ಬೆಂಗಳೂರು: ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ 125 ಕೋಟಿ ಹಗರಣ ನಡೆದಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದು ಅರ್ಹತೆ ಇಲ್ಲದ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ ಎಂಬ ಆರೋಪವನ್ನು ಮಾಡಿವೆ. ಇದು ವಾಸ್ತವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವಂತಹ ಸಂಗತಿಯಾಗಿದ್ದು, ಮಾಧ್ಯಮಗಳ ಮೂಲಕ ತಪ್ಪಾದ ವಿವರಗಳನ್ನು ಸಾರ್ವಜನಿಕರಿಗೆ ನೀಡುವ ಪ್ರಯತ್ನ ಮಾಡಲಾಗಿದೆ ಎಂಬುದಾಗಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, 2024 – 25 ನೇ ಸಾಲಿಗೆ ಅನುಮೋದನೆಯಾಗಿರುವ ಕ್ರಿಯಾ ಯೋಜನೆಯ ಮೊತ್ತ 154.61 ಕೋಟಿ ಆಗಿರುತ್ತದೆ.ಈ ಪೈಕಿ ಪ್ರಬುದ್ಧ ಯೋಜನೆಗೆ 70 ಕೋಟಿ ರೂ ಹಣ ಖರ್ಚಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ 28.84 ಕೋಟಿ ಹಣ ಖರ್ಚಾಗಿದೆ. IEC ಪ್ರಚಾರ ಕೆಲಸಗಳಿಗೆ 99 ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಲಾಗಿದ್ದು ಕಚೇರಿಯ ಆಡಳಿತಾತ್ಮಕ ವೆಚ್ಚವು 2.79 ಕೋಟಿ ವೆಚ್ಚ ಆಗಿರುತ್ತದೆ ಎಂದರು.
ಇನ್ನು 32.03 ಕೋಟಿಗಳ ವೆಚ್ಚದಲ್ಲಿ ಡ್ರೋನ್ ತರಬೇತಿ, PSI ತರಬೇತಿ, PC ತರಬೇತಿ, ಡ್ರೋನ್ ಅಡ್ವಾನ್ಸ್, ಮಲ್ಟಿ ಮೀಡಿಯಾ ಸೇವೆಗಳ ತರಬೇತಿ, ಪದವಿ ಓದುವ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, NTTF ಕೈಗಾರಿಕಾ ತರಬೇತಿ, ಪ್ಯಾರಾ ಮೆಡಿಕಲ್, ತರಬೇತಿಯ ಅಡಿಯಲ್ಲಿ ಸುಮಾರು 5645 ಅಭ್ಯರ್ಥಿಗಳು ಅನುಕೂಲ ಪಡೆದುಕೊಂಡಿದ್ದಾರೆ. ಉಳಿಕೆಯಾಗಿದ್ದ 19.96 ಕೋಟಿ ಹಣವನ್ನು ಪ್ರಬುದ್ಧ ಯೋಜನೆಗೆ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿರುವ ಕಾರಣದಿಂದಾಗಿಯೇ ಸುಮಾರು 10 ಸಾವಿರಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ ಎಂಬುದನ್ನು ನಾನು ಈ ಮೂಲಕ ತಿಳಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಆರೋಪ ಮಾಡುತ್ತಿರುವ ಜನರಿಗೆ ಸ್ಪರ್ಧಾತ್ಮಕ ತರಬೇತಿಗೆ ಎಷ್ಟು ಹಣವನ್ನು ನಿಗದಿ ಪಡಿಸಲಾಗಿದೆ ಎಂಬ ಮಾಹಿತಿಯೇ ಇಲ್ಲ. ಮುಖ್ಯವಾಗಿ ಇಲ್ಲಿ ಕೆಟಿಪಿಪಿ ಟೆಂಡರ್ ದಾಖಲೆಯ ನಿಯಮಾವಳಿಗಳ ಪ್ರಕಾರವೇ ಅರ್ಹ ಸಂಸ್ಥೆಗಳಿಗೆ ಮಾತ್ರ ಟೆಂಡರ್ ನೀಡಲಾಗಿದ್ದು, ಟೆಂಡರ್ ನ ನಿಯಮಾವಳಿಗಳನ್ನು ಸರಿಯಾಗಿ ತಿಳಿಯದೇ ಯಾರೋ ಪಟ್ಟಭದ್ರ ಹಿತಾಸಕ್ತಿಗಳು ಮಾಡಿರುವ ಆಧಾರ ರಹಿತವಾದ ಆರೋಪಗಳನ್ನು ಆಧರಿಸಿ ಸುದ್ಧಿಯನ್ನು ಪ್ರಕಟಿಸಲಾಗಿದ್ದು, ದಯಮಾಡಿ ಮಾಧ್ಯಮಗಳು ಸರಿಯಾದ ಅಂಶಗಳನ್ನು ಪರಿಶೀಲನೆ ಮಾಡಿ ಸುದ್ದಿಯನ್ನು ಪ್ರಕಟಿಸುವ ಜವಾಬ್ದಾರಿ ತೋರಬೇಕೆಂದು ನಾನು ವಿನಂತಿಸಿದ್ದಾರೆ.
ಇನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ತರಬೇತಿ ನೀಡುವ ಹಲವು ಸಂಸ್ಥೆಗಳು ಇದ್ದು ಟೆಂಡರ್ ದೊರೆಯದ ಕೆಲವು ಸಂಸ್ಥೆಗಳು ಈ ರೀತಿಯಾಗಿ ಅಪಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿದ್ದು ಅಂತವರ ಮೇಲೆ ಈಗಾಗಲೇ ಡಿಫಮೇಷನ್ ಕೇಸ್ ಅನ್ನು ದಾಖಲಿಸಲಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ.
ಬಹುಮುಖ್ಯವಾಗಿ ಪರಿಶಿಷ್ಟ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿ ಕೆಲಸ ಮಾಡುತ್ತಿರುವ ನಮ್ಮ ಸರ್ಕಾರವು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ವಿಷಯದಲ್ಲಿ ಸ್ಪಷ್ಟತೆಯಿಂದ ಕೆಲಸ ಮಾಡುತ್ತಿದ್ದು ಇಂತಹ ಸುಳ್ಳು ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂಬುದನ್ನು ಈ ಮೂಲಕ ತಿಳಿಸುತ್ತೇನೆ.
ಇನ್ನು ನಮ್ಮ ಇಲಾಖೆಯ ವತಿಯಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಪ್ರಯೋಜನ ಆಗಿದ್ದು ಹಗರಣ ಮಾಡುತ್ತಾ ಕುಳಿತಿದ್ದರೆ ಇಷ್ಟು ಮಂದಿಗೆ ಪ್ರಯೋಜನ ಆಗುತ್ತಿತ್ತಾ ಎಂಬುದು ಈ ಹೊತ್ತಿನ ಪ್ರಶ್ನೆಯಾಗಿದೆ ಎಂದಿದ್ದಾರೆ.
ಇನ್ನು ಲೋಕಾಯುಕ್ತಕ್ಕೆ ನನ್ನ ವಿರುದ್ಧ ರಾಜಕೀಯ ಪ್ರೇರಿತವಾಗಿ ಮತ್ತು ಸಲ್ಲದ ಕಾರಣಗಳಿಗೆ ದೂರನ್ನು ಸಲ್ಲಿಸಲಾಗಿದೆ. ಆದರೆ ಎಲ್ಲವೂ ನಿಯಮಾವಳಿಗಳ ಪ್ರಕಾರವೇ ಜರುಗಿದ್ದು ಇಂತಹ ದೂರುಗಳಿಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಹೇಳಿದ್ದಾರೆ.
CRIME NEWS: ಕಳ್ಳರಿಗೆ ಹೆದರಿ ಮನೆಯಲ್ಲೇ ಬಚ್ಚಿಟ್ಟು ಹೋಗಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ನಲ್ಲಿ ಕ್ರಾಂತಿ ನೂರಕ್ಕೆ ನೂರರಷ್ಟು ಸತ್ಯ: ಎಂ.ಪಿ ರೇಣುಕಾಚಾರ್ಯ ಭವಿಷ್ಯ








