ಶಿವಮೊಗ್ಗ : ರಾಜ್ಯದಲ್ಲಿ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಹಿನ್ನೆಲೆಯಲ್ಲಿ ಸರ್ಕಾರವು ಈಗಾಗಲೇ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು, ಇನ್ನಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್‌ಅವರು ಹೇಳಿದರು.
ಅವರು ಇಂದು ಭದ್ರಾವತಿ ನಗರದ ಹೊರವಲಯದಲ್ಲಿರುವ ಉಜ್ಜನಿಪುರದಲ್ಲಿ ಕರ್ನಾಟಕ ಕಾರ್ಮಿಕ ಮಂಡಳಿ ವತಿಯಿಂದ ನಿರ್ಮಿಸಲಾದ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಆಡಳಿತಾರೂಢ ಘನ ಸರ್ಕಾರವು ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38ವರ್ಗಗಳು ಹಾಗೂ ಹಿಂದುಳಿದ ವರ್ಗ ಮತ್ತಿತರ ವರ್ಗಗಳ ಕುಲಕಸುಬಿನಲ್ಲಿ ತೊಡಗಿರುವ ಕಾರ್ಮಿಕರು ಸೇರಿದಂತೆ ಒಟ್ಟು 91ವರ್ಗಗಳ ಕಾರ್ಮಿಕರನ್ನು ನೋಂದಾಯಿಸಿಕೊಂಡು ಹಲವು ವಿಶೇಷ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್‌ಕಾರ್ಡ್‌ನೀಡಲಾಗುತ್ತಿದೆ ಎಂದರು.
ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಕಾರ್ಮಿಕರ ಆಕಸ್ಮಿಕ ಮರಣ ಹೊಂದಿದ್ದಲ್ಲಿ ಅವರ ನಾಮನಿರ್ದೇಶಿತರಿಗೆ 1ಲಕ್ಷ ರೂ.ಗಳ ಪರಿಹಾರಧ ನೀಡಲಾಗುತ್ತಿದೆ. ಕಾರ್ಮಿಕರ ಸಹಜ ಮರಣ ಹೊಂದಿದ್ದಲ್ಲಿ ಪರಿಹಾರ ಮತ್ತು ಅಂತ್ಯಕ್ರಿಯೆಗಾಗಿ 10,000/-ರೂ.ಗಳ ಸಹಾಯಧನ ನೀಡಲಾಗುತ್ತಿದೆ ಎಂದ ಅವರು, ಇಂತಹ ಅನೇಕ ಸೌಲಭ್ಯಗಳಿಗಾಗಿ ಹೆಚ್ಚು ಸಂಖ್ಯೆಯ ಕಾರ್ಮಿಕರು ಹೆಸರು ನೋಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಖಾಸಗಿ ಮತ್ತು ವಾಣಿಜ್ಯ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ 40ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮಾಹಿತಿ ಇದ್ದು, ಅವರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ ಕ್ಷೇಮಾಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದೆ. ಈ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡ ಫಲಾನುಭವಿಗಳಿಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ ಅವರ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಹಂತಹಂತವಾಗಿ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಅಲ್ಲದೇ ಫಲಾನುಭವಿಗೆ ಹೆರಿಗೆ ಭತ್ಯೆಯೂ ಸಹ ದೊರೆಯಲಿದೆ ಎಂದರು.
ಕಾರ್ಮಿಕ ಇಲಾಖೆಯು ಖಾಸಗಿ ವಲಯದ ಉದ್ಯೋಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟರನ್ನು ನೇಮಿಸಿಕೊಳ್ಳಲು ಮಾಲೀಕರು ಅಥವಾ ಉದ್ಯೋಗದಾತರನ್ನು ಉತ್ತೇಜಿಸಲು ಮಹತ್ವಾಕಾಂಕ್ಷಿ ಆಶಾದೀಪ ಯೋಜನೆಯನ್ನು ರೂಪಿಸಿದ್ದು, ಈ ಯೋಜನೆಯಡಿ ಕಾರ್ಮಿಕರಿಗೆ ಮಾಲೀಕರು ಪಾವತಿಸುವ ವೇತನದಲ್ಲಿ ಶೇ.50ರಷ್ಟು ಮೊತ್ತವನ್ನು, ಮಾಸಿಕವಾಗಿ ರೂ.7000/- ಮಿತಿಯೊಳಗೆ ಎರಡು ವರ್ಷಗಳ ಅವಧಿಗೆ ಸರ್ಕಾರದ ವತಿಯಿಂದ ನೀಡಲಾಗುವುದು ಎಂದವರು ನುಡಿದರು.
ದೇಶದಲ್ಲಿಯೇ ಮೊದಲ ಬಾರಿಗೆ ಸರಕಾರವು ರಾಜ್ಯದಲ್ಲಿನ ಕಾರ್ಮಿಕರಿಗಾಗಿ ವಿಶಿಷ್ಟವಾದ ಗಿಗ್‌ವಿಮಾ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಫುಡ್‌ಡಿಲವರಿ ಮಾಡುವ ಹಾಗೂ ಎಲ್ಲಾ ವಲಯಗಳ ಅಸಂಘಟಿತ ಕಾರ್ಮಿಕರು ಮರಣ ಹೊಂದಿದ್ದಲ್ಲಿ ರೂ.4.00ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ. ಅಲ್ಲದೇ ದಿನಪತ್ರಿಕೆ ವಿತರಣೆ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಅವರ ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ಆರ್ಥಿಕ ನೆರವು ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದ ಅವರು, ಡಿಲೆವರಿ ಬಾಯ್ಸ್‌ಮತ್ತು ಪತ್ರಿಕೆ ಹಾಕುವ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್‌ಧರಿಸುವಂತೆ ಹಾಗೂ ಸಾರಿಗೆ ನಿಯಮಗಳನ್ನು ಪಾಲಿಸುವಂತೆಯೂ ಅವರು ಕರೆನೀಡಿದ ಅವರು, ಸಿನಿಮಾ ಕ್ಷೇತ್ರದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಹಾಗೂ ಸಾರಿಗೆ ವಲಯಗಳಲ್ಲಿ ಕಾರ್ಯನಿರ್ವಹಿಸುವವರಿಗಾಗಿಯೂ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ ಎಂದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ, ತರಬೇತಿ ನೀಡುವುದಲ್ಲದೇ ವಿಶ್ವಮಾನ್ಯ ಪ್ರಮಾಣಪತ್ರ ನೀಡಲು ಉದ್ದೇಶಿಸಲಾಗಿದೆ. ಜನಪ್ರಿಯ ಹಾಗೂ ಜನಸಾಮಾನ್ಯರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಅಸಂಖ್ಯಾತ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಸಿಂಹಪಾಲು ಕರ್ನಾಟಕ ಸರ್ಕಾರದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ. ಸಂಗಮೇಶ್‌ಅವರು ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಇ.ಎಸ್.ಐ.ಸೌಲಭ್ಯ, ಕೌಶಲ್ಯ ಕಿಟ್‌ಗಳಲ್ಲಿ ಆಧುನಿಕ ಹಾಗೂ ಗುಣಮಟ್ಟದ ಯಂತ್ರೋಪಕರಣಗಳನ್ನು ನೀಡುವುದು, ಅಪಘಾತ ವಿಮೆ, ವಿದ್ಯಾರ್ಥಿವೇತನ, ನಿವೇಶನ, ವಸತಿ ದುರಸ್ತಿಗೆ ಸಹಾಯಧನ, ಶವಸಂಸ್ಕಾರ ವೆಚ್ಚ, ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು, ಉಚಿತ ಬಸ್‌ಪಾಸ್, ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳ ಚೆಕ್ಕನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ., ರಾಜ್ಯ ಬೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ನಗರಸಭೆ ಅಧ್ಯಕ್ಷೆ ಶ್ರೀಮತಿ ಜೆ.ಸಿ.ಗೀತಾರಾಜ್‌ಕುಮಾರ್, ಕಾರ್ಮಿಕ ಆಯುಕ್ತ ಡಾ|| ಗೋಪಾಲಕೃಷ್ಣ, ಸಿ.ಇ.ಓ. ಶ್ರೀಮತಿ ಭಾರತಿ ಡಿ., ಜಿ.ಪಂ. ಸಿ.ಇ.ಓ. ಹೇಮಂತ್‌ಎನ್., ಜಂಟಿ ಕಾರ್ಮಿಕ ಆಯುಕ್ತ ಡಾ|| ಎಸ್.ಬಿ.ರವಿಕುಮಾರ್, ಕಲ್ಯಾಣ ಆಯುಕ್ತ ಆಂಜನೇಯ ಟಿ., ಉಪಕಾರ್ಮಿಕ ಆಯುಕ್ತ ಹೆಚ್.ಎಲ್.ಗುರುಪ್ರಸಾದ್, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ.ವೇಣುಗೋಪಾಲ್‌ಸೇರಿದಂತೆ ಕಾರ್ಮಿಕ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಮತ್ತಷ್ಟು ಭಾರತದ ಸರಕುಗಳ ಮೇಲೆ ಸುಂಕ ಹೆಚ್ಚಿಸುವುದಾಗಿ US ಅಧ್ಯಕ್ಷ ಟ್ರಂಪ್ ಘೋಷಣೆ
ಹೈಕೋರ್ಟ್ ತಡೆಯಾಜ್ಞೆ ನೀಡಿದೆ, ಸಾರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳಬೇಡಿ: ನೌಕರರಿಗೆ KSRTC, BMTC ಎಂಡಿ ಮನವಿ