ಮದ್ದೂರು: ಬ್ರಿಟಿಷರ ಕೈಯಲ್ಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ. ಸರ್ಕಾರ ಒಡೆದುಹಾಕಲು ಇದು ಮಡಕೆಯೇ? ಕಾಂಗ್ರೆಸ್ ಹೋರಾಟಕ್ಕೆ ನಿನ್ನ ಕ್ಷೇತ್ರದ ಹೆಬ್ಬಾಗಿನಲ್ಲೇ ಇರುವ ಶಿವಪುರ ಸತ್ಯಾಗ್ರಹ ಸೌಧವೇ ಸಾಕ್ಷಿ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.
ಮದ್ದೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, “10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೆಗೆಯುತ್ತೇವೆ ಎಂದು ಮಿಸ್ಟರ್ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಬ್ರಿಟಿಷರ ಕೈಯಲ್ಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ. ಸರ್ಕಾರ ಒಡೆದುಹಾಕಲು ಇದು ಮಡಕೆಯೇ? ಕಾಂಗ್ರೆಸ್ ಹೋರಾಟಕ್ಕೆ ನಿನ್ನ ಕ್ಷೇತ್ರದ ಹೆಬ್ಬಾಗಿನಲ್ಲೇ ಇರುವ ಶಿವಪುರ ಸತ್ಯಾಗ್ರಹ ಸೌಧವೇ ಸಾಕ್ಷಿ. ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇವುಗಳನ್ನು ನಿಲ್ಲಿಸಬೇಕು ಎನ್ನುವ ಹುನ್ನಾರ ಮಾಡಿಕೊಂಡು ಬಿಜೆಪಿ, ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ. ಕುಮಾರಸ್ವಾಮಿ, ವಿಜಯೇಂದ್ರ ಯಡಿಯೂರಪ್ಪ, ಆರ್.ಅಶೋಕ್, ಎಲ್ಲಾ ಸೇರಿ ಗ್ಯಾರಂಟಿ ವಿರುದ್ದ ಕತ್ತಿ ಮಸೆಯುತ್ತಿದ್ದಾರೆ” ಎಂದರು.
ಕಾಂಗ್ರೆಸ್ ಸರ್ಕಾರವಿರುವ ತನಕ ಗೃಹಲಕ್ಷ್ಮಿ ಹಣ
“2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಕೇವಲ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಶಾಸಕರು, ಮಂತ್ರಿಗಳು ಅಧಿಕಾರಕ್ಕೆ ಬಂದಿಲ್ಲ. ಪಕ್ಷಕ್ಕೆ ಮತ ಹಾಕಿದ 1.70 ಕೋಟಿ ಮತ ಹಾಕಿರುವ ಜನರು ಅದಿಕಾರಕ್ಕೆ ಬಂದಿದ್ದಾರೆ. ಬಡವರ, ಮಹಿಳೆಯರ, ರೈತರ ರಕ್ಷಣೆಗೆ ಈ ಸರ್ಕಾರವನ್ನು ಜನರು ಅಧಿಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಎಷ್ಟು ವರ್ಷ ಇರುತ್ತದೆಯೋ ಅಷ್ಟು ವರ್ಷವೂ ನಮ್ಮ ತಾಯಂದಿರ ಖಾತೆಗೆ ಗೃಹಲಕ್ಷ್ಮೀ ಹಣ ಬರುತ್ತದೆ. ಇಂದಿರಾಗಾಂಧಿ ಅವರು ವೃದ್ದಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಅಶಕ್ತರಿಗೆ ಹಣ ನೀಡುವ ಕಾರ್ಯಕ್ರಮ ತಂದರು. ಉಳುವವನೆ ಭೂಮಿಯ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ನೂರಾರು ಯೋಜನೆಗಳನ್ನು ಯಾರಿಂದಲೂ ನಿಲ್ಲಿಸಲು ಆಗಲಿಲ್ಲ” ಎಂದು ಹೇಳಿದರು.
“ಕಾಂಗ್ರೆಸ್ ಸರ್ಕಾರ ತಂದಿರುವ ಒಂದೇ ಒಂದು ಜನಪರ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಲು ಪ್ರತಿಪಕ್ಷಗಳಿಗೆ ಸಾಧ್ಯವಾಗಿಲ್ಲ. ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್, ಅಂಗನವಾಡಿ. ಆಶಾ ಕಾರ್ಯಕರ್ತರು ಸೇರಿದಂತೆ ಅನೇಕ ಕಾಯಕ್ರಮಗಳನ್ನು ಕಾಂಗ್ರೆಸ್ ತಂದಿದೆ. ನಾವು ತಂದಿರುವ ಯೋಜನೆಗಳನ್ನು ನಿಲ್ಲಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ” ಎಂದು ಹೇಳಿದರು.
“ಸಿದ್ದರಾಮಯ್ಯ ಅವರು ಹಾಗೂ ಪತ್ನಿ ಮಾಡಬಾರದು ತಪ್ಪು ಮಾಡಿದಂತೆ ಬಿಂಬಿಸಲಾಗುತ್ತಿದೆ. ಪಾರ್ವತಮ್ಮ ಅವರಿಗೆ ಅವರ ಅಣ್ಣ ಅರಿಶಿಣ, ಕುಂಕುಮಕ್ಕೆ ಎಂದು ಮೂರು ಎಕರೆ ಜಮೀನು ನೀಡಿದ್ದಾರೆ. ಅದನ್ನು ಮುಡಾ ಒತ್ತುವರಿ ಮಾಡಿಕೊಂಡ ಕಾರಣಕ್ಕೆ ಪರಿಹಾರವಾಗಿ ಸೈಟು ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ” ಎಂದು ಪ್ರಶ್ನಿಸಿದರು.
“ಶಿವಪುರದ ಧ್ವಜ ಸತ್ಯಾಗ್ರಹ ಸೌಧಕ್ಕೆ ಬಿಜೆಪಿಯವರು ಒಮ್ಮೆ ಭೇಟಿ ನೀಡಬೇಕು ಎಂದು ಸಲಹೆ ನೀಡುತ್ತೇನೆ. ಆಗಿನ ಕಾಲದಲ್ಲೇ 10 ಸಾವಿರ ಜನರು ಸೇರಿ ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಜಾಗವಿದು. ಗಂಡು ಭೂಮಿ ಮಂಡ್ಯ ನೂರಾರು ನಾಯಕರನ್ನು ರಾಜ್ಯ ರಾಜಕಾರಣಕ್ಕೆ ನೀಡಿದೆ. ಕೇಂದ್ರ ಮಂತ್ರಿ, ಮುಖ್ಯಮಂತ್ರಿಗಳಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಾಲ ಸಾಹುಕಾರ್ ಚೆನ್ನಯ್ಯ, ವೀರಣ್ಣ ಗೌಡರು, ಮಲ್ಲಯ್ಯ ಅವರು ಇತಿಹಾಸ ಸೃಷ್ಟಿಸಿದ ಭೂಮಿ ಮಂಡ್ಯ” ಎಂದರು
“ಆ.9 ರಂದು ಕ್ವಿಟ್ ಇಂಡಿಯಾ ಚಳುವಳಿ ನಡೆದ ದಿನ. ಅಂದು ವಿಶೇಷ ರೀತಿಯಲ್ಲಿ ಮೈಸೂರಿನಲ್ಲಿ ಸಭೆ ಆಯೋಜಿಸಲಾಗಿದೆ. ಈ ಜನಾಂದೋಲನ ಸಭೆ ರಾಜ್ಯ ರಾಜಕರಣದ ಇತಿಹಾಸದ ಪುಟ ಸೇರಲಿದೆ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡು 100 ವರ್ಷಗಳಾಗಿವೆ. ಇದಕ್ಕಾಗಿ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಇಡೀ ವರ್ಷ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ತಿಳಿಸಿದರು.
BREAKING: ಬೆಂಗಳೂರಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪಿ ಅರೆಸ್ಟ್
ಅಜ್ಜಯ್ಯನ ಸುದ್ದಿಗೆ ಬರಬೇಡ, ನಿಮ್ಮ ಪಾದಯಾತ್ರೆಗೆ ಹೆದರುವವನು ನಾನಲ್ಲ: HDK ವಿರುದ್ಧ ಡಿಕೆಶಿ ಗುಡುಗು