ಮಂಡ್ಯ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಮತ್ತು ಹಿಂದೂ ರಕ್ಷಣಾ ಸಮಿತಿ ಕಾರ್ಯಕರ್ತರು ಮದ್ದೂರು ಪಟ್ಟಣದಲ್ಲಿ ಗುರುವಾರ ಸಂಜೆ ಬೃಹತ್ ಬೈಕ್ ರ‍್ಯಾಲಿ ನಡೆಸಿದರು.
ಹಿಂದೂ ರಕ್ಷಣಾ ಸಮಿತಿ, ವಿವಿಧ ಸಂಘಟನೆಗಳು ಹಾಗೂ ಧಾರ್ಮಿಕ ಚಿಂತಕರ ಬೆಂಬಲದೊಂದಿಗೆ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಆವರಣದಿಂದ ಕೇಸರಿ ಬಾವುಟಗಳನ್ನು ಹಿಡಿದು ಪ್ರಮುಖ ಬೀದಿಗಳ ಮೂಲಕ ಪ್ರವಾಸಿ ಮಂದಿರ ವೃತ್ತದ ವರೆಗೆ ನಡೆದ ಬೈಕ್ ರ್‍ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಂತರ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಂಘಟನೆಗಳ ಮುಖಂಡರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರತೆಯನ್ನು ಹಾಳು ಮಾಡುವ ದೃಷ್ಟಿಯಿಂದ ಪಟ್ಟ ಭದ್ರ ಹಿತಾಸಕ್ತಿಗಳು ಕ್ಷೇತ್ರದ ಬಗ್ಗೆ ನಿರಂತರ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಉದ್ದೇಶಪೂರ್ವಕ ಅಪಪ್ರಚಾರವಾಗಿದೆ ಎಂದು ಕಿಡಿಕಾರಿದರು.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿಂದೆ ಹಿಂದೂ ವಿರೋಧಿಗಳ ಶಕ್ತಿ ಕೆಲಸ ಮಾಡುತ್ತಿದೆ. ಇಂತಹ ಉದ್ದೇಶಪೂರ್ವಕ ಅಪಪ್ರಚಾರದಿಂದ 10 ಸಾವಿರ ವರ್ಷಗಳ ಇತಿಹಾಸವುಳ್ಳ ಹಿಂದೂ ಧರ್ಮವನ್ನು ಅಳಿಸುವ ಮೂಲಕ ದೇಶವನ್ನು ವಿಭಜಿಸಲು ದುಷ್ಟ ಶಕ್ತಿಗಳು ಹುನ್ನಾರ ನಡೆಸುತ್ತಿವೆ ಎಂದು ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೈಕ್ ರ್‍ಯಾಲಿಯಲ್ಲಿ ಹಿಂದೂ ರಕ್ಷಣಾ ಸಮಿತಿಯ ಕೆ.ಎಸ್. ಮಲ್ಲಿಕಾರ್ಜುನ, ಸಿ.ಕೆ.ಸತೀಶ, ಕೆ.ಟಿ.ನವೀನ್, ಎಂ.ಸಿ.ಸಿದ್ದು, ಪಿ.ಮಲ್ಲೇಶ್, ಕದಲೂರು ಯೋಗಾನಂದ, ಎಂ.ಸತೀಶ್, ತೀರ್ಥಾಚಾರ್, ಲಕ್ಷ್ಮಣಾಚಾರ್, ಎಂ. ಸತೀಶ, ಚೈತನ್ಯ ಆರಾಧ್ಯ, ಮೃತ್ಯುಂಜಯ, ಎಂ. ವೀರಭದ್ರ ಸ್ವಾಮಿ, ಎಂ.ಜೆ.ಅನಿಲ್, ಗೋಪಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮುಂದಿನ ತಿಂಗಳು ಬೆಂಗಳೂರಿನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಮಾವೇಶ: ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ
ಮಂಗಳ ಗ್ರಹದಲ್ಲಿ ‘ಡೈನೋಸಾರ್ ಮೊಟ್ಟೆ’ಗಳನ್ನು ಗುರುತಿಸಿದ ನಾಸಾದ ಕ್ಯೂರಿಯಾಸಿಟಿ ರೋವರ್