ಶಿವಮೊಗ್ಗ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ, ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಸ್ವತಂತ್ರ ಹಳ್ಳಿ ಎಂದು ಘೋಷಿಸಿಕೊಂಡು ಇತಿಹಾಸ ಸೃಷ್ಟಿಸಿದ ಶಿವಮೊಗ್ಗ ಜಿಲ್ಲೆಯ ಈಸೂರು ದಂಗೆಯ ಕೊನೆಯ ಕೊಂಡಿ ಕಳಚಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಕೆ. ದೇವೇಂದ್ರಪ್ಪ (99) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ತಿಮ್ಲಾಪುರ ಗ್ರಾಮದ ನಿವಾಸಿಯಾಗಿದ್ದ ದೇವೇಂದ್ರಪ್ಪ ಅವರು, 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ನಡೆದ ಐತಿಹಾಸಿಕ ಈಸೂರು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈಸೂರು ದಂಗೆಯು ಕೇವಲ ಒಂದು ಸ್ಥಳೀಯ ಘಟನೆಯಾಗಿರಲಿಲ್ಲ, ಬದಲಿಗೆ ಬ್ರಿಟಿಷ್ ಆಡಳಿತದ ವಿರುದ್ಧ ಭಾರತೀಯರ ಅಚಲ ಸಂಕಲ್ಪ ಮತ್ತು ಪ್ರತಿರೋಧದ ಸಂಕೇತವಾಗಿತ್ತು. ಏಸೂರು ಕೊಟ್ಟರೂ ಈಸೂರು ಬಿಡೆವು ಎಂಬ ವೀರ ಘೋಷಣೆಯು ಅಂದಿನ ಹೋರಾಟಗಾರರ ಧೈರ್ಯ ಮತ್ತು ದೇಶಪ್ರೇಮಕ್ಕೆ ಸಾಕ್ಷಿಯಾಗಿದೆ. ಈ ಘೋಷಣೆಯು ಬ್ರಿಟಿಷ್ ಅಧಿಕಾರಿಗಳನ್ನು ಊರ ಹೊರಗೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತು.
ದೇವೇಂದ್ರಪ್ಪ ಅವರು ಈ ಚಳುವಳಿಯಲ್ಲಿ ಹುಚ್ಚರಾಯಪ್ಪ ಅವರಿಗೆ ಸಾಥ್ ನೀಡಿದ್ದರು. ಅವರ ಹೋರಾಟದ ಹಾದಿಯಲ್ಲಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ್ದರು. ಅವರ ತ್ಯಾಗ ಮತ್ತು ಬಲಿದಾನವು ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಈಸೂರು ದಂಗೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಈ ದಂಗೆಯು ಬ್ರಿಟಿಷ್ ಆಡಳಿತಕ್ಕೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿತು.
ಈಸೂರು ದಂಗೆಯ ರೂವಾರಿ, ಕೊನೆಯ ಕೊಂಡಿ ಟಿ.ಕೆ ದೇವೇಂದ್ರಪ್ಪ ಅವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪತ್ರಕರ್ತರಿಗೆ ಸರ್ಕಾರಿ ನಿವೇಶನ ಹಂಚಿಕೆಯ ವೇಳೆ ಶೇ.5ರಷ್ಟು ಮೀಸಲಾತಿ ನೀಡಿ: ಸಿಎಂಗೆ KUWJ ಮನವಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಾಂಗ್ರೆಸ್ MLC ರಮೇಶ್ ಬಾಬು ಹಿಗ್ಗಾಮುಗ್ಗಾ ವಾಗ್ಧಾಳಿ








