ಬೆಂಗಳೂರು: ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ನಮ್ಮ ಸರ್ಕಾರದ ಬದ್ಧತೆಯಾಗಿದ್ದು, ಅದಕ್ಕಾಗಿಯೇ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಾಳಸಂತೆಯಲ್ಲಿ ಪಡಿತರ ಮಾರಾಟ ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಇಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಆಹಾರ ದಿನ – 2025 ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಮ್ಮ ಕವಿ ಸರ್ವಜ್ಞ ಅವರು ಹೇಳಿರುವಂತೆ “ಅನ್ನ ದೇವರ ಮುಂದೆ ಇನ್ನೂ ದೇವರುಂಟೆ, ಅನ್ನವಿರುವ ತನಕ ಪ್ರಾಣವು, ಜಗದೊಳಗೆ ಅನ್ನವೆ ದೈವ ಎಂದು ಹೇಳಿದ್ದಾರೆ. ಹಾಗೆಯೇ ಕವಿ ಬೇಂದ್ರೆಯವರು ರೈತರನ್ನು ಅನ್ನಬ್ರಹ್ಮ ಎಂದು ಕರೆದಿದ್ದಾರೆ ಎಂದರು.
ಬಹಳ ಜನರಿಗೆ ಅನ್ನದ ಮಹತ್ವವೇ ಗೊತ್ತಿಲ್ಲ, ಈ ಬಗ್ಗೆ ದೇಶದಾದ್ಯಂತ ಹೆಚ್ಚಿನ ಅರಿವು ಮೂಡಿಸಬೇಕು. ಪ್ರತಿನಿತ್ಯ ಜಗತ್ತಿನಲ್ಲಿ 19,700 ಮಂದಿ ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ ಅನ್ನದ ಮಹತ್ವವನ್ನು ಅರಿಯದೇ ಬಹಳಷ್ಟು ಮಂದಿ ಅನ್ನವನ್ನು ವಿನಾಕಾರಣ ವ್ಯರ್ಥ ಮಾಡುತ್ತಿದ್ದಾರೆ. ಬಹಳ ಹಿಂದೆಯೇ ಅನ್ನ ಮತ್ತು ರೈತರ ಬಗ್ಗೆ ವ್ಯಾಖ್ಯಾನ ನಡೆದಿದೆ ಆದ್ದರಿಂದ ಅನ್ನ ವ್ಯರ್ಥ ಮಾಡುವುದು, ಬಿಸಾಡುವುದು ಅನ್ನಬ್ರಹ್ಮನಿಗೆ ಮಾಡುವ ಅವಮಾನ. ನನಗೆ ಹಸಿವಿನ ಸಂಕಟ, ಅನ್ನದ ಮೌಲ್ಯ ಗೊತ್ತಿರುವುದರಿಂದ ಕರ್ನಾಟಕ ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಮೊದಲು 5 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಈಗ 10 ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದರು.
ಐದು ಕೆಜಿ ಅಕ್ಕಿ ಜೊತೆಗೆ ಉಳಿದ ಐದು ಕೆಜಿ ಬೇಳೆ ಕಾಳು, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಕೊಡಲು ತೀರ್ಮಾನ:
ಇತ್ತೀಚೆಗೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುವುದು ಕಂಡು ಬಂದಿರುವುದರಿಂದ ಐದು ಕೆಜಿ ಅಕ್ಕಿ ಜೊತೆಗೆ ಉಳಿದ ಐದು ಕೆಜಿ ಬೇಳೆ ಕಾಳು, ಸಕ್ಕರೆ, ಉಪ್ಪು, ಅಡುಗೆ ಎಣ್ಣೆಯಂತಹ ಪೌಷ್ಠಿಕ ಆಹಾರ ಕೊಡಲು ತೀರ್ಮಾನಿಸಲಾಗಿದೆ. ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ನಾವು ಒಂದು ಕಾಲದಲ್ಲಿ ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಬಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ. ಇದರ ಜೊತೆಗೆ ಮದುವೆ, ಹೋಟೆಲ್, ಸಮಾರಂಭಗಳಲ್ಲಿ ಊಟ ವ್ಯರ್ಥ ಮಾಡುವ ಪ್ರಮಾಣವೂ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಜಿಕೆವಿಕೆ ವಿಶ್ವವಿದ್ಯಾಲಯದವರು ಅಧ್ಯಯನ ಮಾಡಿದ್ದಾರೆ. ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್ ಆಹಾರ ವ್ಯರ್ಥವಾಗುತ್ತಿದೆ. ಹೆಚ್ಚೂ-ಕಡಿಮೆ 360 ಕೋಟಿ ಮೌಲ್ಯದ ಆಹಾರವನ್ನು ವ್ಯರ್ಥ ಮಾಡುತ್ತಿದ್ದೇವೆ. ಅನ್ನದ ಮೇಲೆ ತೋರಿಸುವ ಅಹಂಕಾರ. ಅನ್ನ ವ್ಯರ್ಥ ಮಾಡುವುದು ಪಾಪದ ಕೆಲಸ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ ಎಂದರು.
ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ನಮ್ಮ ಸರ್ಕಾರದ ಬದ್ದತೆ : ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಸರ್ಕಾರದ ಕಾಳಜಿ ಮತ್ತು ಬದ್ದತೆಯಾಗಿದೆ. ಹೀಗಾಗಿ ಬಡವರ ಪರವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. 2013ರಲ್ಲಿ ನಮ್ಮ ಪ್ರಧಾನ ಮಂತ್ರಿಗಳಾಗಿದ್ದ ದಿವಂಗತ ಡಾ. ಮನಮೋಹನ್ ಸಿಂಗ್ ಅವರು “ಆಹಾರ ಭದ್ರತೆ ಕಾಯ್ದೆ” ಯನ್ನು ಜಾರಿಗೆ ತಂದರು. ಆಹಾರದ ಬಗ್ಗೆ ಜಾಗ್ರತೆ, ಸಣ್ಣ ರೈತರ ರಕ್ಷಣೆ ಮಾಡುವುದು ನಮ್ಮೆಲ್ಲರ ಸಮಾಜದ ಜವಾಬ್ದಾರಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ “ಅನ್ನ ಸುವಿಧಾ ಯೋಜನೆ” ಯ ಪೋಸ್ಟರ್ ಬಿಡುಗಡೆ ಮಾಡಿದರು. ಕಾಯಕ್ರಮದಲ್ಲಿ ಗೌರವ ಉಪಸ್ಥಿತಿ ವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿಕುಮಾರ್ ಅವರು ಮಾತನಾಡಿ, ನಾವು ಪ್ರಕೃತಿ ನಿಯಮದಲ್ಲಿ ಬದುಕುತ್ತಿದ್ದೇವೆ. ಗಾಳಿ, ಸೂರ್ಯ, ನೀರಿನ ಜೊತೆಗೆ ಹೊಟ್ಟೆಗೆ ಆಹಾರ ಇಲ್ಲದಿದ್ದರೆ ನಿಲ್ಲಲು ಶಕ್ತಿ ಇರುವುದಿಲ್ಲ. ಆಹಾರ ಬಹಳ ಮುಖ್ಯ. ಹಸಿದವರಿಗೆ ಮಾತ್ರ ಗೊತ್ತು ಅದರ ಬೆಲೆ. ಇಂದು ನಾವೆಲ್ಲಾ ಮಾಡುವುದು ಗೇಣು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದರು.
ನಮ್ಮ ಸರ್ಕಾರವು ಜನÀರಿಗೆ ಪೌಷ್ಠಿಕಾಂಶ ಒದಗಿಸುವ ಉದ್ದೇಶದಿಂದ ವಿವಿಧ ಬಗೆಯ ಆಹಾರ ಪದಾರ್ಥಗಳುಳ್ಳ ಇಂದಿರಾ ಆಹಾರ ಕಿಟ್‍ನ್ನು ನೀಡಲು ತೀರ್ಮಾನಿಸಿದೆ. ಸರ್ಕಾರವು ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಶಕ್ತಿ ನೀಡಿದೆ. ಅಲ್ಲದೆ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಅನೇಕ ಬಡವರಿಗೆ ಇದರಿಂದ ಸಹಾಯವಾಗುತ್ತಿದೆ. ಇಡೀ ದೇಶಕ್ಕೆ ಕರ್ನಾಟಕದ ಯೋಜನೆಗಳು ಮಾದರಿಯಾಗಿವೆ. ಕಾನೂನಿನ ಚೌಕಟ್ಟಿನಡಿಯಲ್ಲಿಯೆ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಒಂದು ಹನಿ ನೀರಿಗೆ ನೀಡುವ ಗೌರವವನ್ನು, ಒಂದು ಅಗಳು ಅನ್ನಕ್ಕೂ ನೀಡಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು, ವಿಶ್ವ ಆಹಾರ ದಿನಾಚರಣೆಯನ್ನು ಪ್ರತಿ ವರ್ಷ ಅಕ್ಟೋಬರ್ 16 ರಂದು ಆಹಾರ ಮತು ಕೃಷಿ ಸಂಸ್ಥೆಯ ಸ್ಥಾಪನೆಯ ನೆನಪಿಗಾಗಿ ಆಚರಿಸಲಾಗುತ್ತಿದೆ. ಈ ವರ್ಷ “ಉತ್ತಮ ಆಹಾರಗಳು ಮತ್ತು ಉತ್ತಮ ಭವಿಷ್ಯಕ್ಕಾಗಿ ಕೈ ಜೋಡಿಸಿ” ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಭಾರತ ದೇಶದಲ್ಲಿಯೂ ಸಹ ಬಡವರಿಗೆ ಆಹಾರ ಭದ್ರತೆಯನ್ನು ಖಾತರಿಪಡಿಸಲು 2013 ರಲ್ಲಿ ಕೇಂದ್ರ ಯುಪಿಎ ಸರ್ಕಾರವು ಆಹಾರ ಭದ್ರತಾ ಕಾಯಿದೆಯನ್ನು ಜಾರಿಗೆ ತಂದಿತು. ಅದೇ ರೀತಿ ಕರ್ನಾಟಕದಲ್ಲಿ 2013ರಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಜುಲೈ 2023 ರಿಂದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಮಾಹೆ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತಿದ್ದು, ಈವರೆಗೆ ನಮ್ಮ ಸರ್ಕಾರವು 15134.88 ಕೋಟಿಗಳಷ್ಟು ವೆಚ್ಚ ಮಾಡಲಾಗಿದ್ದು, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಿ ಪೌಷ್ಠಿಕಾಂಶ ಆಹಾರ ಒದಗಿಸುವುದೇ ಇದರ ಉದ್ದೇಶವಾಗಿದೆ. ಅನ್ನ ಪೋಲಾಗುವುದನ್ನು ತಡೆಯಲು ಕಾನೂನು ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಸತಿ, ವಕ್ಫ್, ಅಲ್ಪಸಂಖ್ಯಾತರ ಕಲ್ಯಾ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹಮದ್‍ಖಾನ್, ವಿಧಾನ ಪರಿಷತ್ ಸದಸ್ಯ ರವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಶಾಸಕರಾದ ರವಿ, ಬಸವಣಗೌಡ ಬಾದರ್ಲಿ, ಶ್ರೀನಿವಾಸ್, ಆರ್ಯ ವೈಶ್ಯ ನಿಗಮದ ಅಧ್ಯಕ್ಷರಾದ ರಾಮಪ್ರಸಾದ್, ಆಹಾರ ಇಲಾಖೆಯ ಆಯುಕ್ತರಾದ ವಾಸಿ ರೆಡ್ಡಿ ಜೋತ್ಸನಾ, ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕ ಬಾಬು, ಮತ್ತಿತರ ಗಣ್ಯರು ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.