ಮಂಡ್ಯ : ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಶ್ರೀ ಧರ್ಮಸ್ಥಳದ ಪಾವಿತ್ರ್ಯವನ್ನು ಎತ್ತಿ ಹಿಡಿಯುವ ಸಲುವಾಗಿ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿದ ಪರಿಣಾಮ ಸತ್ಯಾಂಶ ಹೊರ ಬಂದಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾನುವಾರ ಹೇಳಿದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಮೂಡ್ಯ, ಕೊಪ್ಪ, ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸೌಜನ್ಯ ಎಂಬ ಯುವತಿಯ ಸಾವಿನ ಪ್ರಕರಣವನ್ನಿಟ್ಟುಕೊಂಡು ಕೆಲ ಕಿಡಿಗೇಡಿಗಳು ಹಲವು ವರ್ಷಗಳಿಂದ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಮೇರೆಗೆ ಎಸ್.ಐ.ಟಿ ತಂಡವನ್ನು ರಚಿಸಿ ಸಮಗ್ರ ತನಿಖೆ ನಡೆಸಿದ ಪರಿಣಾಮ ಸತ್ಯಾಂಶ ಹೊರ ಬಂದಿದೆ. ಶ್ರೀ ಕ್ಷೇತ್ರದ ಮೇಲೆ ಇದ್ದಂತ ಕಳಂಕ ಈಗ ಮುಕ್ತವಾಗಿದೆ. ಹೀಗಾಗಿ ಬಿಜೆಪಿ ನಾಯಕರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದರು.
ಬಿಜೆಪಿ ಸರ್ಕಾರವಿದ್ದಾಗಲೇ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಆರ್.ಅಶೋಕ್ ಉಪ ಮುಖ್ಯಮಂತ್ರಿ, ಗೃಹ ಸಚಿವರಾಗಿದ್ದರು. ಆದರೆ, ಅವರ ಸರ್ಕಾರವಿದ್ದಾಗಲೇ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಪ್ರಕರಣವನ್ನು ಮುಕ್ತಾಯಗೊಳಿಸಬಹುದಿತ್ತು. ಅವರಿಗೆ ಕ್ಷೇತ್ರದ ಮೇಲೆ ಬದ್ದತೆ ಹಾಗೂ ಗೌರವವಿಲ್ಲ. ಈಗ ನಮ್ಮ ಕಾಂಗ್ರೆಸ್ ಸರ್ಕಾರ ಕ್ರಮ ತಗೋಬೇಕು ಎಂದು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಮಾಡುತ್ತ ಶ್ರೀ ಕ್ಷೇತ್ರದ ಭಕ್ತಾದಿಗಳು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಇದರಿಂದ ಸರ್ಕಾರದ ವಿರುದ್ಧ ಅಪಪ್ರಚಾರಕ್ಕಿಳಿದಿರುವ ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದರು.
ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ, ಐಟಿ ಹಾಗೂ ಸಿಬಿಐ ತನಿಖೆ ಸಂಸ್ಥೆಗಳಿರುವುದು ವಿಪಕ್ಷಗಳನ್ನು ಕಂಟ್ರೋಲ್ ಮಾಡೋದಕ್ಕೆ. ಕೇಂದ್ರದ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳನ್ನು ಇಡಿ, ಐಟಿ ಹಾಗೂ ಸಿಬಿಐ ನಂತಹ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿಸಿ ವಿರೋಧ ಪಕ್ಷಗಳನ್ನು ನಿಯಂತ್ರಣದಲ್ಲಿಡುವುದಕ್ಕೆ ಷಡ್ಯಂತ್ರ ನಡೆಸುತ್ತಿದೆ ಎಂದು ಟೀಕಿಸಿದ ಅವರು, ತನಿಖಾ ಸಂಸ್ಥೆಗಳು ಕೇಂದ್ರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆಯೂ ಕಾಂಗ್ರೆಸ್ ಸಂಸದರು, ಶಾಸಕರು ಹಾಗೂ ನಾಯಕರ ಮನೆ, ಕಛೇರಿ ಸೇರಿದಂತೆ ವಿವಿದೆಡೆ ದಾಳಿ ಮಾಡಿಸಲಾಗಿದೆ. ಈ ತನಿಖಾ ಸಂಸ್ಥೆಗಳಿಗೆ ಬಿಜೆಪಿ, ಜೆಡಿಎಸ್ ನಾಯಕರು ಕಾಣೋಲ್ಲ. ಈ ದ್ವೇಷ ರಾಜಕಾರಣ ಎಲ್ಲಿಯವರೆಗೂ ನಡೆಯುತ್ತೋ ನೋಡೋಣ ಎಂದು ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದರು.
ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ತಾ.ಪಂ ಮಾಜಿ ಉಪಾಧ್ಯಕ್ಷ ಬೆಕ್ಕಳಲೆ ರಘು, ತಾ.ಪಂ ಮಾಜಿ ಅಧ್ಯಕ್ಷ ಹೆಚ್.ಜಿ.ರಾಮಚಂದ್ರ, ತಾ.ಪಂ ಮಾಜಿ ಸದಸ್ಯರಾದ ತೋಯಜಾಕ್ಷ, ಕೆ.ಆರ್.ಮಹೇಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗವಾಗಿದೆ: ಸಚಿವ ಎನ್.ಚಲುವರಾಯಸ್ವಾಮಿ