ಕೆಎನ್‌ಎನ್‌ಸಿನಿಮಾಡೆಸ್ಕ್: ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ ‘ಬ್ರಹ್ಮಗಂಟು’ ಖ್ಯಾತಿಯ ಗೀತಾ ಭಾರತಿ ಭಟ್ ನಾಯಕಿಯಾಗಿ ನಟಿಸಿರುವ ‘ರವಿಕೆ ಪ್ರಸಂಗ’ ಸಿನಿಮಾ ಇದೇ ಫೆ. 16ಕ್ಕೆ ಬಿಡುಗಡೆಯಾಗಲಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿಯಾಗಿ ಎಲ್ಲ ಕಡೆ ಸಖತ್ತು ಸೌಂಡ್ ಮಾಡುತ್ತಿದೆ.
ಅಂದ ಹಾಗೇ ಚಿತ್ರತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಸುತ್ತಾಡಿ, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ, ಚಿತ್ರತಂಡ ಕ್ರಿಯಾಶೀಲ ಹಾದಿಯಲ್ಲಿ, ಹಲವಾರು ಹೊಸತನಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲು ಮುಂದಾಗಿದೆ. ಸದ್ಯ ಸಿನಿಮಾ ಮಂದಿ ಉಡುಪಿಯ ಪ್ರಸಿದ್ಧ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಮೀಟ್ ಆಂಡ್ ಗ್ರೀಟ್ ಕಾನ್ಸೆಪ್ಟಿನಲ್ಲೊಂದು ಚೆಂದದ ಪ್ರಚಾರ ಕಾರ್ಯ ಮಾಡಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಉಡುಪಿಯ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ರವಿಕೆ ಪ್ರಸಂಗದ ಪ್ರಚಾರದ ನೆಪದಲ್ಲೊಂದು ಹಬ್ಬವೇ ನಡೆದು ಹೋಗಿದೆ. ಈ ಮಳಿಗೆಯ ಸರಿಸುಮಾರು ಒಂಬೈನೂರಕ್ಕೂ ಹೆಚ್ಚು ಸಿಬ್ಬಂದಿಗಳ ಸಮ್ಮುಖದಲ್ಲಿ ಚಿತ್ರ ತಂಡ ಮಾತನಾಡಿದೆ. ಇನ್ನೂ ಈ ಮಳಿಗೆಯ ಮಾಲೀಕರಾದ ವೀರೇಂದ್ರ ಹೆಗ್ಡೆ ಅವರ ಸಿನಿಮಾ ಪ್ರೀತಿಯಿಂದಾಗಿ. ಅವರು ಅತ್ಯಂತ ಆಪ್ತವಾಗಿ ಸಿನಿಮಾ ತಂಡದ ಜೊತೆ ತಮ್ಮ ಸಿಬ್ಬಂದಿಗಳ ಬೆರೆತು ಖುಷಿಪಡಲು ಅನುವು ಮಾಡಿ ಕೊಟ್ಟರು. ಈ ಮೀಟ್ & ಗ್ರೀಟ್ ಪರಿಕಲ್ಪನೆಯ ಪ್ರಚಾರ ಕಾರ್ಯದಲ್ಲಿ ಗೀತಾ ಭಾರತಿ ಭಟ್, ನಿರ್ದೇಶಕ ಸಂತೋಷ್ ಕೊಡಂಕೇರಿ, ಕಥೆಗಾರ್ತಿ, ಸಂಭಾಷಣಾಗಾರ್ತಿ ಪಾವನಾ ಸಂತೋಷ್, ರಕ್ಷಕ್, ಕಲ್ಯಾಣ್ ಸೇರಿದಂತೆ ಚಿತ್ರತಂಡ ಹಾಜರಿತ್ತು. ಈಗಾಗಲೇ ನಾನಾ ಭಾಗಗಳಲ್ಲಿ ವಿಭಿನ್ನ ಪರಿಕಲ್ಪನೆಯ ಮೂಲಕ ಚಿತ್ರತಂಡ ರವಿಕೆ ಪ್ರಸಂಗದ ಪ್ರಚಾರ ನಡೆಸಿದೆ. ಮೈಸೂರು, ಕೊಡಗು, ದಕ್ಷಿಣಕನ್ನಡವೂ ಸೇರಿದಂತೆ ನಾನಾ ಭಾಗಗಳಲ್ಲಿ ಈಗಾಗಲೇ ರವಿಕೆ ಪ್ರಸಂಗ ಸಿನಿಮಾದ ಪ್ರಚಾರ ಕಾರ್ಯವನ್ನು ಮಾಡುತ್ತಿದೆ.