ಶಿವಮೊಗ್ಗ : ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ಕೊಡುವುದನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಾಗರ ತಾಲ್ಲೂಕು ಡಿವೈಎಸ್‌ಪಿ ಗೋಪಾಲಕೃಷ್ಣ ಟಿ. ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಶಾರದಾಂಬಾ ಸಭಾಭವನದಲ್ಲಿ ಶುಕ್ರವಾರ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ನಾನು ಸಾಗರಕ್ಕೆ ಬಂದು ಎರಡು ವರ್ಷವಾಗುತ್ತಾ ಬಂದಿದೆ. ಅನೇಕ ಸುಧಾರಣೆಗಳನ್ನು ತಂದಿದ್ದೇನೆ. ಇನ್ನೊಂದಿಷ್ಟು ಬದಲಾವಣೆಗೆ ವೇದಿಕೆ ಸಜ್ಜಾಗಿದೆ. ಸದುದ್ದೇಶದ ಹೋರಾಟಗಳಿಗೆ ಅಡ್ಡಿಪಡಿಸುವುದಿಲ್ಲ. ಆದರೆ ದುರುದ್ದೇಶಪೂರಿತ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತದೆ ಎಂದರು.
ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ತೊಂದರೆ ಕೊಡುವ ಕೆಲವರನ್ನು ಗುರುತಿಸಿದ್ದು ಶೀಘ್ರದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತದೆ. ಮನೆ ಮನೆ ಪೊಲೀಸ್ ಯೋಜನೆ ಅತ್ಯಂತ ವಿಶೇಷವಾಗಿದೆ. ನಮ್ಮ ಇಲಾಖೆಯವರು ನಿಮ್ಮಲ್ಲಿಗೆ ಬಂದು ಸಮಸ್ಯೆ ಕೇಳಿ ಅದಕ್ಕೆ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸುತ್ತಾರೆ. ನಗರವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಇರುವ ದೂರುಗಳನ್ನು ಪರಿಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಕಾನೂನು ಮೀರಿ ನಡೆದುಕೊಂಡರೆ ಇಲಾಖೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತದೆ ಎಂಬುದಾಗಿ ಎಚ್ಚರಿಸಿದರು.
ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಮಾತನಾಡಿ, ಪ್ರತಿಯೊಬ್ಬರೂ ಕಾನೂನುಪಾಲನೆ ಮಾಡಬೇಕು. ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ. ಮನೆಮನೆ ಪೊಲೀಸ್ ಅತ್ಯಂತ ಉಪಯುಕ್ತ ಕಾರ್ಯಕ್ರಮವಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಪೊಲೀಸರು ಮನೆಗೆ ಬಂದಾಗ ಅವರಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಿ ಎಂದು ಮನವಿ ಮಾಡಿದರು.
ಈ ವೇಳೆ ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸಾಗರ ಪೇಟೆ ಠಾಣೆಯ ವೃತ್ತ ನಿರೀಕ್ಷಕ ಪೂವಯ್ಯ ರಾಥೋಡ್, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಮಹಾಬಲೇಶ್ವರ ನಾಯ್ಕ್, ಆನಂದಪುರ-ಕಾರ್ಗಲ್ ವೃತ್ತ ನಿರೀಕ್ಷಕರಾದಂತ ಸಂತೋಷ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಸ್ತೆ ನಿರ್ಮಾಣದಲ್ಲಿ ಉಕ್ಕಿನ ಗಸಿ ಬಳಸಿಕೊಳ್ಳಲು ಉತ್ತೇಜಿಸಲು CSIR-CRRIನೊಂದಿಗೆ ಪರವಾನಗಿ ಪಡೆದ AM/NS ಇಂಡಿಯಾ