ನೋಯ್ಡಾ: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಇಂದು ನೋಯ್ಡಾದಲ್ಲಿ ಮೊಬೈಲ್ ಸಾಧನಗಳಿಗಾಗಿ ಭಾರತದ ಮೊದಲ ಟೆಂಪರ್ಡ್ ಗ್ಲಾಸ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.
ಅಮೆರಿಕದ ʻಕಾರ್ನಿಂಗ್ ಇನ್ಕಾರ್ಪೊರೇಟೆಡ್ʼ ಸಹಯೋಗದೊಂದಿಗೆ ʻಆಪ್ಟಿಮಸ್ ಎಲೆಕ್ಟ್ರಾನಿಕ್ಸ್ʼ ಸಂಸ್ಥೆಯು ಈ ಘಟಕವನ್ನು ಸ್ಥಾಪಿಸಿದೆ ಮತ್ತು ಜಾಗತಿಕವಾಗಿ ಗುರುತಿಸಲ್ಪಟ್ಟ ಬ್ರಾಂಡ್ “ಇಂಜಿನೀಯರ್ಡ್ ಬೈ ಕಾರ್ನಿಂಗ್” ಅಡಿಯಲ್ಲಿ ಉತ್ತಮ ಗುಣಮಟ್ಟದ ಟೆಂಪರ್ಡ್ ಗ್ಲಾಸ್ ಅನ್ನು ಉತ್ಪಾದಿಸುತ್ತದೆ. ಉತ್ಪನ್ನಗಳನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪೂರೈಸಲಾಗುವುದು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಟೆಂಪರ್ಡ್ ಗ್ಲಾಸ್, ಮೊಬೈಲ್ ಫೋನ್ ಗಳಿಗೆ ಪ್ರಮುಖ ಪರಿಕರವಾಗಿದ್ದು, ಅದರ ದೇಶೀಯ ಉತ್ಪಾದನೆಯು ʻಮೇಕ್ ಇನ್ ಇಂಡಿಯಾʼ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯಶಸ್ಸಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಹಂತ ಹಂತವಾಗಿ, ಚಿಪ್ಸ್, ಕವರ್ ಗ್ಲಾಸ್ ಗಳು, ಲ್ಯಾಪ್ ಟಾಪ್ ಮತ್ತು ಸರ್ವರ್ ಘಟಕಗಳು ಸೇರಿದಂತೆ ಮೊಬೈಲ್ ಫೋನ್ ಗಳಲ್ಲಿ ಬಳಸುವ ಪ್ರತಿಯೊಂದು ಬಿಡಿಭಾಗವನ್ನೂ ಭಾರತ ತಯಾರಿಸುತ್ತದೆ, ಆ ಮೂಲಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ದೇಶವನ್ನು ಜಾಗತಿಕ ಸ್ಥಾನಮಾನದಲ್ಲಿ ಇರಿಸುತ್ತದೆ ಎಂದು ಅವರು ಹೇಳಿದರು.
ʻಮೇಡ್ ಇನ್ ಇಂಡಿಯಾʼ ಚಿಪ್ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ, ಇದು ಸ್ವಾವಲಂಬನೆಯತ್ತ ದೇಶದ ಪ್ರಯಾಣದಲ್ಲಿ ಮತ್ತೊಂದು ಮೈಲುಗಲ್ಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಳೆದ 11 ವರ್ಷಗಳಲ್ಲಿ, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಆರು ಪಟ್ಟು ಬೆಳೆದಿದ್ದು, ಉತ್ಪಾದನಾ ಮೌಲ್ಯ 11.5 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಈ ವಲಯವು 3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ರಫ್ತು ಮೌಲ್ಯವನ್ನು ಹೊಂದಿದ್ದು, 2.5 ದಶಲಕ್ಷ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತಿದೆ ಎಂದು ವೈಷ್ಣವ್ ಒತ್ತಿ ಹೇಳಿದರು.
ದೇಶದಲ್ಲಿ ಒಟ್ಟಾರೆ ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಮತ್ತು ಮೌಲ್ಯವರ್ಧನೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಭಾರತದ ವಿನ್ಯಾಸ ಬಲವು ಅದರ ಅತಿದೊಡ್ಡ ಶಕ್ತಿಯಾಗಿದೆ ಮತ್ತು ಸರ್ಕಾರವು ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಹೆಚ್ಚಳವನ್ನು ಮುಂದುವರಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು. ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಐಐಟಿ ಮದ್ರಾಸ್ ಇನ್ಕ್ಯುಬೇಟೆಡ್ ನವೋದ್ಯಮವು ಭಾರತದ ಮೊದಲ ಮೈಕ್ರೋಕಂಟ್ರೋಲರ್ ಅನ್ನು ವಿನ್ಯಾಸಗೊಳಿಸಿದೆ, ಇದನ್ನು ಶೀಘ್ರದಲ್ಲೇ ಭಾರತೀಯ ಉತ್ಪನ್ನಗಳಲ್ಲಿ ನಿಯೋಜಿಸಲಾಗುವುದು ಎಂದು ಹೇಳಿದರು.
ರೈಲ್ವೆ ವಲಯದಲ್ಲಿ, ಭಾರತೀಯ ತಯಾರಕರು ಈಗಾಗಲೇ ಅತ್ಯುನ್ನತ ಜಾಗತಿಕ ಗುಣಮಟ್ಟದ ಉಪಕರಣಗಳನ್ನು ಐರೋಪ್ಯ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 7.8 ರಷ್ಟಿದ್ದು, ದೇಶವು ಸ್ಥಿರ, ಸದೃಢ ಮತ್ತು ನಾವೀನ್ಯತೆಯಿಂದ ಮುನ್ನಡೆಸಲ್ಪಡುವ ಆರ್ಥಿಕತೆಯಾಗಿದೆ ಎಂದು ವೈಷ್ಣವ್ ಹೇಳಿದರು.
ʻಆತ್ಮನಿರ್ಭರ ಭಾರತʼ ಮತ್ತು ʻವಿಕಸಿತ ಭಾರತ-2047ʼರ ಆಶಯಕ್ಕಾಗಿ ಶ್ರಮಿಸುವಂತೆ ಮತ್ತು ಕೊಡುಗೆ ನೀಡುವಂತೆ ಯುವಕರಿಗೆ ಕರೆ ನೀಡಿದ ಸಚಿವರು, ಜಗತ್ತು ಭಾರತದತ್ತ ಹೆಚ್ಚಿನ ನಿರೀಕ್ಷೆಗಳೊಂದಿಗೆ ನೋಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ʻಆಪ್ಟಿಮಸ್ ಇನ್ಫ್ರಾಕಾಮ್ ಲಿಮಿಟೆಡ್ʼನ ಅಧ್ಯಕ್ಷರಾದ ಅಶೋಕ್ ಕುಮಾರ್ ಗುಪ್ತಾ ಅವರು, “ಇದು ಭಾರತೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮ ಮತ್ತು ʻಮೇಕ್ ಇನ್ ಇಂಡಿಯಾʼ ಆಶಯಕ್ಕೆ ಒಂದು ಹೆಗ್ಗುರುತಾಗಿದೆ. ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ಮಾರುಕಟ್ಟೆಗಳಲ್ಲಿ ಒಂದಾಗಿದ್ದರೂ, ಭಾರತವು ʻಟೆಂಪರ್ಡ್ ಗ್ಲಾಸ್ʼಗಾಗಿ ಆಮದನ್ನು ಅವಲಂಬಿಸಿತ್ತು. ಈ ಉಪಕ್ರಮದೊಂದಿಗೆ, ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಸಾಮರ್ಥ್ಯಗಳನ್ನು ನಿರ್ಮಿಸಲು ನಾವು ನೋಡುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯ ಮೊಬೈಲ್ ಫೋನ್ ಬಳಕೆದಾರರು ತಮ್ಮ ಪರದೆಯನ್ನು ರಕ್ಷಿಸಲು ʻಬಿಐಎಸ್ʼ ಪ್ರಮಾಣೀಕರಣ ಮತ್ತು ಫಾಗ್ ಮಾರ್ಕಿಂಗ್ ಹೊಂದಿರುವ ʻಮೇಕ್ ಇನ್ ಇಂಡಿಯಾʼ ಟೆಂಪರ್ಡ್ ಗ್ಲಾಸ್ ಅನ್ನು ಬಳಸಬೇಕು ಎಂಬುದು ನಮ್ಮ ಆಕಾಂಕ್ಷೆಯಾಗಿದೆ ಎಂದು ಹೇಳಿದರು.
ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಧ್ಯಕ್ಷರಾದ ಪಂಕಜ್ ಮಹಿಂದ್ರೂ ಅವರು ಮಾತನಾಡಿ, “ಈ ಉತ್ಪನ್ನ ವಿಭಾಗವು ಹೆಚ್ಚಿನ ಕಾರ್ಮಿಕ-ಆಧರಿತ ಉತ್ಪಾದನಾ ಪ್ರಕ್ರಿಯೆಯನ್ನು ಹೊಂದಿದೆ. ದೇಶೀಯ ಬೇಡಿಕೆಯನ್ನು ಪೂರೈಸಲು ಮಾತ್ರವಲ್ಲದೆ ಪ್ರಮುಖ ರಫ್ತುದಾರನಾಗಲು ಭಾರತಕ್ಕೆ ಅದ್ಭುತ ಅವಕಾಶವನ್ನು ಒದಗಿಸುತ್ತದೆ. ಉತ್ತಮ ಗುಣಮಟ್ಟದ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು ಬೆಂಬಲಿಸಲು, ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸಲು ಮತ್ತು ಭಾರತದ ರಫ್ತು ಹೆಜ್ಜೆಗುರುತಿಗೆ ಗಮನಾರ್ಹ ಕೊಡುಗೆ ನೀಡಲು ನಾವು ಅಪಾರ ಸಾಮರ್ಥ್ಯವನ್ನು ಇದರಲ್ಲಿ ಕಾಣುತ್ತಿದ್ದೇವೆ. ಇದು ಭಾರತವನ್ನು ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ನೆರವಾಗಲಿದೆ,ʼʼ ಎಂದು ಹೇಳಿದರು.
ಟೆಂಪರ್ಡ್ ಗ್ಲಾಸ್ ಗೆ ಸಂಬಂಧಿಸಿದಂತೆ, ದೇಶೀಯ ಮಾರುಕಟ್ಟೆಯು ಸುಮಾರು 20,000 ಕೋಟಿ ರೂ.ಗಳ ಚಿಲ್ಲರೆ ಮೌಲ್ಯವನ್ನು ಹೊಂದಿರುವ 500 ದಶಲಕ್ಷಕ್ಕೂ ಹೆಚ್ಚು ಬಿಡಿ ಉತ್ಪನ್ನಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ – ಇದು ದೇಶದಲ್ಲಿ ದೊಡ್ಡ ಪ್ರಮಾಣದ ಅವಕಾಶವನ್ನು ಸೂಚಿಸುತ್ತದೆ. ಜಾಗತಿಕ ಮಾರುಕಟ್ಟೆಯ ಮೌಲ್ಯ 60 ಶತಕೋಟಿ ಡಾಲರ್ ಆಗಿದೆ.
ʻಆಪ್ಟಿಮಸ್ʼನ ಟೆಂಪರ್ಡ್ ಗ್ಲಾಸ್ ಉತ್ಪಾದನಾ ಘಟಕದ ಬಗ್ಗೆ
70 ಕೋಟಿ ರೂ.ಗಳ ಆರಂಭಿಕ ಹೂಡಿಕೆಯೊಂದಿಗೆ, ನೋಯ್ಡಾದಲ್ಲಿ ಸ್ಥಾಪಿಸಲಾದ ಘಟಕವು ಅತ್ಯಾಧುನಿಕ ಮೂಲಸೌಕರ್ಯವನ್ನು ಒಳಗೊಂಡಿದೆ. ಇದು ಕಚ್ಚಾ ವಸ್ತುಗಳನ್ನು ಅತ್ಯುತ್ತಮ ಗುಣಮಟ್ಟದ ಟೆಂಪರ್ಡ್ ಗ್ಲಾಸ್ ಆಗಿ ಸಂಪೂರ್ಣವಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಮೊದಲ ಹಂತವು ವರ್ಷಕ್ಕೆ 25 ದಶಲಕ್ಷ ಯೂನಿಟ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುತ್ತದೆ, ಇದು 600ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗವನ್ನು ಸೃಷ್ಟಿಸುತ್ತದೆ. ಎರಡನೇ ಹಂತದಲ್ಲಿ, 800 ಕೋಟಿ ರೂ.ಗಳ ಹೆಚ್ಚುವರಿ ಹೂಡಿಕೆಯೊಂದಿಗೆ ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಪೂರೈಕೆ ಸಾಮರ್ಥ್ಯವನ್ನು ವರ್ಷಕ್ಕೆ 200 ದಶಲಕ್ಷ ಯೂನಿಟ್ ಗೆ ಹೆಚ್ಚಿಸಲಾಗುವುದು. ಇದರಿಂದ 4,500ಕ್ಕೂ ಹೆಚ್ಚು ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಈ ಘಟಕವು ಸ್ಕ್ರಿಬಿಂಗ್, ಆಕಾರ / ಚಾಮ್ಫೆರಿಂಗ್, ಪಾಲಿಶಿಂಗ್, ಎರಡು ಹಂತದ ತೊಳೆಯುವಿಕೆ, ರಾಸಾಯನಿಕ ಟೆಂಪರಿಂಗ್, ಲೇಪನ, ಮುದ್ರಣ ಮತ್ತು ಲ್ಯಾಮಿನೇಷನ್ ಸೇರಿದಂತೆ ಸಮಗ್ರ ಉತ್ಪಾದನಾ ಸಾಮರ್ಥ್ಯಗಳನ್ನು ಹೊಂದಿದೆ. ಪ್ರತಿ ಹಂತವನ್ನು ಕಠಿಣ ಗುಣಮಟ್ಟದ ತಪಾಸಣೆಯ ಅಡಿಯಲ್ಲಿ ನಡೆಸಲಾಗುತ್ತದೆ, ಭಾರತದಲ್ಲಿ ಮೊದಲ ಬಾರಿಗೆ ಭಾರತೀಯ ಗ್ರಾಹಕರಿಗೆ ಪ್ರಮಾಣೀಕೃತ, ಉತ್ತಮ-ಗುಣಮಟ್ಟದ ಟೆಂಪರ್ಡ್ ಗ್ಲಾಸ್ ಅನ್ನು ಹೊರ ತರಲಿದೆ.
ಆಪ್ಟಿಮಸ್ ಇನ್ಫ್ರಾಕಾಮ್ ಬಗ್ಗೆ
ಆಪ್ಟಿಮಸ್ ಗ್ರೂಪ್ ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಉನ್ನತ ಕಾರ್ಯಕ್ಷಮತೆಯ ದೂರಸಂಪರ್ಕ ಮತ್ತು ಉತ್ಪಾದನಾ ಉದ್ಯಮವಾಗಿದೆ. ಕಂಪನಿಯು ದೂರಸಂಪರ್ಕ, ತಂತ್ರಜ್ಞಾನ ಮತ್ತು ಉತ್ಪಾದನೆಯಲ್ಲಿ ಸುಮಾರು ಮೂರು ದಶಕಗಳ ಅನುಭವವನ್ನು ಹೊಂದಿದೆ ಮತ್ತು ಭಾರತೀಯ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯ ಬಗ್ಗೆ ವಿಶಿಷ್ಟ ಜ್ಞಾನವನ್ನು ಹೊಂದಿದೆ.
ಬೆಳಗಾವಿಯಲ್ಲಿ 145 ಕೋಟಿ ನಕಲಿ GST ಇನ್ ವಾಯ್ಸ್ ವಿತರಿಸಿ, 43 ಕೋಟಿ ತೆರಿಗೆ ವಂಚಿಸಿದ ಓರ್ವ ಆರೋಪಿ ಅರೆಸ್ಟ್
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ