ಬೆಂಗಳೂರು : ಗ್ರಾಮ ಪಂಚಾಯಿತಿ ಮಾದರಿಯಲ್ಲಿ ರಾಜ್ಯದ ಎಲ್ಲಾ ಸಹಕಾರಿ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾಗಳಲ್ಲೂ ಎಸ್ ಸಿ, ಎಸ್ ಟಿ, ಒಬಿಸಿ ಮತ್ತು ಮಹಿಳಾ ಮೀಸಲಾತಿ ಕಲ್ಲಿಸುವ ‘ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ-2025’ಕ್ಕೆ ವಿಧಾನ ಪರಿಷತ್ ನಲ್ಲೂ ಅಂಗೀಕಾರ ದೊರೆತಿದೆ.
ಸಹಕಾರಿ ಸಂಘಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಲ್ಪಿಸುವುದು ಹಾಗೂ ನಾಮನಿರ್ದೇಶನ ಮಾಡುವಂತಹ ಅವಕಾಶ ಹೊಂದಿರುವ ಕಾನೂನನ್ನು ರೂಪಿಸಿದೆ. 2025ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ಪ್ರತಿಪಕ್ಷ ಸದಸ್ಯರ ಆಕ್ಷೇಪ, ಆಗ್ರಹಗಳ ನಡುವೆ ಸರ್ಕಾರ ಧ್ವನಿಮತದಿಂದ ವಿಧೇಯಕಕ್ಕೆ ಒಪ್ಪಿಗೆ ಪಡೆದುಕೊಂಡಿತು.
ವಿಧಾನಸಭೆಯಲ್ಲಿ ಅಂಗೀಕಾರ ರೂಪದಲ್ಲಿದ್ದ ಈ ವಿಧೇಯಕವನ್ನು ಮುಖ್ಯಮಂತ್ರಿ ಅವರ ಪರವಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ಬುಧವಾರ ಮಂಡಿಸಿ ಅಂಗೀಕರಿಸಲು ಸದನವನ್ನು ಕೋರಿದರು. ಸಹಕಾರಿ ಸಂಸ್ಥೆಗಳ ಅಧ್ಯಕ್ಷ, ಉಪಾ ಧ್ಯಕ್ಷಸ್ಥಾನಗಳಿಗೆ ಮೀಸಲಾತಿ ತರುತ್ತಿರುವುದು ಸ್ವಾಗತ. ಆದರೆ, ಇದರಲ್ಲಿ ಸ್ಪಷ್ಟತೆ ಇಲ್ಲ. ಮೀಸಲಾತಿ ಯಾವಾಗ, ಹೇಗೆ ಸಿಗುತ್ತದೆ ಎಂದು ತಿಳಿಸಬೇಕು ಎಂದು ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಸದಸ್ಯರು ಕೆಲವು ಪ್ರಶ್ನೆಗಳನ್ನು ಎತ್ತಿದರು.