ಸಾಗರ : ಅಂದು ಜ್ಯೂನಿಯರ್ ಕಾಲೇಜಿನಲ್ಲಿ ನಡೆಯುತ್ತಿದ್ದ ಗಲಾಟೆ, ದಾಂಧಲೆ ನೋಡಿ ನಾನು ದ್ವಿತೀಯ ಪಿಯುಸಿಗೆ ಶಿಕ್ಷಣ ಮೊಟಕುಗೊಳಿಸಿದವನು. ಅಂದು ಗುಣಮಟ್ಟದ ಶಿಕ್ಷಣ ಸಿಕ್ಕಿದ್ದರೆ ನಾನೂ ಬೇರೆಯದೆ ಉನ್ನತ ಸ್ಥಾನಕ್ಕೆ ಹೋಗುತ್ತಿದ್ದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ನಾನು ಶಿಕ್ಷಣ ಮೊಟಕುಗೊಳಿಸಿದ ಸ್ಥಿತಿ ಯಾರಿಗೂ ಬರಬಾರದು ಎಂದು ಶಾಲಾಕಾಲೇಜು ಅಭಿವೃದ್ದಿಗೆ ವಿಶೇಷ ಒತ್ತು ನೀಡುತ್ತಿದ್ದೇನೆ ಎಂದರು.
ತಂದೆತಾಯಿ ನಿಮ್ಮ ಮೇಲೆ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ತಾವು ಉಪವಾಸವಿದ್ದು ಸಾಲಸೋಲ ಮಾಡಿ ನಿಮಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಅಹೋರಾತ್ರಿ ಪ್ರಯತ್ನಿಸುತ್ತಿರುತ್ತಾರೆ. ಅವರ ಕನಸು ಈಡೇರಿಸುವ ಸಂಕಲ್ಪ ನೀವು ಕೈಗೊಳ್ಳಬೇಕು. ಇಲ್ಲಸಲ್ಲದ ವಿಷಯಗಳಿಗೆ ಮೂಗು ತೂರಿಸಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ಆಧುನಿಕ ದಿನಮಾನಗಳಲ್ಲಿ ಬೇರೆಬೇರೆ ಕ್ಷೇತ್ರದಲ್ಲಿ ವಿಫುಲವಾದ ಉದ್ಯೋಗಾವಕಾಶ ಇರುತ್ತದೆ. ಅದನ್ನು ಗುರುತಿಸಿ ನೀವು ಉನ್ನತ ಸ್ಥಾನಕ್ಕೆ ಹೋಗುವಂತಾಗಬೇಕು ಎಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ವಿದ್ಯಾರ್ಥಿಗಳು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ನಡುವೆ ಇಂದಿಗೂ ಮೇಲೂಕೀಳು, ಸಾಮಾಜಿಕ ಅಸಮಾನತೆ ಇದೆ. ವಿದ್ಯಾಭ್ಯಾಸದ ಮೂಲಕ ಮಾತ್ರ ಇಂತಹ ಅನಿಷ್ಟಗಳನ್ನು ಸಮಾಜದಿಂದ ದೂರ ಇರಿಸಲು ಸಾಧ್ಯವಿದೆ. ಕಾಲೇಜು ದಿನಗಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾಗಾನಂದ, ಡಾ.ಮಮತಾ ಹೆಗಡೆ, ಡಾ. ರಾಜು ಬಿ.ಎಲ್., ಈಳಿ ಶ್ರೀಧರ್, ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು.
BREAKING : ಇನ್ಮುಂದೆ ಸರ್ಕಾರದಿಂದಲೇ ‘108 ಆಂಬುಲೆನ್ಸ್’ ಸೇವೆ : ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ
GOOD NEWS: ರಾಜ್ಯದಲ್ಲಿ ‘NHM ಯೋಜನೆ’ಯಡಿ ನೇಮಕಗೊಳ್ಳುವ ವೈದ್ಯರು, ಸ್ಟಾಫ್ ನರ್ಸ್ ಗಳಿಗೆ ಭರ್ಜರಿ ಸಿಹಿಸುದ್ದಿ