ಶಿವಮೊಗ್ಗ: ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದಾಗಿ ಈ ಭಾಗದ ಜನರ ಕನಸು ನನಸಾಗುತ್ತಿದೆ. ಶೇ.80ರಷ್ಟು ಕೆಲಸ ಆಗಿದ್ದು ಮೇ ತಿಂಗಳ ವೇಳೆಗೆ ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಶುಕ್ರವಾರ ಸಾಗರ ತಾಲ್ಲೂಕಿನ ಹಸುರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.
ಸಾಗರ ತಾಲ್ಲೂಕಿನ ಹಸಿರುಮಕ್ಕಿಯಲ್ಲಿ ರಾಜ್ಯ ಸರ್ಕಾರದಿಂದ ರೂ. 125.67 ಕೋಟಿ ಮೊತ್ತದಲ್ಲಿ ಹಸಿರುಮಕ್ಕಿ ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. 1.115 ಕಿ ಲೋ ಮೀಟರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಸಿರುಮಕ್ಕಿ ಕಡೆ 345 ಮೀ ,ಕೊಲ್ಲೂರು ಕಡೆ 165 ಮೀ ಕಾಮಗಾರಿ ನಡೆಯುತ್ತಿದೆ. ಸೇತುವೆ ಅಗಲ ೮.೫೦ ಮೀ(ದ್ವಿಪಥ ಸಂಚಾರ), 34 ತಳಪಾಯಗಳಿವೆ. ಈಗ ಶೇ. 80 ಕಾಮಗಾರಿ ಪೂರ್ಣಗೊಂಡಿದೆ. ರೂ. 25 ಕೋಟಿ ಹಣ ಬಿಡುಗಡೆ ಬಾಕಿ ಇದೆ ಎಂದರು.
ನಮ್ಮ ಸರ್ಕಾರ ಬಂದ ಮೇಲೆ ಕ್ಷಿಪ್ರಗತಿಯಲ್ಲಿ, ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದು, ಹಣದ ಕೊರತೆ ಇಲ್ಲ. ಆದಷ್ಟು ಬೇಗ ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ ಎಂದರು.
ಕೆಲವು ಶರಾವತಿ ಸಂತ್ರಸ್ತರಿಂದ ತಮ್ಮ ಭಾಗದಲ್ಲಿ ಸರ್ವೇ ಆಗಿಲ್ಲ, ತಮ್ಮ ಬ್ಲಾಕ್ ನ್ನು ಸರ್ವೇ ಯಲ್ಲಿ ಸೇರಿಸಿಲ್ಲವೆಂಬ ದೂರುಗಳಿವೆ. ನಾವು ಸಂತ್ರಸ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಲಿಕ್ಕೆ ಬಿಡುವುದಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ಏನೇ ಸಮಸ್ಯೆಗಳಿದ್ದರೂ ಅಹವಾಲು ನೀಡಿ, ಸಮಸ್ಯೆಗಳನ್ನು ಖಂಡಿತವಾಗಿ ಬಗೆಹರಿಸುತ್ತೇವೆ. ಆತಂಕಕ್ಕೆ ಒಳಗಾಗುವುದು ಬೇಡ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಜೊತೆಗೂಡಿ ಹಸಿರುಮಕ್ಕಿ ಸೇತುವೆ ಕಾಮಗಾರಿ ವೀಕ್ಷಿಸಿದರು. ಅಲ್ಲದೇ ಕ್ಷಿಪ್ರವಾಗಿ ಕಾಮಗಾರಿ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.