ಬೆಂಗಳೂರು : 2024 ಆಗಸ್ಟ್ 1 ರಂದು ಬಂದ ಒಳಮೀಸಲಾತಿ ಕುರಿತಾದ ಐತಿಹಾಸಿಕ ತೀರ್ಪು ಪರಿಶಿಷ್ಟ ಜಾತಿಯೊಂದಿಗೆ ಪರಿಶಿಷ್ಟ ಪಂಗಡದಲ್ಲಿಯೂ ವರ್ಗೀಕರಣ ಆಗಬೇಕೆಂದು ಹೇಳಿತ್ತು . ಆದರೆ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಮಾತ್ರ ಒಳಮೀಸಲಾತಿ ಜಾರಿ ಪ್ರಕ್ರಿಯೆ ನೆಡೆಸಿದೆ . ಪರಿಶಿಷ್ಟ ಪಂಗಡಗಳಿಗೂ ಒಳಮೀಸಲಾತಿ ವಿಸ್ತರಿಸಲು ಆಗತ್ಯ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ಶಾಸಕರ ಭವನದಲ್ಲಿ ನೆಡೆದ ಆದಿವಾಸಿ ನಾಯಕರ ಸಭೆ ಆಗ್ರಹಿಸಿದೆ.
ಸಭೆಯ ತರುವಾಯ ಆದಿವಾಸಿ ನಾಯಕರು ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ , ಕಾನೂನು ಸಚಿವರಾದ ಹೆಚ್ ಕೆ ಪಾಟೀಲ್ ಹಾಗು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲಾಯಿತು .
ಪರಿಶಿಷ್ಟ ಜಾತಿಗಳಿಗಿಂತ ಪರಿಶಿಷ್ಟ ಪಂಗಡದಲ್ಲಿ ಮೀಸಲಾತಿ ಜಾರಿಯಲ್ಲಿ ಸಮಸ್ಯೆ ಇದೆ . ಸಣ್ಣ ಬುಡಕಟ್ಟುಗಳು , ಸೂಕ್ಷ್ಮ ಬುಡಕಟ್ಟುಗಳು , ದುರ್ಬಲ ಬುಡಕಟ್ಟುಗಳು ಮತ್ತು ಪ್ರಬಲ ಸಮುದಾಯಗಳು ಒಂದೇ ತಟ್ಟೆಯಲ್ಲಿ ಉಣ್ಣುವಂತಾಗಿದೆ . ಹೀಗಾಗಿ ಸರ್ಕಾರದ ಮೀಸಲಾತಿ ವ್ಯವಸ್ಥೆಯಿಂದ ಎಷ್ಟೋ ಬುಡಕಟ್ಟುಗಳು ದೂರವೇ ಉಳಿದಿವೆ . ಸರ್ಕಾರ ತುರ್ತು ಈ ಬಗ್ಗೆ ನಿಗಾ ವಹಿಸಿ STಮೀಸಲಾತಿಯ ವೈಜ್ಞಾನಿಕ ಹಂಚಿಕೆಗಾಗಿ ನಿವೃತ್ತ ನ್ಯಾಯಾಧೀಶರ ಆಯೋಗ ರಚಿಸಬೇಕು . ಸಮಾನರು – ಅಸಮಾನರು ಒಂದೇ ಗುಂಪಿನಲ್ಲಿದ್ದರೆ ಮೀಸಲಾತಿ ಕೊನೆಯ ವ್ಯಕ್ತಿಗೆ ಮರೀಚಿಕೆಯಾಗುತ್ತದೆ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲೇಖವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ .
ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ್ ಸಿದ್ಧಿ ಪ್ರಾಧ್ಯಾಪಕರಾದ ಸೋಲಿಗರ ಡಾ ಜಡೆಯೇ ಗೌಡ, ಡಾ ಗಣೇಶ್ ಬೆಟ್ಟಕುರುಬ, ಹಸಳರ ಮುತ್ತಪ್ಪ, ಕುಡಿಯರ ಮಿಟ್ಟು ರಂಜನ್, ಶಿವರಾಜ್ ಯೆರವ, ರಾಜು ಇರುಳಿಗ, ಹಕ್ಕಿಪಿಕ್ಕಿ ಕಾಮರಾಜ್, ತ್ಯಾಗರಾಜು, ಮರಾಟಿ ನಾಯ್ಕ ಸಮುದಾಯದ ಹೆಚ್ ವಿ ಚಂದ್ರಶೇಖರ್, ಎಸ್ ಎನ್ ಅಶೋಕ್, ಕೆ ಎಸ್ ಮಹೇಶ್, ಗೌಡ್ಲು ಚೇತನ್, ಎಮ್ ಸಿ ಯೋಗಿಶ್ ಮತ್ತು ಸಾಮರಸ್ಯ ವೇದಿಕೆಯ ವಾದಿರಾಜ್ ನೇತೃತ್ವ ವಹಿಸಿದ್ದರು .
ಸಭೆಯಲ್ಲಿ 12 ಜಿಲ್ಲೆಗಳ ೩೦ಕ್ಕೂ ಹೆಚ್ಚು ಆದಿವಾಸಿ ನಾಯಕರು ಭಾಗವಹಿಸಿದ್ದರು.
ಮಕ್ಕಳ ಮಾನಸಿಕ ದೃಢತೆ ಹೆಚ್ಚಲು ಓದಿನ ಜೊತೆಗೆ ‘ಕ್ರೀಡೆ’ಯಲ್ಲೂ ಪಾಲ್ಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು
ಮಹಿಳಾ ನೌಕರರಿಗೆ ಮುಟ್ಟಿನ ರಜೆ: ಸಿಎಂ, ಡಿಸಿಎಂಗೆ ಸಾಗರದ ಸರ್ಕಾರಿ ನೌಕರರ ಸಂಘದ ಮಹಿಳಾ ಪದಾಧಿಕಾರಿಗಳು ಧನ್ಯವಾದ