ಬೆಂಗಳೂರು: ಸಿ.ಸಿ.ಬಿ ಮತ್ತು ಸೈಬರ್ ಕ್ರೈಂ ಪೊಲೀಸ್ ಠಾಣೆಯವರು, ಡಿ.ಓ.ಟಿ ಹಾಗೂ ವೊಡಾಫೋನ್ ಸೇವಾ ಸಂಸ್ಥೆಯ ಸಹಕಾರದೊಂದಿಗೆ, ಅಕ್ರಮವಾಗಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ “ಸಿಮ್ ಬಾಕ್ಸ್” ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಪೊಲೀಸರಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ:02/08/2025 ರಂದು ದಾಖಲಾದ ದೂರಿನ ಆಧಾರದ ಮೇಲೆ ನಡೆದ ತನಿಖೆಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಡೇಟಾ ಸೆಂಟರ್‌ನಿಂದ ಉಪಕರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಇನ್ನು ಇಬ್ಬರು ಆರೋಪಿಗಳು ಪ್ರಸ್ತುತ ವಿದೇಶದಲ್ಲಿದ್ದು, ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದಿದೆ.
ದಿನಾಂಕ:02/08/2025 ರಂದು ವೊಡಾಫೋನ್ ಲಿಮಿಟೆಡ್ ನೋಂದಣಿ ಅಧಿಕಾರಿಯೊಬ್ಬರು ಸೈಬರ್ ಕ್ರೈಂ ಪೊಲೀಸ್ ಠಾಣೆ (ಸಿಒಪಿ ಕಚೇರಿ) ಯಲ್ಲಿ ದೂರು ದಾಖಲಿಸಿದ್ದರು. ದೂರುದಲ್ಲಿ, ಗ್ಲೀಮ್ ಗ್ಲೋಬಲ್ ಸರ್ವೀಸಸ್ ಪ್ರೈ.ಲಿ. ಎಂಬ ಹೆಸರಿನಲ್ಲಿ ಸಿಮ್‌ಗಳನ್ನು ಖರೀದಿಸಿ, ಅವುಗಳನ್ನು ಬೆಂಗಳೂರಿನ ವೈಟ್‌ಫೀಲ್ಡ್‌ನ ಐರನ್ ಮೌಂಟನ್ ಡೇಟಾ ಸೆಂಟರ್‌ನಲ್ಲಿ ಅಕ್ರಮವಾಗಿ ಅಳವಡಿಸಿದ ಸಿಮ್ ಬಾಕ್ಸ್‌ನಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದ್ದರು. ಈ ಕ್ರಿಯೆಯಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ ಸ್ಥಳೀಯ ಕರೆಗಳಾಗಿ ಪರಿವರ್ತಿಸಲಾಗುತ್ತಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುವುದರ ಜೊತೆಗೆ ಸರ್ಕಾರ ಹಾಗೂ ಟೆಲಿಕಾಂ ಸಂಸ್ಥೆಗೆ ಆರ್ಥಿಕ ನಷ್ಟ ಉಂಟುಮಾಡುತ್ತದೆ.
ಪಿರಾದುದಾರರ ದೂರಿನ ಆಧಾರದ ಮೇಲೆ, ಸಿ.ಸಿ.ಬಿ ಸೈಬರ್ ಕ್ರೈಂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, 4 ಆಗಸ್ಟ್ 2025 ರಂದು, ಇದೇ ರೀತಿಯ ಹಿಂದಿನ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಒಬ್ಬ ಶಂಕಿತನನ್ನು, ನ್ಯಾಯಾಲಯದ ಆದೇಶದಂತೆ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದರು.
ತನಿಖೆಯ ವೇಳೆ, ಆರೋಪಿಯು ಡೇಟಾ ಸೆಂಟರ್‌ನಲ್ಲಿ ಸಿಮ್ ಬಾಕ್ಸ್ ಮೂಲಸೌಕರ್ಯವನ್ನು ಆರೋಪಿಗಳು ವಿದೇಶದಲ್ಲಿದ್ದು, ಆತನ ಅಳವಡಿಸಿರುವುದಾಗಿ ಒಪ್ಪಿಕೊಂಡಿರುತ್ತಾನೆ ಹಾಗೂ ಮತ್ತಿಬ್ಬರು ಸಂಪರ್ಕದಲ್ಲಿರುವುದಾಗಿ ತಿಳಿಸಿರುತ್ತಾನೆ. ವಿದೇಶದಲ್ಲಿರುವ ಇಬ್ಬರ ಮಾರ್ಗದರ್ಶನದಂತೆ, ವೊಡಾಫೋನ್‌ನಿಂದ ಸಿಮ್‌ಗಳನ್ನು ಖರೀದಿಸಿ, ನಕಲಿ ಕಂಪನಿಗಳ ಹೆಸರಲ್ಲಿ PBX ಸರ್ವ‌್ರಗಳು ಹಾಗೂ ಸಿಮ್ ಬಾಕ್ಸ್‌ಗಳನ್ನು ಅಳವಡಿಸಿದ್ದಾಗಿ ತಿಳಿಸಿರುತ್ತಾನೆ.
ಆರೋಪಿಯ ಮಾಹಿತಿಯ ಆಧಾರದ ಮೇಲೆ ಡೇಟಾ ಸೆಂಟರ್‌ನಲ್ಲಿ ಶೋಧ ನಡೆಸಿ, 6 ಸಿಮ್ ಬಾಕ್ಸ್‌ಗಳು, 133 ಸಿಮ್ ಕಾರ್ಡ್‌ಗಳು, 12 ಡೇಟಾ ಸ್ಟೋರೇಜ್ ಸರ್ವ‌್ರಗಳು (IPBX, ಅಪ್ಲಿಕೇಶನ್ ಮತ್ತು ಡೇಟಾಬೇಸ್), 1 ನೆಟ್‌ವರ್ಕ್ ರೌಟರ್/ಸ್ವಿಚ್ ಹಾಗೂ ಇತರೆ ಸಂಬಂಧಿತ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ *10,00,000/-(ಹತ್ತು ಲಕ್ಷ ರೂಪಾಯಿ).
ತನಿಖೆಯಿಂದ, ವಶಪಡಿಸಿಕೊಂಡ ಸಿಮ್‌ಗಳನ್ನು ಇತರ ಸೈಬರ್ ಅಪರಾಧಗಳಲ್ಲಿ ಬಳಸಿರುವ ಸಾಧ್ಯತೆ ಕಂಡುಬಂದಿದ್ದು, ಸಿಮ್ ಬಾಕ್ಸ್‌ನ್ನು ಇತರ ಯಾವುದೇ ಸೈಬರ್ ಅಪರಾಧಗಳಿಗೆ ಬಳಸಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರೆದಿದೆ. ಮತ್ತಿಬ್ಬರು ಆರೋಪಿಗಳ ಪತ್ತೆಕಾರ್ಯ ಪ್ರಗತಿಯಲ್ಲಿದೆ.
ಈ ಪ್ರಕರಣವನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ಅಕ್ರಮ ಟೆಲಿಕಾಂ ವಿನಿಮಯಗಳನ್ನು ತಡೆಹಿಡಿಯಲು, ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಹಾಗೂ ಸರ್ಕಾರ ಮತ್ತು ಟೆಲಿಕಾಂ ಸಂಸ್ಥೆಗಳ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಅಧಿಕಾರಿಗಳ ಬದ್ಧತೆಯನ್ನು ಎತ್ತಿಹಿಡಿಯಲು ಸಹಾಯವಾಗಿದೆ.
ನಗರ ಪೊಲೀಸ್ ಆಯುಕ್ತರು ಹಾಗೂ ಜಂಟಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ, ಅಕ್ರಮ ಸಿಮ್ ಬಾಕ್ಸ್ ಮೂಲಸೌಕರ್ಯವನ್ನು ಪತ್ತೆಹಚ್ಚುವ ಸಲುವಾಗಿ ಸಿ.ಸಿ.ಬಿ ಹಾಗೂ ಸಿ.ಸಿ.ಪಿ.ಎಸ್ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ಬೆಂಗಳೂರು ನಗರದ ಎಲ್ಲಾ ಡೇಟಾ ಸೆಂಟರ್‌ಗಳು ತಮ್ಮಲ್ಲಿ ಅಳವಡಿಸಲ್ಪಡುವ ಮೂಲಸೌಕರ್ಯವನ್ನು ಸೂಕ್ತವಾಗಿ ಪರಿಶೀಲಿಸಿ, ಅಕ್ರಮ ಸಿಮ್ ಬಾಕ್ಸ್‌ಗಳು ಕಂಡುಬಂದಲ್ಲಿ ತಕ್ಷಣ ಬೆಂಗಳೂರು ನಗರ ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.
ಧರ್ಮಸ್ಥಳ ಕೇಸ್: ’13ನೇ ಪಾಯಿಂಟ್’ನಲ್ಲಿ 18 ಅಡಿ ಅಗೆದರು ಸಿಗದ ಅಸ್ಥಿ ಪಂಜರ, ಉತ್ಕನನ ಮುಕ್ತಾಯ
ಸಾರ್ವಜನಿಕರೇ ಎಚ್ಚರ.! POP ಗಣೇಶ ಮೂರ್ತಿ ತಯಾರಿಕೆ, ಬಳಕೆ ಮಾಡಿದ್ರೆ 10,000 ದಂಡ, ಜೈಲು ಶಿಕ್ಷೆ ಫಿಕ್ಸ್