ಬೆಂಗಳೂರು: ರಾಜ್ಯದ ಸರ್ಕಾರಿ ಆಯುಷ್ ಆಸ್ಪತ್ರೆಗಳಿಗೆ ದಾನಿಗಳು ಅಥವಾ ದಾನಿಗಳು ಸೂಚಿಸಿರುವ ಹೆಸರನ್ನು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೇ ಸರ್ಕಾರ ನಿಗದಿ ಪಡಿಸಿದಂತ ಹಣವನ್ನು ದಾನವಾಗಿ ನೀಡಿದರೇ ಅವರು ಸೂಚಿಸಿದ ಹೆಸರು ಇಡೋಲಾಗುತ್ತದೆ ಅಂತ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಆಸ್ಪತ್ರೆಗಳ/ ಕೇಂದ್ರಗಳಿಗೆ ಸಾರ್ವಜನಿಕರಿಂದ ನಿವೇಶನ, ಕಟ್ಟಡ ಮತ್ತು ಹಣವನ್ನು ದಾನ ರೂಪದಲ್ಲಿ ಸ್ವೀಕರಿಸಲು ಹಾಗೂ ದಾನಿಗಳ ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡಲು ಷರತ್ತುಗಳೊಂದಿಗೆ ಅನುಮತಿ ನೀಡಿ ಆದೇಶಿಸಲಾಗಿರುತ್ತದೆ ಎಂದಿದ್ದಾರೆ.
ಆಯುಕ್ತರು, ಆಯುಷ್ ಇಲಾಖೆ ಇವರು ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ 2018-19ನೇ ಸಾಲಿಗೆ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಇಲಾಖೆಗೆ 15 ಆಯುಷ್ ಆಸ್ಪತ್ರೆಗಳನ್ನು ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿ ಮೇಲ್ದರ್ಜೆಗೇರಿಸಲು ಭಾರತ ಸರ್ಕಾರವು ಅನುಮೋದನೆ ನೀಡಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರತಿ ಆಸ್ಪತ್ರೆಗೆ ಕಟ್ಟಡ ಉನ್ನತೀಕರಣ ಕಾಮಗಾರಿಗಳಿಗಾಗಿ ರೂ.56.25 ಲಕ್ಷಗಳನ್ನು ನಿಗದಿಪಡಿಸಿರುತ್ತದೆ.
ಈ ಯೋಜನೆಯಡಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ನರಗುಂದ, ಗದಗ ಜಿಲ್ಲೆ ಇಲ್ಲಿಗೆ ಒಂದು ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿರುತ್ತದೆ. ಸದರಿ ಕಟ್ಟಡದ ನಿವೇಶನ ಪಡೆಯಲು ಅವಶ್ಯಕ ಅನುದಾನ ರೂ.5,26,943/- ಗಳನ್ನು ದಾನವಾಗಿ ನೀಡಿರುವ ಸಿ ಸಿ ಪಾಟೀಲ್, ಮಾಜಿ ಲೋಕೋಪಯೋಗಿ ಸಚಿವರು, ನರಗುಂದ ರವರು ಸದರಿ ಆಸ್ಪತ್ರೆಗೆ ಅವರ ಅಣ್ಣನವರಾದ ದಿವಂಗತ ಶೇಖರಗೌಡ ಚಿನಪ್ಪಗೌಡ ಪಾಟೀಲ್, ಸಾ|| ಆಚಮಟ್ಟಿ ತಾ ನರಗುಂದ ಇವರ ಹೆಸರನ್ನು ಇಡುವಂತೆ ಮನವಿ ಮಾಡಿರುತ್ತಾರೆ. ಆಸ್ಪತ್ರೆಗೆ ದಿವಂಗತ ಶೇಖರಗೌಡ ಚನ್ನಪ್ಪಗೌಡ ಪಾಟೀಲ್, ಸಾ|| ಆಚಮಟ್ಟಿ, ತಾ-ನರಗುಂದ ಇವರ ಹೆಸರನ್ನು ಇಡಲು ಸರ್ಕಾರದ ಸೂಕ್ತ ಮಂಜೂರಾತಿ ನೀಡಬೇಕೆಂದು ಆಯುಕ್ತರು, ಆಯುಷ್ ಇಲಾಖೆ ಇವರು ಕೋರಿರುತ್ತಾರೆ.
ಆಯುಕ್ತರು, ಆಯುಷ್ ಇಲಾಖೆ ಇವರ ಪುಸ್ತಾವನೆ ಹಾಗೂ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದ ಸರ್ಕಾರವು ಆಯುಷ್ ಆಸ್ಪತ್ರೆಗಳಿಗೆ ಭೂಮಿ, ಉಪಕರಣಗಳು ಅಥವಾ ಹಣವನ್ನು ದಾನ ಮಾಡಲು ಮುಂದೆ ಬರುವ ಅನೇಕ ಆಸಕ್ತ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡಲು ಅನುವಾಗುವಂತೆ ನಿಬಂಧನೆಗಳು ಮತ್ತು ಷರತ್ತುಗಳನ್ನು ಆಯುಷ್ ಇಲಾಖೆಗೆ ವಿಸ್ತರಿಸಲು ತೀರ್ಮಾನಿಸಿ ಕೆಳಕಂಡಂತೆ ಆದೇಶಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆಯುಷ್ ಇಲಾಖೆಯ ಎಲ್ಲಾ ಆಸ್ಪತ್ರೆಗಳು/ ಚಿಕಿತ್ಸಾಲಯಗಳಿಗೆ ಸಾರ್ವಜನಿಕರಿಂದ ನಿವೇಶನ, ಕಟ್ಟಡ ಮತ್ತು ಹಣವನ್ನು ದಾನ ರೂಪದಲ್ಲಿ ಸ್ವೀಕರಿಸಲು ಹಾಗೂ ದಾನಿಗಳ ಅಥವಾ ದಾನಿಗಳು ಸೂಚಿಸಿರುವ ಹೆಸರುಗಳನ್ನು ನಾಮಕರಣ ಮಾಡುವ ಬಗ್ಗೆ ಆಯುಕ್ತರು, ಆಯುಷ್ ಇಲಾಖೆ, ಬೆಂಗಳೂರು ಇವರಿಗೆ ಕೆಳಕಂಡ ಷರತ್ತುಗಳನ್ನು ವಿಧಿಸಿ, ಆದೇಶಿಸಲಾಗಿದೆ.
ಷರತ್ತುಗಳು:-
1. ಚಿಕಿತ್ಸಾಲಯ/ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) 100:100 ಚದುರ ಅಡಿ ನಿವೇಶನ, ತಾಲ್ಲೂಕು ಆಯುಷ್ ಆಸ್ಪತ್ರೆ 2 ಎಕರೆ ಹಾಗೂ ಜಿಲ್ಲಾ ಆಯುಷ್ ಆಸ್ಪತ್ರೆ 4 ಎಕರೆ ಜಮೀನನ್ನು ದಾನ ನೀಡಿದ್ದಲ್ಲಿ, ದಾನಿಗಳು ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ಆಸ್ಪತ್ರೆಗಳಿಗೆ/ಕೇಂದ್ರಗಳಿಗೆ ನಾಮಕರಣ ಮಾಡುವುದು.
2. ಪಟ್ಟಣ ಪ್ರದೇಶಗಳಲ್ಲಿ/ನಗರ ಪ್ರದೇಶಗಳಲ್ಲಿ ಸರ್ಕಾರಿ ಆಸ್ಪತ್ರೆ/ಕೇಂದ್ರಗಳಿಗೆ ದಾನಿಗಳ ಹೆಸರನ್ನು ನಾಮಕರಣ ಮಾಡಲು ಕಟ್ಟಡದ ಅಂದಾಜು ಮೌಲ್ಯದ ಅರ್ಧ ಭಾಗ ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕನೇ ಒಂದು ಭಾಗದಷ್ಟು ಕಟ್ಟಡದ ಅಂದಾಜು ಮೌಲ್ಯದ ಮೊತ್ತವನ್ನು ದಾನವಾಗಿ ನೀಡಿರಬೇಕು.
3. ಆಸ್ಪತ್ರೆ/ಧರ್ಮ ಶಾಲೆ ನಿರ್ಮಿಸಲು ಪೂರ್ಣ ಮೊತ್ತ ನೀಡಿದ್ದಲ್ಲಿ ಧರ್ಮ ಶಾಲೆಗೆ ದಾನಿಗಳು ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡುವುದು. 4. ಆಸ್ಪತ್ರೆಯ ಒಂದು ವಾರ್ಡ್/ರೂಮ್ ನಿರ್ಮಿಸಲು ಪೂರ್ಣ ಮೊತ್ತವನ್ನು ದಾನವಾಗಿ ನೀಡಿದ್ದಲ್ಲಿ ವಾರ್ಡ್/ರೂಮ್‌ಗೆ ದಾನಿಗಳ ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡುವುದು.
5. ಉಪಕರಣಗಳನ್ನು ನೀಡಿದ್ದಲ್ಲಿ ಸೂಚನಾ ನಮೂದಿಸುವುದು. ಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸುವುದು
6. ದಾನಿಗಳು ರೂ.1.00 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನವಾಗಿ ನೀಡಿದಲ್ಲಿ ಆಸ್ಪತ್ರೆಯ ನಾಮ ಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸುವುದು.
7. ದಾನಿಗಳ ನೀಡುವ ದಾನ ಅಸ್ತಿ ರೂಪದಲ್ಲಿದ್ದರೆ ದಾನ ಸ್ವೀಕರಿಸುವ ಹಕ್ಕು ಪತ್ರದ ದಾಖಲೆಗಳು ನ್ಯಾಯ ಬದ್ಧವಾಗಿರುವುದನ್ನು ಪರಿಶೀಲಿಸಿ, ಸದರಿ ಆಸ್ತಿಯನ್ನು ಕಾನೂನು ತೊಡಕುಗಳು ಬಾರದಂತೆ ಇಲಾಖೆಗೆ ವರ್ಗಾಯಿಸಿಕೊಂಡು ಮೇಲೆ ತಿಳಿಸಿರುವ ನಿಬಂಧನೆಗಳನ್ನು ಪೂರೈಸಿದ ನಂತರ ಆಸ್ಪತ್ರೆಗೆ ದಾನಿಗಳು ಸೂಚಿಸಿರುವ ಹೆಸರನ್ನು ನಾಮಕರಣ ಮಾಡುವುದು.
8. ಸ್ವೀಕರಿಸಿದ ದಾನ, ಆಸ್ಪತ್ರೆಗಳಿಗೆ ದಾನಿಗಳು ಸೂಚಿಸುವ ಹೆಸರನ್ನು ನಾಮಕರಣ ಮಾಡಲು ಮಾತ್ರ ಅನ್ವಯವಾಗುತ್ತದೆ. ಸ್ವೀಕರಿಸಿದ ದಾನವನ್ನು ಯಾವುದೇ ಕಾರಣಕ್ಕಾಗಿ ಹಿಂದಿರುಗಿಸಲಾಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ವಸಂತ ಬಿ ಈಶ್ವರಗೆರೆ…, ಸಂಪಾದಕರು

ಸಾಮಾಜಿಕ ನ್ಯಾಯದ ಹರಿಕಾರ ಬಾಬಾ ಸಾಹೇಬ್ ಅಂಬೇಡ್ಕರ್: ಮದ್ದೂರು ಶಾಸಕ ಕೆ.ಎಂ.ಉದಯ್
BREAKING: ಸೋನಿಯಾ ಗಾಂಧಿ ನಿವಾಸದಲ್ಲಿ ಕರ್ನಾಟಕ ರಾಜಕೀಯ ವಿದ್ಯಮಾನದ ಬಗ್ಗೆ ಚರ್ಚೆ: ಅಂತಿಮಗೊಳ್ಳದ ನಿರ್ಧಾರ








