ಶಿವಮೊಗ್ಗ : ಮನರೇಗಾ ಹೆಸರನ್ನು ತೆಗೆದು ವಿಜಿ ರಾಮ್ ಜಿ ಹೆಸರನ್ನು ಉದ್ಯೋಗಖಾತ್ರಿಗೆ ಇರಿಸಲು ಮುಂದಾಗಿರುವ ಕೇಂದ್ರದ ಕ್ರಮ ಖಂಡನೀಯ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ಆವರಣದ ಗಾಂಧಿ ಪ್ರತಿಮೆ ಎದುರು ಸೋಮವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಕೇಂದ್ರ ಸರ್ಕಾರ ಮನರೇಗಾ ಹೆಸರು ಬದಲಾಯಿಸಿರುವ ಕ್ರಮ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಧರಣಿ ಕಾರ್ಯಕ್ರಮವನ್ನು ಮಹಾತ್ಮಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದಂತ ಅವರು, ಗ್ರಾಮೀಣ ಜನರ ಕೈಗೆ ಉದ್ಯೋಗ ಮತ್ತು ಗ್ರಾಮಾಂತರ ಪ್ರದೇಶಗಳ ಅಭಿವೃದ್ದಿಗಾಗಿ ಡಾ. ಮನಮೋಹನ್ ಸಿಂಗ್ ಅವರು ಉದ್ಯೋಗ ಖಾತ್ರಿ ಯೋಜನೆಯನ್ನು ಮಹಾತ್ಮಾ ಗಾಂಧಿಜಿಯವರ ಹೆಸರಿನಲ್ಲಿ ಅನುಷ್ಟಾನಕ್ಕೆ ತಂದರು. ಆದರೆ ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆದು ಅವರಿಗೆ ಅವಮಾನ ಮಾಡುತ್ತಿದೆ. ಹಿಂದಿನಿಂದಲೂ ಬಿಜೆಪಿಯವರು ಮಹಾತ್ಮಾ ಗಾಂಧಿಜಿಯವರಿಗೆ ಅವಮಾನ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಮಹಾತ್ಮಾ ಗಾಂಧಿಜಿಯವರನ್ನು ಗುಂಡಿಟ್ಟು ಕೊಂದ ನಂತರವೂ ಕೆಲವರಿಗೆ ಗಾಂಧಿ ಅವರ ಹೆಸರನ್ನು ಸಹಿಸಿಕೊಳ್ಳಲು ಆಗಲಿಲ್ಲವೇ ಎಂದು ಪ್ರಶ್ನಿಸಿದ ಶಾಸಕರು, ಮನರೇಗಾ ಹೆಸರು ಬದಲಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಸಣ್ಣತನದ ರಾಜಕೀಯಕ್ಕೆ ಸಾಕ್ಷಿಯಾಗಿದೆ ಎಂದರು.
ಈಗಾಗಲೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿದ್ದ ಬಹುತೇಕ ಅನುದಾನ ನಿಲ್ಲಿಸಿದೆ. ಉದ್ಯೋಗಖಾತ್ರೆಗೆ ಕೇಂದ್ರ ಶೇ. 60, ರಾಜ್ಯ ಶೇ. 40ರಷ್ಟು ಅನುದಾನ ಕೊಡುವುದು ನಿಲ್ಲಿಸಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ನಬಾರ್ಡ್ನಿಂದ ಕೊಡುವ ಅನುದಾನ ಸ್ಥಗಿತಗೊಳಿಸಿದೆ. ನಬಾರ್ಡ್ನಿಂದ ಡಿಸಿಸಿ ಬ್ಯಾಂಕ್‌ಗೆ ಬರಬೇಕಾಗಿದ್ದ 200 ಕೋಟಿ ಸಹಾಯಧನ ನಿಲ್ಲಿಸಿದೆ. ಇಂತಹ ಸ್ಥಿತಿಯಲ್ಲಿ ರೈತರನ್ನು ಉಳಿಸುವುದು ಹೇಗೆ ಎಂದು ಕೇಂದ್ರ ಉತ್ತರ ನೀಡಬೇಕು. ತಕ್ಷಣ ಕೇಂದ್ರ ಸರ್ಕಾರ ಮನರೇಗಾ ಯೋಜನೆಗೆ ಹೆಸರು ಬದಲಾವಣೆ ಮಾಡುವುದನ್ನು ಕೈಬಿಡಬೇಕು. ಮುಂದಿನ ಹದಿನೈದು ದಿನಗಳಲ್ಲಿ ಕೇಂದ್ರ ಸರ್ಕಾರದ ದುರಾಡಳಿತವನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿ, ಮನರೇಗಾ ಯೋಜನೆ ಹೆಸರು ಬದಲಾವಣೆಯ ಹಿಂದೆ ಗಾಂಧೀಜಿ ಅವರಿಗೆ ಅಗೌರವ ತೋರಿಸುವ ಕೇಂದ್ರದ ಧೋರಣೆ ಎದ್ದು ಕಾಣುತ್ತಿದೆ. ಕೇಂದ್ರ ಸರ್ಕಾರ ಮಹಾತ್ಮಾ ಗಾಂಧೀಜಿ ಅವರ ಹೆಸರು ಅಳಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಬ್ಲಾಕ್ ಅಧ್ಯಕ್ಷ ಸುರೇಶಬಾಬು, ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ಪ್ರಮುಖರಾದ ಅನಿತಾ ಕುಮಾರಿ, ಗಣಪತಿ ಮಂಡಗಳಲೆ, ಸೋಮಶೇಖರ ಲ್ಯಾವಿಗೆರೆ, ಅಶೋಕ ಬೇಳೂರು, ಮಧುಮಾಲತಿ, ಸದ್ದಾಂ, ಚಂದ್ರಮೌಳಿ, ಬಿ.ಎ.ಇಂದೂಧರ ಬೇಸೂರು, ಕೆ.ಎಂ.ಸೂರ್ಯನಾರಾಯಣ, ಉಷಾ ಎನ್., ಪ್ರಭಾವತಿ ಇನ್ನಿತರಿದ್ದರು.








