ಆರೋಪಿಸಿದರು.
ಅಭಿವೃದ್ಧಿ ಇಲ್ಲ, ನಿರ್ಮಾಣ ಕಾರ್ಯಗಳು ಇಲ್ಲ. ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ರಾಜ್ಯವನ್ನು ಮುಂದಕ್ಕೆ ಕೊಂಡೊಯ್ಯಬಲ್ಲ ದೂರದೃಷ್ಟಿ ಯೋಜನೆಗಳ ಜಾರಿ ಆಗುತ್ತಿಲ್ಲ. ಕೇವಲ ಜನರ ಮೇಲೆ ತೆರಿಗೆ ಮತ್ತು ಬೆಲೆ ಏರಿಕೆ ಬರೆ ಎಳೆಯುತ್ತ ಸರ್ಕಾರ ವಂಚಿಸುತ್ತಿದೆ ಎಂದು ರಮೇಶ್ ಗೌಡರು ದೂರಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಜನರು ಅತಿ ಹೆಚ್ಚು ಹಿಂಸೆ ಮತ್ತು ಸುಲಿಗೆಗೆ ತುತ್ತಾಗಿದ್ದಾರೆ. ಅವರನ್ನು ನಿರಂತರವಾಗಿ ಸುಲಿಗೆ ಮಾಡುತ್ತಿದ್ದಾರೆ. ಜನರ ರಕ್ತವನ್ನು ಸರ್ಕಾರ ಹೀರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯರು ಹಾಗೂ ಯಶವಂತಪುರ ಕ್ಷೇತ್ರದ ಅಧ್ಯಕ್ಷರಾದ ಟಿ.ಎನ್. ಜವರಾಯಿಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯರಾದ ಹನುಮಂತೇಗೌಡ, ನಗರದ ಮಹಿಳಾ ಅಧ್ಯಕ್ಷೆ ಶೈಲ ಸಂತೋಜಿ ರಾವ್, ಬೆಂಗಳೂರು ನಗರ ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಮಹಾಪ್ರಧಾನ ಕಾರ್ಯದರ್ಶಿ ಎಸ್. ರಮೇಶ ಹಾಗೂ ಹಾಗೂ ಕ್ಷೇತ್ರದ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.
ಸುಪ್ರಸಿದ್ಧ ಸಾಗರದ ‘ಮಾರಿಕಾಂಬಾ ಜಾತ್ರಾ ಮಹೋತ್ಸವ’ಕ್ಕೆ ಮುಹೂರ್ತ ಫಿಕ್ಸ್