ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ.ವೇಗವಾಗಿ ಬೆಳೆಯುತ್ತಿರುವ ಆಧುನಿಕ ಬದುಕಿಗೆ ಹೊಂದಿಕೊಳ್ಳುತ್ತಾ, ಎಲ್ಲರ ಜೀವನಶೈಲಿ ಹಾಗೂ ಆಹಾರ ಪದ್ಧತಿ ಬದಲಾಗಿರುವ ಪರಿಣಾಮ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸದ್ದಿಲ್ಲದೆ ದುಷ್ಪರಿಣಾಮಿಸುತ್ತಿದೆ. ಹೆಚ್ಚುತ್ತಿರುವ ಹೃದಯಘಾತಕ್ಕೆ ಕಾರಣಗಳನ್ನು ಗಮನಿಸಿದಾಗ ಬಹು ಮುಖ್ಯವಾಗಿ ಮಾದಕ ವಸ್ತುಗಳ ಸೇವನೆಯು( ಸಿಗರೇಟ್,ಗುಟಕ ಇತ್ಯಾದಿ) ಎದ್ದು ತೋರುತ್ತಿದ್ದರು,ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿ ತೆರೆಮರೆಯಲ್ಲಿ ಇರುವ ಕಾರಣಗಳು.
ಆಹಾರ ಪದ್ಧತಿ :
“ಆಹಾರ ಸಂಭವೋ ದೇಹಃ” ಅಂದರೆ ದೇಹವು ಆಹಾರದಿಂದ ರಚನೆಯಾಗಿದೆ. ಹೀಗಿದ್ದಲ್ಲಿ ಪಾಶ್ಚಿಮಾತ್ಯ ಜೀವನಶೈಲಿಯ ಅನುಕರಣೆಯಿಂದ ಅತಿಯಾದ ಜಂಕ್ ಫುಡ್ಗ / ಫಾಸ್ಟಪುಡ್ ಗಳ ಸೇವನೆಯಿಂದ, ಅಪರೂಪವಾಗಿದ್ದಂತಹ ಸಕ್ಕರೆ ಕಾಯಿಲೆ,ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.
ಕೇವಲ ಆಕರ್ಷಣೆ ಮತ್ತು ರುಚಿಕರವಾದಂತಹ ಈ ಪದಾರ್ಥಗಳು ಕಡಿಮೆ ಪೌಷ್ಟಿಕತೆ, ಅತಿಯಾದ ಕ್ಯಾಲೋರಿಗಳಿಂದ ಕೂಡಿವೆ.ಹಲವಾರು ಸಂಶೋಧನೆಗಳ ಪ್ರಕಾರ ಇಂತಹ ಪದಾರ್ಥಗಳ ಸೇವನೆಯಿಂದ ಅತಿಯಾದ ಕೊಬ್ಬಿನಾಂಶ (hyper cholesterol),ರಕ್ತದೊತ್ತಡ(Hypertension), ಸಕ್ಕರೆ ಖಾಯಿಲೆ( Diabetes),ಅತಿಯಾದ ಬೊಜ್ಜು(obesity) ಹಾಗೂ ಹೃದಯದ ಖಾಯಿಲೆಗಳಿಗೆ(Cardiac Diseases) ಕಾರಣವಾಗಿವೆ. ಇದಲ್ಲದೆ ಆಹಾರ ಸೇವಿಸುವ ಕ್ರಮ, ಆಹಾರದ ಪ್ರಮಾಣ ಮತ್ತು ಸಮಯ ಕೂಡ ಬಹು ಮುಖ್ಯ. ಅತಿಯಾದ ಆಹಾರ ಸೇವಿಸುವುದು(over eating) ಅಥವಾ ಪದೇ ಪದೇ ಆಹಾರ ಸೇವಿಸುವುದರಿಂದ (frequent eating), ಹೃದಯದ ಮೇಲೆ ಒತ್ತಡ ಬೀರುತ್ತದೆ.ಆಹಾರ ಸೇವಿಸಿದ ತಕ್ಷಣವೇ ಅತಿಯಾದ ಕೆಲಸ ಹಾಗೂ ವ್ಯಾಯಾಮವನ್ನು ಮಾಡಕೂಡದು. ಮೊದಲು ಸೇವಿಸಿದ ಆಹಾರ ಜೀರ್ಣವಾದ ನಂತರವೇ ಆಹಾರವನ್ನು ಸೇವಿಸಬೇಕು.
ವ್ಯಾಯಾಮ :
ಅತಿಯಾದ ಬೊಜ್ಜನ್ನು ಕರಗಿಸಲು ಮಾಡುವ ಉಪವಾಸ,ಜಿಮ್ ನಲ್ಲಿ ಮಾಡುವ ಕಸರತ್ತು ಇವುಗಳನ್ನು ಸರಿಯಾದ ಕ್ರಮಗಳಲ್ಲಿ ಮಾಡದಿರುವುದು, ಅತಿಯಾದ ವ್ಯಾಯಾಮ, ಅಥವಾ ವ್ಯಾಯಾಮವನ್ನು ಮಾಡದಿರುವುದರಿಂದ ಹೃದಯ ರೋಗಗಳು ಸಂಭವಿಸಬಹುದು. ಹಾಗಾದರೆ ಎಷ್ಟು ವ್ಯಾಯಾಮ ಮಾಡಬೇಕು? ವ್ಯಕ್ತಿಯು ತನ್ನ ದೇಹಬಲದ ಅರ್ಥದಷ್ಟು (ಅರ್ಥ ಶಕ್ತಿ) ವ್ಯಾಯಾಮವನ್ನು ಮಾಡಬೇಕು.ಅಂದರೆ ಹಣೆಯ ಮೇಲೆ ,ಮೂಗಿನಲ್ಲಿ,ಕಂಕುಳದಲ್ಲಿ ಬೆವರು ಬರುವವರೆಗೆ ಮಾತ್ರ ಹಾಗೂ ದೇಹಕ್ಕೆ ಅತಿಯಾದ ಶ್ರಮವಾಗುವ ಮೊದಲೇ ವ್ಯಾಯಾಮವನ್ನು ನಿಲ್ಲಿಸಬೇಕು.
ನಿದ್ರೆ :
ಮೊಬೈಲ್,ಕಂಪ್ಯೂಟರ್ ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುತ್ತಾ ತಡರಾತ್ರಿಯಾಗಿ ಮಲಗುವುದು, ರಾತ್ರಿ ಜಾಗರಣೆ ಹಾಗೂ ಹಗಲು ನಿದ್ರೆ ಇವುಗಳು ಕೂಡ ಹೃದಯದ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತವೆ.
ಸಂಶೋಧನೆ ಪ್ರಕಾರ ಕಡಿಮೆ ನಿದ್ರೆಸುವುದರಿಂದ(<7 hours/day),ರಕ್ತದೊತ್ತಡ, ಹೃದಯನಾಳಗಳಲ್ಲಿ ಶೋಥ (inflammation) ಮತ್ತು ಪಾಶ್ವವಾಯು ಸಂಭವಿಸಬಹುದು. ಸತತವಾಗಿ ರಾತ್ರಿ ಸಮಯದಲ್ಲಿ 4 ಗಂಟೆಯಷ್ಟೇ ನಿದ್ರಿಸುವುದು ಅಥವಾ ಸತತವಾಗಿ ಐದು ವರ್ಷಗಳ ಕಾಲದವರೆಗೆ ಆನಿಮಯತವಾದ(irregular) ಮಲಗುವ ಸಮಯ ಮತ್ತು ಏಳುವ ಸಮಯದಿಂದ,ಹೃದಯದ ರೋಗಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು. ಇದಲ್ಲದೆ ಒಂದು ಗಂಟೆಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಸಮಯ ಹಗಲು ನಿದ್ರೆಯಿಂದಲೂ ಕೂಡ ಇಂತಹ ತೊಂದರೆಗಳು ಉಂಟಾಗಬಹುದು.
ಧೂಮಪಾನ ಮತ್ತು ತಂಬಾಕು (ಬೀಡಿ, ಸಿಗರೇಟ್, ಗುಟ್ಕಾ)
ದಿನ ಕಳೆದಂತೆ ಮಾದಕ ದ್ರವ್ಯಗಳ ಸೇವನೆ ವೈಪರಿತ್ಯವಾಗಿದೆ.ಅದರಲ್ಲೂ ಯುವಕರು ಇವುಗಳಿಗೆ ಹೆಚ್ಚು ಆಕರ್ಷಿತಗೊಂಡಿದ್ದಾರೆ. ಈ ಪದಾರ್ಥಗಳಲ್ಲಿ ಇರುವ ರಾಸಾಯನಿಕಗಳು ರಕ್ತನಾಳದಲ್ಲಿರುವ ಒಳಪದರವನ್ನು ಹಾನಿಮಾಡುತ್ತವೆ. ಹಾನಿಯಾದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ರಕ್ತನಾಳಗಳು ಕ್ರಮೇಣ ಬ್ಲಾಕ್ ಆಗುತ್ತವೆ.
ಮಾನಸಿಕ ಆರೋಗ್ಯ:
ಕೇವಲ ಆಹಾರ ,ಜೀವನ ಶೈಲಿಯಲ್ಲದೆೇ ಮಾನಸಿಕ ಸ್ಥಿತಿಯು ಕೂಡ ಹೃದಯದ ಆರೋಗ್ಯದ ಮೇಲೆ ಪರಿಣಮಿಸುತ್ತದೆ. ಅತಿಯಾದ ಚಿಂತೆ, ಭಯ ಹಾಗೂ ಮಾನಸಿಕ ಒತ್ತಡ ಹೊಂದಿರುವ ಮನುಷ್ಯರಲ್ಲಿ ಶೇಕಡ 50 % ರಿಂದ 70 % ಹೃದಯ ಖಾಯಿಲೆಗಳು ಸಂಭವಿಸುವ ಸಾಧ್ಯತೆ ಹೆಚ್ಚು.
ಇವುಗಳಲ್ಲದೇ ಈಗಾಗಲೇ ಸಕ್ಕರೆಖಾಯಿಲೆ, ರಕ್ತದೊತ್ತಡ, ಅತಿಯಾದ ಬೊಜ್ಜು ಮುಂತಾದವುಗಳಿಂದ ಬಳಲುತ್ತಿರವವರಲ್ಲಿಯು ಕೂಡ ಹೃದಯದ ಸಮಸ್ಯೆಗಳು ಬರುವ ಸಾದ್ಯತೆ ಹೆಚ್ಚಾಗಿರುವುದರಿಂದ ನಿಯಮಿತ ಕಾಲಕ್ಕೆ ವೈದ್ಯರ ಸಲಹೆ ಹಾಗೂ ಸೂಚನೆಯಂತೆ ಔಷಧಿಗಳನ್ನು ತೆಗೆದುಕೊಳ್ಳಿ.
ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡರೆ, ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿ.
ದೈನಂದಿನ ಆರೋಗ್ಯದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು 8660885793 ಗೆ ಮೇಸೆಜ್ ಮಾಡಿ.
ಲೇಖಕರು: ಡಾ. ಪ್ರವೀಣ್ ಕುಮಾರ್ BAMS, MD, ಆಯುರ್ವೇದ ವೈದ್ಯರು.
BREAKING: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಚಾಕೊಲೇಟ್ ಆಸೆ ತೋರಿಸಿ ಬಾಲಕಿ ಮೇಲೆ ಕಾಮುಕ ಅತ್ಯಾಚಾರ
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ