ಟೆಹ್ರಾನ್: ಟೆಹ್ರಾನ್ ಗೆಸ್ಟ್ ಹೌಸ್ ಗೆ ರಹಸ್ಯವಾಗಿ ಕಳ್ಳಸಾಗಣೆ ಮಾಡಲಾಗಿದ್ದ ಸ್ಫೋಟಕ ಸಾಧನದಿಂದ ಅಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಬುಧವಾರ ಹತ್ಯೆ ಮಾಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಹನಿಯೆಹ್ ತಂಗಿದ್ದ ಅತಿಥಿಗೃಹದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಬಾಂಬ್ ಅನ್ನು ಅಡಗಿಸಿಡಲಾಗಿತ್ತು ಎಂದು ಮಧ್ಯಪ್ರಾಚ್ಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ನ ಭದ್ರತಾ ಹೊದಿಕೆಯಲ್ಲಿದ್ದ ಗೆಸ್ಟ್ಹೌಸ್ನಲ್ಲಿ ಹನಿಯೆ ವಾಸಿಸುತ್ತಿದ್ದರು.
ಹನಿಯೆಹ್ ಕೋಣೆಯೊಳಗೆ ಇದ್ದಾಗ ಸಾಧನವನ್ನು ದೂರದಿಂದಲೇ ಸ್ಫೋಟಿಸಲಾಗಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ. ಸ್ಫೋಟದಿಂದಾಗಿ ಹೊರ ಗೋಡೆಯ ಭಾಗಶಃ ಕುಸಿದು, ಕೆಲವು ಕಿಟಕಿಗಳು ಛಿದ್ರಗೊಂಡು ಕಟ್ಟಡವು ನಡುಗಿತು.
ಹನಿಯೆಹ್ ಹತ್ಯೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹಮಾಸ್ ಮತ್ತು ಇರಾನ್ ಆರೋಪಿಸಿವೆ. ಆದರೆ, ಈ ದಾಳಿಯ ಹೊಣೆಯನ್ನು ಇಸ್ರೇಲ್ ಈವರೆಗೆ ಹೊತ್ತುಕೊಂಡಿಲ್ಲ.
ಅಧ್ಯಕ್ಷೀಯ ಉದ್ಘಾಟನಾ ಸಮಾರಂಭಕ್ಕಾಗಿ ಹನಿಯೆಹ್ ಟೆಹ್ರಾನ್ ನಲ್ಲಿದ್ದರು. ಹನಿಯೆಹ್ ಉತ್ತರ ಟೆಹ್ರಾನ್ ನ ಗೆಸ್ಟ್ ಹೌಸ್ ನಲ್ಲಿ ತಂಗುತ್ತಿರುವುದು ಇದೇ ಮೊದಲಲ್ಲ. ಟೆಹ್ರಾನ್ ಗೆ ಭೇಟಿ ನೀಡಿದಾಗ ಅವರು ಹಲವಾರು ಬಾರಿ ಅಲ್ಲಿಯೇ ಇದ್ದರು.
ದಾಳಿಯ ನಂತರದ ಕಾರ್ಯಾಚರಣೆಯ ವಿವರಗಳ ಬಗ್ಗೆ ಇಸ್ರೇಲ್ ಗುಪ್ತಚರ ಅಧಿಕಾರಿಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಪಾಶ್ಚಿಮಾತ್ಯ ಸರ್ಕಾರಗಳಿಗೆ ವಿವರಿಸಿದರು ಎಂದು ವರದಿ ತಿಳಿಸಿದೆ