ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ಯಾವಾಗ ನಡೆಯಲಿದೆ ಎಂದು ಕೇಳಿದಾದ ಸುದ್ದಿಗಾರರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಾವು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ನಮಗೆ ಕಾಲಮಿತಿ ಇದೆ. ನ್ಯಾಯಾಲಯ ಕೂಡ ಅದನ್ನು ಒಪ್ಪಿದೆ. 1-11-2025 ವಾರ್ಡ್ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. 30-11-2025ರಂದು ವಾರ್ಡ್ ಗಳ ಮೀಸಲಾತಿ ಅಧಿಸೂಚನೆ ಹೊರಡಿಸಲಾಗುವುದು. ಇದಾದ ಬಳಿಕ ಚುನಾವಣೆ ನಡೆಸಲಿದೆ. ಅವರು ಒಂದು ವಾರ, ಹದಿನೈದು ದಿನಗಳಲ್ಲಿ ಮಾಡಬಹುದು. ಈಗಾಗಲೇ ಚುನಾವಣೆ ನಡೆಸಲು ಪೂರ್ವಸಿದ್ಧತೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅವರೂ ಕೂಡ ಅತಿ ಶೀಘ್ರದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗ ಚುನಾವಣೆ ಮಾಡಲಿದೆ ಎಂದು ತಿಳಿಸಿದರು.
ಪಾಲಿಕೆಗಳ ಮೇಲೆ ಜಿಬಿಎ ಇರುವುದರಿಂದ 74ನೇ ತಿದ್ದುಪಡಿಗೆ ತೊಂದರೆಯಾಗುವುದಿಲ್ಲವೇ, ನಾಳೆ ಯಾರೂ ನ್ಯಾಯಾಲಯದ ಮೊರೆ ಹೋಗುವುದಿಲ್ಲವೇ ಎಂದು ಕೇಳಿದಾಗ, “ಎಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿ ಹಾಕಿ, ಅವೆಲ್ಲವೂ ತಿರಸ್ಕಾರವಾಗಿವೆ. ಸುಪ್ರೀಂ ಕೋರ್ಟ್ ನಮ್ಮ ಅಫಿಡವಿಟ್ ಒಪ್ಪಿದೆ. ವಾರ್ಡ್ ಪುನರ್ ವಿಂಗಡಣೆ ಬಳಿಕ ಬನ್ನಿ ಎಂದು ನವೆಂಬರ್ 3ರಂದು ವಿಚಾರಣೆಗೆ ಬರುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ” ಎಂದು ತಿಳಿಸಿದರು.
ಮೂಲಸೌಕರ್ಯಗಳಿಗೆ ಪರಿಹಾರ ಸಿಗುತ್ತದೆಯೇ ಎಂದು ಕೇಳಿದಾಗ, “ಬಿಡಬ್ಲ್ಯೂಎಸ್ಎಸ್ ಬಿ ನೀರು ಪೂರೈಸುತ್ತದೆ, ಕಸ ವಿಲೇವಾರಿ ಬಿಎಂಎಸ್ ಡಬ್ಲ್ಯೂ ಅವರು ನೋಡಿಕೊಳ್ಳುತ್ತಾರೆ. ಉಳಿದ ವಿಚಾರವನ್ನು ಪಾಲಿಕೆ ನೋಡಿಕೊಳ್ಳುತ್ತದೆ. ಜಿಬಿಎ ಇವುಗಳ ನಡುವೆ ಸಮನ್ವಯತೆ ಸಾಧಿಸುವಂತೆ ನೋಡಿಕೊಳ್ಳುತ್ತದೆ” ಎಂದು ತಿಳಿಸಿದರು.
ಆಡಳಿತ ಸುಧಾರಣೆ ಮಾಡಿದ್ದೀರಿ, ಜನರಿಗೆ ಎಷ್ಟು ದಿನಗಳ ಒಳಗೆ ಸಮಸ್ಯೆ ಬಗೆಹರಿಸುತ್ತೀರಿ ಎಂದು ಕೇಳಿದಾಗ, “ನೀವು ಇಷ್ಟು ಎತ್ತರಕ್ಕೆ ಬೆಳೆಯಲು 40 ವರ್ಷ ತೆಗೆದುಕೊಂಡಿದ್ದೀರಿ ಅಲ್ಲವೇ” ಎಂದು ಮರು ಪ್ರಶ್ನಿಸಿದರು.
ಖಾತಾ, ಆಸ್ತಿ ತೆರಿಗೆ ಎಲ್ಲವೂ ಬಿಬಿಎಂಪಿ ಮಾನದಂಡಗಳೇ ಮುಂದುವರಿಯಲಿದೆಯೇ ಎಂದು ಕೇಳಿದಾಗ “ಖಂಡಿತಾ ಅದೇ ಮುಂದುವರಿಯಲಿದ್ದು, ಹೊಸ ಪಾಲಿಕೆಗಳ ಮೂಲಕ ಮುಂದುವರಿಯಲಿದೆ. ಇಂದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಅಧಿಕಾರಿಗಳು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಾಳೆಯಿಂದ ಖಾತೆ ತೆರೆದು ತಮ್ಮ ಪಾಲಿಕೆಗಳ ನವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಿಸಲಿದ್ದಾರೆ. ಒಂದೆರಡು ದಿನಗಳು ಹೆಚ್ಚು ಕಮ್ಮಿಯಾಗಬಹುದು” ಎಂದು ತಿಳಿಸಿದರು.
BIG NEWS: ರಾಜೀನಾಮೆ ಕೊಟ್ಟು ಹೋಗ್ತಾ ಇರು: ಭೋವಿ ನಿಗಮದ ಅಧ್ಯಕ್ಷರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ