ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಅಸ್ಥಿ ಪಂಜರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ವಿಧಾನಸಭೆಯಲ್ಲೂ ಧರ್ಮಸ್ಥಳ ಪ್ರಕರಣ ಸದ್ದು ಮಾಡಿದೆ. ಬಿಜೆಪಿ ಸದಸ್ಯರು ಸದನದಲ್ಲಿ ಚರ್ಚೆಗೆ ಅವಕಾಶ ಕೊಡುವಂತೆ ಪಟ್ಟು ಹಿಡಿದಂತ ಘಟನೆಗೂ ಇಂದು ಸಾಕ್ಷಿಯಾಯಿತು.
ಇಂದು ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಶಾಸಕ ಸುನೀಲ್ ಕುಮಾರ್ ಧರ್ಮಸ್ಥಳ ಪ್ರಕರಣವನ್ನು ಪ್ರಸ್ತಾಪಿಸಿದರು. ರಾಜ್ಯ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಸದಸ್ಯರು ಧರ್ಮಸ್ಥಳ ಪ್ರಕರಣ ಪ್ರಸ್ತಾಪಿಸಿದ್ದೇ ತಡ ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.
ಗದ್ದಲದ ನಡುವೆಯೂ ಮಾತು ಮುಂದುವರೆಸಿದಂತ ಶಾಸಕ ಸುನೀಲ್ ಕುಮಾರ್, ತನಿಖೆಗೆ ನಮ್ಮ ಹಸ್ತಕ್ಷೇಪವಿಲ್ಲ. ಆದರೇ ಹಿಂದೂ ಧಾರ್ಮಿಕ ಕೇಂದ್ರವನ್ನು ಟಾರ್ಗೆಟ್ ಮಾಡಲಾಗಿದೆ. ಜೊತೆಗೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದರು.
ಅನಾಮಿಕನು ಐದು, ಹತ್ತು ಗುಂಡಿ ಅಂತ ಹೇಳುತ್ತಾ 13 ಗುಂಡಿ ಆಗಿದೆ. ಇನ್ನೂ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸರ್ಕಾರವು ಊಹಾಪೋಹಗಳಿಗೆ ತೆರೆ ಎಳೆಯಬೇಕು. ಅಲ್ಲದೇ ಧಾರ್ಮಿಕ ನಂಬಿಕೆ ಮೇಲೆ ಅಪಪ್ರಚಾರ ಮಾಡುತ್ತಿರುವವ ವಿರುದ್ಧ ಕ್ರಮ ಆಗಬೇಕು. ಎಸ್ಐಟಿ ತನಿಖೆ ಎಲ್ಲಿಗೆ ಬಂದಿದೆ. ಇನ್ನೆಷ್ಟು ಗುಂಡಿ ತೆಗೆಯುತ್ತೀರಿ ಎಂಬುದಾಗಿ ಗೃಹ ಸಚಿವರು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು.
ಸದಸ್ಯ ಸುನೀಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಸದ್ಯ ತನಿಖೆ ನಡೆಯುತ್ತಿದೆ. ತನಿಖೆಯ ಮಧ್ಯೆ ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ತನಿಖೆ ಒಂದು ಹಂತಕ್ಕೆ ಬಂದ ನಂತರವಷ್ಟೇ ವರದಿ ಕೊಡುತ್ತಾರೆ. ವರದಿ ಕೊಟ್ಟ ನಂತ್ರ ನಾನು ಪೂರ್ಣ ಉತ್ತರ ನೀಡುವುದಾಗಿ ಸದನಕ್ಕೆ ತಿಳಿಸಿದರು.
ಗೃಹ ಸಚಿವರ ಮಾತಿಗೆ ತೃಪ್ತಿಯಾಗದಂತ ವಿಪಕ್ಷಗಳ ಸದಸ್ಯರು ಸ್ಪಷ್ಟೀಕರಣ ಈಗಲೇ ಕೊಡಬೇಕು. ಇನ್ನೂ ಎಷ್ಟು ಗುಂಡಿ ತೆಗೆಯುತ್ತೀರಿ ಎಂದು ಹೇಳಿ. ಧರ್ಮಸ್ಥಳದ ಬಗೆಗಿನ ಅಪಪ್ರಚಾರವನ್ನು ನಿಲ್ಲಿಸಿ. ಇದು ಸುಳ್ಳುಪ್ರಚಾರವಾಗಿದೆ. ಸದನದಲ್ಲಿ ಧರ್ಮಸ್ಥಳ ಪ್ರಕರಣ ಕುರಿತಂತೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.
ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್ ಕಾರ್ಡ್ ಕನೆಕ್ಷನ್’ ಇವೆ ಎಂಬುದನ್ನು ತಿಳಿಯಬೇಕೆ? ಜಸ್ಟ್ ಹೀಗೆ ಮಾಡಿ
ಹಳದಿ ಮಾರ್ಗದ ಮೆಟ್ರೋ ಫೀಡರ್ ಬಸ್ಸಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ, ಮೆಟ್ರೋದಲ್ಲಿ ಪ್ರಯಾಣ