ಧಾರವಾಡ : ಕನ್ನಡಕ್ಕಾಗಿ ಹೋರಾಟ ನಡೆಸಿದವರ ಮೇಲೆ ಪೊಲೀಸ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ಪೊಲೀಸ್ ಮತ್ತು ಜಿಲ್ಲಾಡಳಿತ ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.
ಅವರು ಇಂದು (ಜುಲೈ 9) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಗೋಕಾಕ ಚಳುವಳಿಯ ಸ್ಮರಣೆಗಾಗಿ ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ಹತ್ತಿರ ಇರುವ ಸರ್ಕಲ್‍ನಲ್ಲಿ ಡಾ. ರಾಜಕುಮಾರ ಅವರ ಸ್ಮಾರಕವನ್ನು ನಿರ್ಮಿಸಬೇಕು ಎಂಬುದು ಕನ್ನಡಪರ ಹೋರಾಟಗಾರರ ಬೇಡಿಕೆಯಾಗಿದೆ. ಈ ಕುರಿತು ಸರ್ಕಾರಕ್ಕೆ ನಿಯಮಾನುಸಾರ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕನ್ನಡ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವದರಿಂದ ಗ್ರಾಹಕರಿಗೆ ಭಾಷೆ ಸಮಸ್ಯೆ ಉಂಟಾಗುತ್ತಿದೆ. ಕೇಂದ್ರ ಸರ್ಕಾರ ಸ್ಥಳೀಯ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಬ್ಯಾಂಕ್ ಉದ್ಯೋಗಿಗಳಿಗೆ ಸ್ಥಳೀಯ ಭಾಷೆ, ವಿಶೇಷವಾಗಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ರಾಜ್ಯ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಹಿನ್ನಲೆಯಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಸ್ಥಳೀಯ ಭಾಷೆ, ಕನ್ನಡ ಕಲಿಯಲು ಕ್ರಮವಹಿಸಿದೆ. ರಾಜ್ಯದ ಎರಡು ಪ್ರಮುಖ ಕೇಂದ್ರಗಳಾಗಿರುವ ಧಾರವಾಡ ಮತ್ತು ಮೈಸೂರು ಭಾಗದಲ್ಲಿ ಕನ್ನಡ ಭಾಷೆಗೆ ಹಿನ್ನಡೆ, ಕುಸಿತವಾದರೆ, ಕರ್ನಾಟಕದಲ್ಲಿ ಕನ್ನಡ ಭಾಷೆಗೆ ತೊಂದರೆ ಆಗುತ್ತದೆ ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅನುತ್ತೀರ್ಣ ಆಗಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ತಾಲೂಕುವಾರು ಪಡೆದು, ಇದಕ್ಕೆ ಕಾರಣವಾಗಿರುವ ಅಂಶಗಳನ್ನು ವಿಶ್ಲೇಷಿಸಿ, ಶಿಕ್ಷಣ ಇಲಾಖೆಯು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾಹಿತಿ ಸಲ್ಲಿಸಬೇಕು. ಪ್ರಾಧಿಕಾರವು ಈ ಕುರಿತು ಪರಿಶೀಲಿಸಿ, ಕನ್ನಡ ವಿಷಯದಲ್ಲಿ ಫಲಿತಾಂಶ ಕಡಿಮೆ ಆಗಲು ಕಾರಣ, ಪಠ್ಯಪುಸ್ತಕದ ವಿಷಯ, ಅಧ್ಯಾಪಕರು ಪಾಠದ ಕ್ರಮದ ಬಗ್ಗೆ ವಿರ್ಮಶಿಸಿ, ಸರ್ಕಾರಕ್ಕೆ ಸವಿವರವಾದ ವರದಿ ನೀಡುತ್ತೇವೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಎಲ್ಲ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಇರಬೇಕು. ಆದರೆ ಅವಳಿನಗರದಲ್ಲಿ ನೋಡಿದಾಗ ಸರ್ಕಾರದ ಈ ನಿಯಮ ಸರಿಯಾಗಿ ಪಾಲನೆಯಾಗಿಲ್ಲ ಎಂಬುವುದು ಕಂಡುಬರುತ್ತಿದೆ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ಈ ಕುರಿತು ಕ್ರಮವಹಿಸಿ, ಎಲ್ಲ ಪ್ರಕಾರದ ಅಂಗಡಿ, ಮುಗ್ಗಟ್ಟುಗಳ ಹಾಗೂ ಇತರ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಅಕ್ಷರಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಸ್ಥಳೀಯ ಮಹನೀಯರ ಹೆಸರುಗಳನ್ನು ಇಡಬೇಕು ಎಂದು ಬೇಡಿಕೆ ಬಂದಿದೆ. ಸ್ಥಳೀಯರ ಹೆಸರುಗಳನ್ನು ಪಟ್ಟಿಮಾಡಿ ಪ್ರಾಧಿಕಾರದಿಂದ ಹಾಗೂ ಜಿಲ್ಲಾಡಳಿತ ಸೇರಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಬ್ಯಾಂಕ್, ಅಂಚೆ ಕಚೇರಿ, ಕೈಗಾರಿಕೆ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೇರೆ ರಾಜ್ಯಗಳ ಉದ್ಯೋಗಿಗಳು ಕನ್ನಡ ಕಲಿಯಬೇಕು. ಅವರ ಆಸಕ್ತಿಗೆ ಅನುಗುಣವಾಗಿ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಅಲ್ಪಾವಧಿಯ ಕನ್ನಡ ಕಲಿಕೆಗಾಗಿ ಮೂರು ತಿಂಗಳಿಗೊಂದು ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ. ತರಬೇತಿ ಅವಧಿಯಲ್ಲಿ ದಿನಕ್ಕೆ ಒಂದು ಗಂಟೆಯಂತೆ ವಾರಕ್ಕೆ ಮೂರು ಗಂಟೆ ಮತ್ತು ತಿಂಗಳಿಗೆ 12 ಗಂಟೆ ಹೀಗೆ ಮೂರು ತಿಂಗಳಿಗೆ ಮೂವತ್ತಾರು ಗಂಟೆಗಳ ಅವಧಿಯ ತರಬೇತಿ ನೀಡಲಾಗುತ್ತದೆ.
ತರಬೇತಿ ಅವಧಿಯ ಮೂರು ತಿಂಗಳಲ್ಲಿ ಉದ್ಯೋಗಿಗೆ ಕನ್ನಡ ಮಾತನಾಡಲು, ಸಂವಹನ ಮಾಡಲು, ದಿನನಿತ್ಯದ ಸಂವಹನಕ್ಕೆ ಅಗತ್ಯವಿರುವ ಸಾಮಾನ್ಯ ಕನ್ನಡವನ್ನು ಹೇಳಿಕೊಡಲಾಗುತ್ತದೆ ಎಂದು ಹೇಳಿದರು.
ಅಗತ್ಯವಿದ್ದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕನ್ನಡ ಕಲಿಕಾ ಕೇಂದ್ರವನ್ನು ಪ್ರಾಧಿಕಾರದಿಂದ ತೆರೆಯಲಾಗುತ್ತದೆ. ಇದರ ಸಂಪೂರ್ಣ ವೆಚ್ಚವನ್ನು ಕನ್ನಡ ಪ್ರಾಧಿಕಾರದಿಂದಲೇ ಭರಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗಿದೆ. ಮಹಾನಗರ ಪಾಲಿಕೆಯಿಂದ ವಾಣಿಜ್ಯ ಮಳಿಗೆಗಳಿಗೆ ಪರವಾನಿಗೆ ಪತ್ರ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಲು ಮತ್ತು ತಮ್ಮ ಅಂಗಡಿಯ ನಾಮಫಲಕಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಸ್ಥಳದಲ್ಲಿ ಕನ್ನಡ ಬಳಸಲು ಸೂಚಿಸಲಾಗುತ್ತದೆ. ಈ ಕುರಿತು ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳಲು ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಮುಂದಿನ ತಿಂಗಳು ಈ ಕುರಿತು ಕನ್ನಡ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಕನ್ನಡ ಭಾಷಾ ಅಭಿಮಾನ ಮಕ್ಕಳಲ್ಲಿ ಬಾಲ್ಯದಿಂದಲೇ ಬೆಳೆಯಬೇಕು. ಈ ಪರಿಸರ ಮನೆಯಿಂದಲೇ ಮೂಡಬೇಕು. ಮನೆಗಳಲ್ಲಿ ಮಕ್ಕಳೊಂದಿಗೆ ಪಾಲಕರು ಅಚ್ಚಕನ್ನಡದಲ್ಲಿ ಮಾತನಾಡಬೇಕು. ಇದರಿಂದ ಮಕ್ಕಳ ಭಾಷಾ ಅಭಿಮಾನ ಹೆಚ್ಚುತ್ತದೆ. ವಿವಿಧ ಕಚೇರಿ ಹಾಗೂ ಉದ್ಯಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರರಾಜ್ಯದ ಉದ್ಯೋಗಿಗಳಿಗೆ ಕನ್ನಡ ಕಲಿಸಲು ಪ್ರಾಧಿಕಾರವು ಜಿಲ್ಲೆಯಲ್ಲಿ ಕಲಿಕಾ ಕೇಂದ್ರವನ್ನು ತೆರೆಯಲು ನಿರ್ಧರಿಸಲಿದ್ದಲ್ಲಿ, ಜಿಲ್ಲಾಡಳಿತವು ಕ್ರಮವಹಿಸಿ, ಶೀಘ್ರದಲ್ಲಿ ಕನ್ನಡ ಕಲಿಯುವವರ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಾಯಿಸುವ ವಿವಾಹಗಳಿಗೆ ನೀಡುವ ವಿವಾಹ ಪ್ರಮಾಣ ಪತ್ರವನ್ನು ಆಧಾರ ಕಾರ್ಡ್‍ದಲ್ಲಿ ಇರುವಂತೆ ಕನ್ನಡದೊಂದಿಗೆ ಇಂಗ್ಲೀಷ್ ಭಾಷೆಯನ್ನು ಬಳಸುವ ಕುರಿತು ಹೊರರಾಜ್ಯದವರಿಂದ ಮನವಿಗಳು ಸಲ್ಲಿಕೆಯಾಗಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ, ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಸಭೆ ನಿರ್ವಹಿಸಿದರು.
ವೇದಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದ್ರಾಕ್ಷಾಯಿಣಿ ಹುಡೇದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್, ಆಪ್ತ ಕಾರ್ಯದರ್ಶಿ ಮಣಿಕುಮಾರ, ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ಇದ್ದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ನಿಗಮ ಮಂಡಳಿಗಳ ಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು.
ಗ್ರಾಹಕನಿಗೆ ಮೋಸ ಮಾಡಿದ ಬೆಂಗಳೂರಿನ ‘ಲೈಫ್ ಸ್ಟೈಲ್ ಹಾಲಿಡೇಸ್’ಗೆ ಕೋರ್ಟ್ ದಂಡ, ಪರಿಹಾರ ನೀಡಲು ಆದೇಶ
ಈಗ ಆಧಾರ್ ಕಾರ್ಡ್ ನವೀಕರಣಕ್ಕೆ ಈ ದಾಖಲೆಗಳು ಕಡ್ಡಾಯ: ಹೀಗಿವೆ UIDAI ಹೊಸ ನಿಯಮಗಳು | Aadhaar Update