ಬೆಂಗಳೂರು: ಕಜೆ ಆಯುರ್ವೇದ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಡಿಸೆಂಬರ್ 25 ರಿಂದ 28, 2025 ರ ವರೆಗೆ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಸಂಬಂಧ ಪತ್ರಿಕಾಗೋಷ್ಠಿಯು ಬೆಂಗಳೂರಿನ ರಾಜಾಜಿನಗರದ ಪ್ರಶಾಂತಿ ಆಯುರ್ವೇದಿಕ್ ಸೆಂಟರ್’ನಲ್ಲಿ ಇಂದು(23-12-2025) ನಡೆಯಿತು. ಈ ಸಮ್ಮೇಳನದ ರೂವಾರಿಗಳಾದ ಡಾ.ಗಿರಿಧರ ಕಜೆ ಸುದ್ದಿ ಗೋಷ್ಠಿಯನ್ನು ನಡೆಸಿ, ಐತಿಹಾಸಿಕ ವಿಶ್ವ ಸಮ್ಮೇಳನದ ಕುರಿತಾಗಿ ಮಾಹಿತಿ ನೀಡಿದರು. ಹಿಮಾಲಯ ವೆಲ್’ನೆಸ್ ಕಂಪನಿಯ ಡಾ. ಅಶೋಕ್, ದೂತಪಾಪೇಶ್ವರ ಕಂಪೆನಿಯ ಅಜಿತ್ ಹಾಗೂ ಅಭಿಷೇಕ್ ಉಪಸ್ಥಿತರಿದ್ದರು.
ಕಜೆ ಆಯುರ್ವೇದ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಡಿಸೆಂಬರ್ 25 ರಿಂದ 28, 2025 ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನವನ್ನು ಆಯೋಜಿಸಿದ್ದು, ಆಯುರ್ವೇದದ ವೈಶಿಷ್ಟ್ಯಗಳ ಅನಾವರಣ ಬೃಹತ್ ರೂಪದಲ್ಲಿ ನೆರವೇರಲಿದೆ. ನಾಡಿನ ಸಂತ ಮಹಂತರು – ಗಣ್ಯ ಮಾನ್ಯರು – ದೇಶ ವಿದೇಶಗಳ ಆಯುರ್ವೇದ ತಜ್ಞರ ಉಪಸ್ಥಿತಿಯಲ್ಲಿ ವಿಶಿಷ್ಟ ಆಯುರ್ವೇದ ಉತ್ಸವ ನಡೆಯಲಿದೆ.
ಶ್ರೀ ಧನ್ವಂತರಿ ಪೂಜೆ, ಸಮ್ಮೇಳನ ಆಶೀರ್ವಚನ, ಶ್ರೀ ಧನ್ವಂತರಿ ಮಹಾಯಜ್ಞ, ವೈಜ್ಞಾನಿಕ ವಿಚಾರ ಸಂಕಿರಣಗಳು, ಧನ್ವಂತರಿ ರಥೋತ್ಸವ, ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ವಸ್ತು ಪ್ರದರ್ಶನ, ಆಯುರ್ವೇದ ಆಹಾರ ಪ್ರದರ್ಶನಿ, ಆಯುರ್ವೇದ ಪಾಕೋತ್ಸವ, ಮೆಗಾ ಆಯುರ್ವೇದ ಎಕ್ಸ್‌ಪೋ, ಜನಪ್ರಿಯ ವೈದ್ಯರ ವಿಚಾರ ಧಾರೆ, ಆಯುರ್ವೇದ ಲೇಸರ್ ಶೋ, ಔಷಧೀಯ ಸಸ್ಯಗಳ ಉಚಿತ ವಿತರಣೆ, ಸಾಂಸ್ಕೃತಿಕ ಉತ್ಸವಗಳು, ವಿಶ್ವದ ನಾನಾ ಭಾಗಗಳ 6000+ ಪ್ರತಿನಿಧಿಗಳು, 400 ಸಾಧಕರಿಗೆ ಸನ್ಮಾನ, ಯಕ್ಷಗಾನ ಯಾನ, ಸ್ವದೇಶಿ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಈ ಐತಿಹಾಸಿಕ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಇರಲಿದ್ದು, 4 ದಿನದ ಕಾರ್ಯಕ್ರಮದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಧನ್ವಂತರಿ ಮಹಾಯಜ್ಞ – ಪೂಜೆ – ರಥೋತ್ಸವ
ಆಯುರ್ವೇದದ ಬೃಹತ್ ಉತ್ಸವದಲ್ಲಿ ಧನ್ವಂತರಿಯ ಮಹಾರಾಧನೆ ನಡೆಯಲಿದ್ದು, ಶ್ರೀಧನ್ವಂತರಿ ಮಹಾಯಜ್ಞ – ಧನ್ವಂತರಿ ಪೂಜೆಗಳು ನೆರವೇರಲಿದೆ. ಪಾರಂಪರಿಕ ರಥದಲ್ಲಿ ಧನ್ವಂತರಿಯ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಲಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಪಾರಂಪರಿಕ ರಥೋತ್ಸವ ಅಪರೂಪವಾಗಿದ್ದು, ಆಯುರ್ವೇದ ಸಮ್ಮೇಳನದ ಕಳೆಯನ್ನು ಹೆಚ್ಚಿಸುವುದರ ಜೊತೆಗೆ ದೇವತಾನುಗ್ರವನ್ನೂ ಕರುಣಿಸಲಿದೆ.
ಆಯುರ್ವೇದ ಅನುಭವ ಕೇಂದ್ರಗಳು
ಆಯುರ್ವೇದದ ಇತಿಹಾಸದಲ್ಲಿಯೇ ಪ್ರಥಮಬಾರಿಗೆ ವೈಶಿಷ್ಟ್ಯಪೂರ್ಣವಾದ 10 ಆಯುರ್ವೇದ ಅನುಭವ ಕೇಂದ್ರಗಳನ್ನು ಈ ಸಮ್ಮೇಳನದಲ್ಲಿ ಸ್ಥಾಪಿಸಲಾಗುತ್ತಿದ್ದು, ಪ್ರಾತ್ಯಕ್ಷಿಕೆ ರೂಪದಲ್ಲಿ ಪಾರಂಪರಿಕ ಆಯುರ್ವೇದ ಚಿಕಿತ್ಸಾ ವಿಧಾನ, ಸಂವಾದಾತ್ಮಕ ರೀತಿಯಲ್ಲಿ ಆಯುರ್ವೇದದ ಚಿಕಿತ್ಸಾ ಪದ್ಧತಿಯ ಪರಿಚಯವನ್ನು ಈ ಅನುಭವ ಕೇಂದ್ರಗಳು ಮಾಡಲಿದ್ದು, ಆಯುರ್ವೇದ ಜೀವನ ಪದ್ಧತಿಯ ಪ್ರತ್ಯಕ್ಷ ಅನುಭವವನ್ನು ಇದು ಕಟ್ಟುಕೊಡಲಿದೆ.
ಶಾಲಾ-ಕಾಲೇಜಿಗೆ ಒಳ್ಳೆಯ ಹೆಸರು ಬರಲು ಅಧ್ಯಾಪಕ ವೃಂದ ಪ್ರಮುಖ ಕಾರಣ: ಶಾಸಕ ಗೋಪಾಲಕೃಷ್ಣ ಬೇಳೂರು








