ಮಂಡ್ಯ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಮತ್ತು ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಶುಕ್ರವಾರ ಮದ್ದೂರು ಪಟ್ಟಣ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಮದ್ದೂರು ಪಟ್ಟಣ ವ್ಯಾಪ್ತಿಯ ಸರ್ಕಾರಿ ಕಛೇರಿಗಳು, ಬ್ಯಾಂಕ್, ಆಸ್ಪತ್ರೆ, ಶಾಲಾ ಕಾಲೇಜುಗಳು, ಚಿತ್ರ ಮಂದಿರಗಳು, ಮೆಡಿಕಲ್ ಶಾಪ್ ಹಾಗೂ ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟು ಬೆಳಿಗ್ಗೆಯಿಂದ ಸಂಜೆವರೆಗೂ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಹಿಂದೂ ಜಾಗರಣ ವೇದಿಕೆ, ವಿಶ್ವ ಒಕ್ಕಲಿಗರ ಸಂಘ, ಆರ್.ಎಸ್.ಎಸ್ ಧರ್ಮಸ್ಥಳ ಸಮಿತಿ, ವಕೀಲರ ಸಂಘ, ವರ್ತಕರ ಸಂಘ, ಜೆಡಿಎಸ್, ಬಿಜೆಪಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟ್ಟಣದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದಿಂದ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಬಾವುಟಗಳನ್ನು ಹಿಡಿದುಕೊಂಡು ಸಂಚರಿಸಿ ಘೋಷಣೆ ಕೂಗುತ್ತ ತಾಲೂಕು ಕಛೇರಿ ಮುಂದೆ ಕೆಲಕಾಲ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಕಛೇರಿ ಮುಂದೆ ನಡೆದ ಬಹಿರಂಗ ಸಭೆಯಲ್ಲಿ ಸಂಘಟನೆಗಳ ಮುಖಂಡರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರತೆಯನ್ನು ಹಾಳು ಮಾಡುವ ದೃಷ್ಟಿಯಿಂದ ಪಟ್ಟ ಭದ್ರ ಹಿತಾಸಕ್ತಿಗಳು ಕ್ಷೇತ್ರದ ಬಗ್ಗೆ ನಿರಂತರ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಉದ್ದೇಶಪೂರ್ವಕ ಅಪಪ್ರಚಾರವಾಗಿದೆ ಎಂದು ಕಿಡಿಕಾರಿದರು.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿಂದೆ ಹಿಂದೂ ವಿರೋಧಿಗಳ ಶಕ್ತಿ ಕೆಲಸ ಮಾಡುತ್ತಿದೆ. ಇಂತಹ ಉದ್ದೇಶಪೂರ್ವಕ ಅಪಪ್ರಚಾರದಿಂದ 10 ಸಾವಿರ ವರ್ಷಗಳ ಇತಿಹಾಸವುಳ್ಳ ಹಿಂದೂ ಧರ್ಮವನ್ನು ಅಳಿಸುವ ಮೂಲಕ ದೇಶವನ್ನು ವಿಭಜಿಸಲು ದುಷ್ಟ ಶಕ್ತಿಗಳು ಹುನ್ನಾರ ನಡೆಸುತ್ತಿವೆ ಎಂದು ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅರೆ ತಿಪ್ಪೂರು ಜೈನ ಮಠದ ಸಿದ್ದಾಂತ ಕೀರ್ತಿ ಭಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಎಂಟು ನೂರು ವರ್ಷಗಳಿಂದ ಲಕ್ಷಾಂತರ ಜನರ ಧಾರ್ಮಿಕ, ಶ್ರದ್ಧಾ ಕೇಂದ್ರವಾದ ಧರ್ಮಸ್ಥಳದ ವಿರುದ್ಧ ಕೆಲವು ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಇಲ್ಲಸಲ್ಲದ ಆರೋಪ ಮಾಡುತ್ತಾ ವೀರೇಂದ್ರ ಹೆಗ್ಗಡೆಯವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಕ್ಷೇತ್ರದ ಪಾವಿತ್ರ್ಯತೆ ಕಾಪಾಡಬೇಕು ಎಂದು ಆಗ್ರಹಿಸಿದರು.
ಇನ್ನು ಮದ್ದೂರು ಪಟ್ಟಣದ ಬಂದ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಮಂಜುನಾಥ್, ಪ್ರಿಯಾಂಕಾ ಅಪ್ಪುಗೌಡ, ಮಲ್ಲೇಶ್, ವೀರಭದ್ರಸ್ವಾಮಿ, ಸಿ.ಕೆ.ಸತೀಶ್, ನೈದಿಲೆ ಚಂದ್ರು, ಗೋಪಿ, ಎಂ.ಸಿ.ನಿಂಗರಾಜ್, ಡಾಬಾ ರವಿ, ಕೆ.ಟಿ.ನವೀನ್, ಲಿಂಗೇಗೌಡ, ಗುರುಮಲ್ಲೇಶ್, ಯೋಗಾನಂದ, ಗುರುಮೂರ್ತಿ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ASME ವತಿಯಿಂದ ಅಂತಾರಾಷ್ಟ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್ ಮತ್ತು ಎಕ್ಸ್‌ಪೋಸಿಷನ್ ಆಯೋಜನೆ