ಬೆಂಗಳೂರು: ಖರ್ಗೆಯವರಿಗೆ ಖೆಡ್ಡಾ ತೋಡಿದ್ದ ಕಾಂಗ್ರೆಸ್ ಹೈಕಮಾಂಡ್ (ಎಐಸಿಸಿ) ಈಗ ಸಿದ್ದರಾಮಯ್ಯನವರಿಗೆ ಖೆಡ್ಡಾ ತೋಡುತ್ತಿದೆ ಎಂಬುದಾಗಿ ಜನರು ಮಾತನಾಡುತ್ತಿದ್ದಾರೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ತಂತ್ರ- ಮಂತ್ರಗಳನ್ನು ಮಾಡುತ್ತಿದೆ ಎಂದು ಜನರೂ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ ಎಂದು ನುಡಿದರು.
ಮೊದಲು ಖೆಡ್ಡಾ ತೋಡಿ ದೆಹಲಿಗೆ ಕರೆದುಕೊಂಡು ಖರ್ಗೆಯವರನ್ನು ಈಗಾಗಲೇ ಮುಗಿಸಿದ್ದಾರೆ. ಅವರನ್ನು ನಾಮಕಾವಾಸ್ತೆ ಅಧ್ಯಕ್ಷರನ್ನಾಗಿ ಮಾಡಿ ಕೂರಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ಅವರೇ ಹೈಕಮಾಂಡ್ ಆಗಿದ್ದರೂ ಮಾತೆತ್ತಿದರೆ ಇನ್ನೊಂದು ಹೈಕಮಾಂಡ್ ಬಗ್ಗೆ ಮಾತನಾಡುತ್ತಾರೆ. ಈಗ ಸಿದ್ದರಾಮಯ್ಯನವರಿಗೆ ಖೆಡ್ಡಾ ತೋಡಿದ್ದಾರೆ ಎಂದು ವಿವರಿಸಿದರು. ಎಐಸಿಸಿ ಖೆಡ್ಡಾ ತೋಡಿದ್ದು, ಸಿದ್ದರಾಮಯ್ಯನವರಿಗೆ ಅರ್ಥ ಆದಂತಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರಕಾರವು ದಲಿತ ವಿರೋಧಿಯಾಗಿದ್ದು, ದಲಿತರನ್ನು ಸರ್ವನಾಶ ಮಾಡುತ್ತಿದೆ ಎಂದು ನಾವು ಹೇಳಿದ್ದೆವು. ಆಗ ನಮ್ಮ ಬಗ್ಗೆ ಚೇಷ್ಟೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಉತ್ತರ ಕೊಡಲಾಗದೆ, ಮೌನಕ್ಕೆ ಶರಣಾಗಿದ್ದಾರೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಸರಕಾರವು ತನ್ನ ಆಡಳಿತಾವಧಿಯಲ್ಲಿ ಅಧಿಕಾರಿಗಳಿಗೆ ನೀಡಿದ ನ್ಯಾಯದ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು ಆಗ್ರಹಿಸಿದರು.
ಈ ಸರಕಾರವು ದಲಿತರಿಗೆ ಮೀಸಲಿಟ್ಟ ಎಸ್‍ಇಪಿ, ಟಿಎಸ್‍ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿ ದಲಿತರಿಗೆ ಸಂಪೂರ್ಣವಾಗಿ ಅನ್ಯಾಯ ಮಾಡಿತ್ತು. ಈಗ ದಲಿತ ಸಮುದಾಯದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಉನ್ನತ ಹುದ್ದೆಗೆ ನೇಮಿಸುವ ಸಂದರ್ಭದಲ್ಲಿ ಸಂಪೂರ್ಣವಾಗಿ ಅನ್ಯಾಯ ಮಾಡಿದ್ದಾರೆ; ತಮ್ಮನ್ನು ತಿರಸ್ಕರಿಸಿದ್ದಾರೆ. ಕೆಲಸಕ್ಕೆ ಬಾರದ ಸ್ಥಳದಲ್ಲಿ ಕೊಳೆ ಹಾಕಿದ್ದಾರೆ ಎಂದು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಜೊತೆಗೇ ನಿನ್ನೆ ಬೆಂಗಳೂರು ವಿಶ್ವವಿದ್ಯಾಲಯದ 10 ಜನ ದಲಿತ ಪ್ರೊಫೆಸರ್‍ಗಳು ತಾರತಮ್ಯವನ್ನು ಆಕ್ಷೇಪಿಸಿ, ಸರಕಾರದ ಕ್ರಮವನ್ನು ವಿರೋಧಿಸಿ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದಾರೆ ಎಂದು ವಿವರಿಸಿದರು.
ರಾಯರೆಡ್ಡಿ ಹೇಳಿಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಸಂದೇಶ..
ರಸ್ತೆ ಬೇಕೇ, ಗ್ಯಾರಂಟಿ ಬೇಕೇ ಎಂಬ ರಾಯರೆಡ್ಡಿ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ ಉತ್ತರಿಸಿ, ರಾಯರೆಡ್ಡಿ ಅವರು ಮುಖ್ಯಮಂತ್ರಿಗಳ ಮುಖವಾಣಿ ಇದ್ದಂತೆ. ಅವರು ಆರ್ಥಿಕ ತಜ್ಞರು, ಸಿಎಂ ಸಲಹೆಗಾರರು. ಅವರು ಕಾಂಗ್ರೆಸ್ ಪಕ್ಷ, ಸರಕಾರದ ಮುಖವಾಣಿಯೂ ಹೌದು. ನಾವು ಗ್ಯಾರಂಟಿ ಕೊಟ್ಟಿದ್ದೇವೆ; ನೀವ್ಯಾರೂ ಬೇರೇನೂ ಮಾತನಾಡಬಾರದೆಂಬ ಉದ್ದೇಶ ಇದರ ಹಿಂದೆ ಇದ್ದಂತಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಇದನ್ನು ಹೇಳಲಾಗದೆ ಇವರ ಕೈಲಿ ಈ ಸಂದೇಶ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿ ಬೇಕಿದ್ದರೆ ಗ್ಯಾರಂಟಿ ಕೇಳಬೇಡಿ ಎನ್ನುವ ಮೂಲಕ ಅವರು ಬೆದರಿಕೆ ಹಾಕುತ್ತಿದ್ದಾರಾ? ಈ ರೀತಿ ಬ್ಲ್ಯಾಕ್‍ಮೇಲ್ ಮಾಡಿ ರಾಜಕೀಯ ಮಾಡುವುದನ್ನು ಕಾಂಗ್ರೆಸ್ ಪಕ್ಷ ಮೊದಲು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು. ನಾವೀಗ ಪಾರದರ್ಶಕ ಯುಗದಲ್ಲಿದ್ದೇವೆ. ಜನರು ಮೊದಲಿನಂತಿಲ್ಲ ಎಂದು ಕಿವಿಮಾತು ಹೇಳಿದರು. ಜನರಿಗೆ ಹೆಚ್ಚು ದಿನ ಮೋಸ ಮಾಡಿ ನೀವು ಬದುಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಎಂಬುದು ಸಾಬೀತು..
ನೀವು ದಲಿತ ವಿರೋಧಿಗಳಲ್ಲವೇ? ಅಲ್ಲದಿದ್ದರೆ, 10 ಪ್ರೊಫೆಸರ್‍ಗಳು ರಾಜೀನಾಮೆ ಕೊಟ್ಟು ಯಾಕೆ ಹೊರಕ್ಕೆ ನಡೆದರು? ಇದರ ಕುರಿತು ಉತ್ತರಿಸಿ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದರು.
ತಾವೇ ದಲಿತ ನಾಯಕರೆಂದು ಟಿ.ವಿ.ಗಳಲ್ಲಿ ಬೊಬ್ಬೆ ಹೊಡೆಯುವ ನಾಯಕರು ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಕಾಂಗ್ರೆಸ್ ದಲಿತರ ಪಾಲಿಗೆ ಸುಡುವ ಮನೆ ಎಂದು ಡಾ. ಅಂಬೇಡ್ಕರರು ಹೇಳಿದ್ದರು. ಮೊದಲು ಕಾಂಗ್ರೆಸ್ ತೊರೆದು ಹೊರಕ್ಕೆ ಬನ್ನಿ ಎಂದಿದ್ದರು ಎಂಬುದಾಗಿ ನೆನಪಿಸಿದರು. ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಎಂಬುದು ಸಾಬೀತಾಗಿದೆ ಎಂದು ವಿಶ್ಲೇಷಿಸಿದರು.
34 ಲಕ್ಷ ರಿಯಲ್ ಎಸ್ಟೇಟ್ ವಂಚನೆ ಪ್ರಕರಣದಲ್ಲಿ ನಟ ಮಹೇಶ್ ಬಾಬುಗೆ ಲೀಗಲ್ ನೋಟಿಸ್: ವರದಿ | Actor Mahesh Babu