ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಸಂಘ-ಸಂಸ್ಥೆಗಳು, ಸಂಘಟನೆಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿ ಆಸ್ತಿಗಳನ್ನು ಬಳಸಿಕೊಳ್ಳುವುದನ್ನು ನಿಯಂತ್ರಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಇಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಟಿಪ್ಪಣಿ ಹೊರಡಿಸಿದ್ದು, ಅದರಲ್ಲಿ ದಿನಾಂಕ:16-10-2025ರ ಸಚಿವ ಸಂಪುಟದಲ್ಲಿ ಕೆಳಕಂಡಂತೆ ನಿರ್ಣಯ ಕೈಗೊಳ್ಳಲಾಗಿದೆ.
1) ಸರ್ಕಾರದ / ಸರ್ಕಾರಿ ಸಾಮ್ಯದ / ನಿಗಮ/ಮಂಡಳಿಗಳ ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತು ಇತರ ಆಸ್ತಿ / ಜಾಗಗಳು ನಾಗರೀಕರ ಸದ್ಬಳಕೆಗೆ ನಿರ್ಧಿಷ್ಟಪಡಿಸಲಾಗಿರುತ್ತದೆ. ಇವುಗಳನ್ನು ಸಾರ್ವಜನಿಕರು ಬಳಸಲು ಯಾವುದೇ ಅಡಚಣೆಗಳು, ಬೆದರಿಕೆಗಳು ಉದ್ಭವಿಸದಂತೆ ಕ್ರಮವಹಿಸುವುದು ಅತ್ಯಗತ್ಯವಾಗಿರುತ್ತದೆ. ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು, ಸಾರ್ವಜನಿಕರ ಸಾರ್ವತ್ರಿಕ ಅಸಮಾಧಾನಗಳನ್ನು ನಿವಾರಿಸುವುದು ಸಹ ಅವಶ್ಯವಾಗಿರುತ್ತದೆ.
2) ರಾಜ್ಯದಲ್ಲಿ ಹಲವಾರು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆಗಳು, ಪುಚಾರ, ತರಬೇತಿ, ಉತ್ಸವಗಳು ಹಾಗೂ ಸದಸ್‌ಯರ ಮತ್ತು ಬೆಂಬಲಿಗರ ಸಭೆಗಳು ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು / ಸರ್ಕಾರದ ಆಸ್ತಿಗಳು, ಜಮೀನುಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಇತ್ಯಾದಿಗಳನ್ನು ಸರ್ಕಾರ ಅಥವಾ ಸಂಬಂಧಿತ ಇಲಾಖೆಗೆ ಮುಂಚಿತವಾಗಿ ಅನುಮತಿ ಪಡೆಯದೆ, ಅನೇಕ ಸಂದರ್ಭಗಳಲ್ಲಿ ಮಾಹಿತಿ ನೀಡದ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇಂತಹ ಕ್ರಿಯೆಗಳು ಅಕ್ರಮ ಪ್ರವೇಶ (Tresspass) ಎಂದು ಪರಿಗಣಿಸಲ್ಪಡುತ್ತವೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಉಂಟುಮಾಡುತ್ತವೆ. ಈ ಕಾರಣದಿಂದ ಸರ್ಕಾರದ ಯಾವುದೇ ಆಸ್ತಿ | ಸ್ಥಳದ ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಯಾವುದೇ ಸಂಘಟನೆ, ಸಂಸ್ಥೆ, ಸಂಘವು ಆಯಾ ಸಾರ್ವಜನಿಕ ಆಸ್ತಿ/ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಬಳಸಿಕೊಳ್ಳಲು ಅನುಮತಿ ನೀಡುವುದು ಅಗತ್ಯವಾಗಿರುತ್ತದೆ.
3) ಯಾವುದೇ ಚಟುವಟಿಕೆಗಳು ಸಾರ್ವಜನಿಕರಿಗೆ ಅನಾನುಕೂಲವಾಗುವುದಾದಲ್ಲಿ ಹಾಗೂ ಸಂಬಂಧಿಸಿದ ಸಂಸ್ಥೆಗಳ ಆವರಣ/ಜಾಗದಲ್ಲಿ ನಡೆಯುವ ಚಟುವಟಿಕೆಗಳಿಂದ ಆ ಸಂಸ್ಥೆಗಳ ಮೂಲ ಧೈಯಕ್ಕೆ ಧಕ್ಕೆ ಉಂಟಾಗುವುದಾದಲ್ಲಿ ಅಂತಹ ಚಟುವಟಿಕೆಗಳ ಆಯೋಜನೆಗೆ ಸಕ್ಷಮ ಪ್ರಾಧಿಕಾರಗಳು ಅನುಮತಿಯನ್ನು ನಿರಾಕರಿಸತಕ್ಕದ್ದು.
4) ಈ ಕೆಳಕಂಡ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲಾಗುವ ಖಾಸಗಿ ಸಂಘ, ಸಂಸ್ಥೆಗಳು, ಸಂಘಟನೆಗಳ ಚಟುವಟಿಕೆಗಳಿಗೆ ಅವುಗಳ ಎದುರಿಗೆ ನಮೂದಿಸಲಾದ ಮಾಲಿಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡುವುದನ್ನು ಪರಿಶೀಲಸತಕ್ಕದ್ದು:-
> ಸರ್ಕಾರದ/ಸರ್ಕಾರಿ ಸಾಮ್ಯದ ಶಾಲಾ-ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣ ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ
> ಉದ್ಯಾನವನಗಳು, ಆಟದ ಮೈದಾನಗಳು, ಇತರೆ ತೆರೆದ ಸ್ಥಳಗಳು ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
> ಸಾರ್ವಜನಿಕ ರಸ್ತೆಗಳು, ಸರ್ಕಾರದ ಇತರೆ ಆಸ್ತಿ/ ಸ್ಥಳಗಳು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು/ ಪೊಲೀಸ್ ಅಧೀಕ್ಷಕರು.
5) ಮೇಲೆ ನಮೂದಿಸಿದ ಇಲಾಖೆ, ಸಕ್ಷಮ ಪ್ರಾಧಿಕಾರಗಳು ಇಂತಹ ಅನುಮತಿ ನೀಡುವ ಸಂದರ್ಭದಲ್ಲಿ ಸಂವಿಧಾನ ಬದ್ಧವಾದ ನಾಗರಿಕರ ಹಕ್ಕುಗಳಿಗೆ ಚ್ಯುತಿ ಉಂಟಾಗದಂತೆ ಎಚ್ಚರಿಕೆ ವಹಿಸಲು ಅನುವಾಗುವಂತೆ ಸೂಕ್ತ, ವಿವರವಾದ ಮಾರ್ಗಸೂಚಿಯನ್ನು ಆಯಾ ಇಲಾಖೆಗಳು ಹೊರಡಿಸತಕ್ಕದ್ದು.
ಸಚಿವ ಸಂಪುಟವು ಕೈಗೊಂಡಿರುವ ಮೇಲಿನ ನಿರ್ಣಯದಂತೆ ಒಳಾಡಳಿತ ಇಲಾಖೆಯಿಂದ ಹೊರಡಿಸಲಾಗಿರುವ ಉಲ್ಲೇಖಿತ ಆದೇಶವನ್ನು ಇದರೊಂದಿಗೆ ಲಗತ್ತಿಸಿದೆ. ಸದರಿ ಆದೇಶದಲ್ಲಿ ತಿಳಿಸಿರುವಂತೆ, ಆಯಾ ಇಲಾಖಾ ವ್ಯಾಪ್ತಿಗೆ ಸಂಬಂಧಿಸಿದಂತೆ, ಸೂಕ್ತ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಮುಂದುವರೆದು, ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸುವವರೆಗೆ, ಉಲ್ಲೇಖಿತ ಆದೇಶದಲ್ಲಿ ನಮೂದಿಸಿರುವ ಸಕ್ಷಮ ಪ್ರಾಧಿಕಾರವು ಚಾಲ್ತಿಯಲ್ಲಿರುವ ತಮ್ಮ ಇಲಾಖೆಯ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸದರಿ ಆದೇಶದಲ್ಲಿ ಉಲ್ಲೇಖಿಸಿರುವ ಸಿದ್ಧಾಂತಗಳನ್ನು ಪಾಲಿಸಿ ನ್ಯಾಯಿಕ ಆದೇಶವನ್ನು ಹೊರಡಿಸಲು ಕ್ರಮಕೈಗೊಳ್ಳುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಹೊರಡಿಸಲಾದ ಮಾರ್ಗಸೂಚಿಯ ಪ್ರತಿಯನ್ನು ಒಳಾಡಳಿತ ಇಲಾಖೆಗೆ ಕಳುಹಿಸುವಂತೆ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಬಿಜೆಪಿಯ ‘ವೋಟ್ ಚೋರಿ’ ಪ್ರಜಾಪ್ರಭುತ್ವದ ಕಗ್ಗೊಲೆ: ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು ಜನತೆಗೆ ಗಮನಕ್ಕೆ: ‘ಬನಶಂಕರಿ ವಿದ್ಯುತ್ ಚಿತಾಗಾರ’ ತಾತ್ಕಾಲಿಕವಾಗಿ ಸ್ಥಗಿತ