ಮಂಡ್ಯ : ಮದ್ದೂರು ಕ್ಷೇತ್ರದಲ್ಲಿ ನೀರಾವರಿ, ರಸ್ತೆ ಹಾಗೂ ಮೂಲಭೂತ ಸೌಲಭ್ಯದಿಂದ ಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಕ್ಷೇತ್ರವನ್ನಾಳಿದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಗಂಭೀರ ಆರೋಪ ಮಾಡಿದರು.
ಮದ್ದೂರು ಪಟ್ಟಣದ ಶಿಕ್ಷಕರ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ 4 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವಲ್ಲಿ ಹಿಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಹೀಗಾಗಿ ನನ್ನ ಅಧಿಕಾರದ ಅವಧಿಯಲ್ಲಿ ಜನಪ್ರತಿನಿಧಿಗಳ ಚರ್ಚಿಸಿ ಹಂತ ಹಂತವಾಗಿ ಸಮಸ್ಯೆಗಳನ್ನು ಬಗಹರಿಸುತ್ತಿದ್ದೇನೆ ಎಂದರು.
ಹಿಂದುಳಿದ ವರ್ಗ ಬಡತನ, ತಾರತಮ್ಯ ಮತ್ತು ಕಳಪೆ ಸಾಮಾಜಿಕ ಸ್ಥಾನಮಾನಗಳನ್ನು ಎದುರಿಸುತ್ತಿವೆ. ಹೀಗಾಗಿ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂಬ ಉದ್ದೇಶದಿಂದ ಉಚಿತವಾಗಿ ವಸತಿ, ಸಮವಸ್ತ್ರ ಮತ್ತು ಪಠ್ಯೇತರ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನಕ್ಕೆ ಏರಬೇಕೆಂದರು.

ಶಿಕ್ಷಕರ ಬಡಾವಣೆಯಲ್ಲಿ ನಿರ್ಮಾಣಗೊಳ್ಳಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ನಿಲಯದಲ್ಲಿ ಸುಮಾರು 100 ಮಂದಿ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ದೊರಕಲಿದೆ ಎಂದು ತಿಳಿಸಿದರು.
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ತಾಲೂಕಿನ ಇಲಾಖಾ ಕಛೇರಿಯನ್ನು ವಿದ್ಯಾರ್ಥಿ ನಿಲಯದಲ್ಲೇ ಸ್ಥಳಾವಕಾಶ ಕಲ್ಪಿಸಲು ಕ್ರಮ ವಹಿಸಲಾಗುವುದು ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ತಗ್ಗಲಿದೆ ಎಂದು ಶಾಸಕ ಉದಯ್ ಹೇಳಿದರು.
ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ 1200 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಹೊಸ ಯೋಜನೆಗಳಿಂದ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸರ್ಕಾರದಿಂದ ಅನುದಾನ ತಂದು ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ವಾಗ್ದಾನ ನೀಡಿದರು.
ಇದೇ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಸದಸ್ಯರಾದ ಸಚಿನ್, ಬಸವರಾಜು, ಸರ್ವಮಂಗಳ, ಸೊಳ್ಳೆಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಕಾಶ್, ಗ್ರಾ.ಪಂ ಸದಸ್ಯರಾದ ಬಾಬು, ಸುನೀಲ್ ಕುಮಾರ್ ಮುಖಂಡರಾದ ಶಂಕರೇಗೌಡ, ಗೋಪಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಸುನೀತಾ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ನಿನ್ನೆ ಒಂದೇ ದಿನ ಬೆಂಗಳೂರಲ್ಲಿ ಬರೋಬ್ಬರಿ 54,653 ಗಣೇಶ ಮೂರ್ತಿ ವಿಸರ್ಜನೆ
ನಮ್ಮ ಸರ್ಕಾರ ಜಾತಿ ನೋಡಲ್ಲ, ಎಲ್ಲಾ ಜಾತಿಯವರ ಅಭಿವೃದ್ಧಿಯಷ್ಟೆ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ







