ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಡಳಿತದಲ್ಲಿ ಯಾವುದೇ ಹಿಡಿತ ಕಳೆದುಕೊಂಡಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಶಿವಕುಮಾರ್ ಅವರು ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಶಾಸಕ ಬಿ.ಆರ್ ಪಾಟೀಲ್ ಅವರ ಭೇಟಿ ಬಗ್ಗೆ ಕೇಳಿದಾಗ, “ಪಕ್ಷದ ಅಧ್ಯಕ್ಷನಾಗಿ ನಾನು ವಾಸ್ತವಾಂಶ ತಿಳಿಯಬೇಕಾಗಿತ್ತು. ಹೀಗಾಗಿ ಅವರನ್ನು ಕರೆಸಿ ಮಾತನಾಡಿದೆ. ಅವರು ತಮ್ಮ ವಿಚಾರ ಹೇಳಿದ್ದಾರೆ. ನಾನು ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಸಚಿವ ಜಮೀರ್ ಅವರೊಂದಿಗೂ ಮಾತನಾಡುತ್ತೇವೆ. ಈ ಮಧ್ಯೆ ನಮ್ಮ ಪಕ್ಷದ ವರಿಷ್ಠರೂ ಕೂಡ ಆಗಮಿಸುತ್ತಿದ್ದು, ಎಲ್ಲರ ಜೊತೆ ಮಾತನಾಡಿ ಮಾಹಿತಿ ಪಡೆಯಲಿದ್ದಾರೆ” ಎಂದು ತಿಳಿಸಿದರು.
ಹಲವು ಶಾಸಕರು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದು, ಇದು ಮುಖ್ಯಮಂತ್ರಿಗಳು ಆಡಳಿತದಲ್ಲಿ ಹಿಡಿತ ಕಳೆದುಕೊಳ್ಳುತ್ತಿದ್ದಾರೆಯೇ ಎಂದು ಕೇಳಿದಾಗ, “ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಏನಾದರೂ ಇದ್ದರೆ ನಮ್ಮ ಪಕ್ಷದ ವರಿಷ್ಠರ ಜೊತೆ ನಾನು ಹಾಗೂ ಮುಖ್ಯಮಂತ್ರಿಗಳು ಮಾತನಾಡುತ್ತೇವೆ. ಆಡಳಿತದಲ್ಲಿ ಯಾವುದೇ ಹಿಡಿತ ಕಳೆದುಕೊಂಡಿಲ್ಲ. ಇದು ಮಾಧ್ಯಮಗಳ ಸೃಷ್ಟಿ” ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಸುರೇಶ್ ಬಾಬು ಅವರು ಮೊದಲು ತಮ್ಮ ಪಕ್ಷ ಸರಿಪಡಿಸಿಕೊಳ್ಳಲಿ. ತಮ್ಮ ಕಾವಲಿಯಲ್ಲಿರುವ ತೂತು ಮುಚ್ಚಿಕೊಳ್ಳಲಿ. ಜಿ.ಟಿ ದೇವೇಗೌಡ ಸೇರಿದಂತೆ ಬೇರೆ ಶಾಸಕರ ವಿಚಾರ ಸರಿಪಡಿಸಲಿ” ಎಂದು ತಿರುಗೇಟು ನೀಡಿದರು.