ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲೋಧ್ರಾನ್ ಎಂಬಲ್ಲಿ ಮಂಗಳವಾರ ತಡರಾತ್ರಿ ತೇಜ್‌ಗಾಮ್ ಎಕ್ಸ್‌ಪ್ರೆಸ್ ರೈಲಿನ ಏಳು ಬೋಗಿಗಳು ಹಳಿತಪ್ಪಿದ್ದು, ಘಟನೆಯಲ್ಲಿ ಕನಿಷ್ಠ 25 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಲಾಹೋರ್‌ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಲೋಧ್ರಾನ್ ಬಳಿ ಈ ಅಪಘಾತ ಸಂಭವಿಸಿದೆ. ಇದರಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಫೆಡರಲ್ ರೈಲ್ವೆ ಸಚಿವ ಹನೀಫ್ ಅಬ್ಬಾಸಿ ಅವರು, ಮಾನವ ತಪ್ಪು ಅಥವಾ ತಾಂತ್ರಿಕ ದೋಷ ಈ ಅಪಘಾತಕ್ಕೆ ಪ್ರಾಥಮಿಕ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ.
ಲೋಧ್ರಾನ್ ಡೆಪ್ಯೂಟಿ ಕಮಿಷನರ್ ಅಬ್ದುಲ್ ಹಫೀಜ್ ಅವರು ನೀಡಿದ ಮಾಹಿತಿಯ ಪ್ರಕಾರ, ಕರಾಚಿ ಕಡೆಗೆ ಹೊರಟಿದ್ದ ತೇಜ್‌ಗಾಮ್ ಎಕ್ಸ್‌ಪ್ರೆಸ್ ಮಂಗಳವಾರ ಸಂಜೆ ಲಾಹೋರ್ ರೈಲು ನಿಲ್ದಾಣದಿಂದ ಪ್ರಯಾಣ ಬೆಳೆಸಿತ್ತು. ರಾತ್ರಿ ಸುಮಾರು 9:30ರ ವೇಳೆಗೆ ಬಹವಾಲ್ಪುರ್-ಲೋಧ್ರಾನ್ ವಿಭಾಗದ ಆಡಮ್ ವಹಾನ್ ರೈಲು ನಿಲ್ದಾಣದ ಬಳಿ ತಲುಪಿದಾಗ ಈ ಅನಾಹುತ ಸಂಭವಿಸಿದೆ. ಹಳಿತಪ್ಪಿದ ಏಳು ಬೋಗಿಗಳಲ್ಲಿ ಕೆಲವು ಪ್ರಯಾಣಿಕರು ಸಿಲುಕಿಕೊಂಡಿದ್ದರು. ಗಾಯಗೊಂಡ 25 ಜನರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿದ ವರದಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪಂಜಾಬ್ ತುರ್ತು ಸೇವಾ ವಿಭಾಗದ (ರೆಸ್ಕ್ಯೂ 1122) ಸಿಬ್ಬಂದಿ, ಬೋಗಿಗಳಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೋಗಿಗಳ ನಡುವಿನ ಕಪ್ಲರ್‌ಗಳು ಮುರಿದು ರೈಲು ಎರಡು ಭಾಗಗಳಾಗಿ ವಿಭಜನೆಗೊಂಡಿದ್ದರಿಂದ ಈ ಹಳಿತಪ್ಪುವಿಕೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಎಂಜಿನ್‌ಗೆ ಜೋಡಿಸಲಾದ ಏಳು ಬೋಗಿಗಳು ಹಳಿತಪ್ಪಿದ್ದು, ಹಳಿಗಳನ್ನು ದುರಸ್ತಿ ಮಾಡುವವರೆಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
BREAKING: ‘ಹೋಟೆಲ್ ಬಿಲ್’ಗಳಲ್ಲಿ ‘ಗ್ಯಾಸ್ ಚಾರ್ಜ್’ ವಸೂಲಿ ಮಾಡುವಂತಿಲ್ಲ: ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ
ರಾಜ್ಯದಲ್ಲಿ ಖಾಯಂ ನಿರೀಕ್ಷೆಯಲ್ಲಿದ್ದ ಹೊರಗುತ್ತಿಗೆ ನೌಕರರಿಗೆ ಬಿಗ್ ಶಾಕ್: ಸಾಧ್ಯವಿಲ್ಲ ಎಂದ ಸಿಎಂ ಸಿದ್ಧರಾಮಯ್ಯ








