ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು. ರಸ್ತೆ ಗುಂಡಿ ಮುಚ್ಚದ ಗುತ್ತಿಗೆದಾರರ ಟೆಂಡರ್ ರದ್ದುಗೊಳಿಸುವುದಾಗಿ ಕೇಂದ್ರ ನಗರ ಪಾಲಿಕೆ ಆಯುಕ್ತರಾದಂತ ರಾಜೇಂದ್ರ ಚೋಳನ್ ಎಚ್ಚರಿಕೆ ನೀಡಿದ್ದಾರೆ.
ಇಂದು ಎಂ.ಜಿ. ರಸ್ತೆಯಲ್ಲಿನ ಪಿ.ಯು.ಬಿ. ಕಟ್ಟಡದ 10ನೇ ಮಹಡಿಯಲ್ಲಿರುವ ನಗರಪಾಲಿಕೆ ಸಭಾಂಗಣದಲ್ಲಿ ಕೇಂದ್ರ ನಗರ ಪಾಲಿಕೆಯ ಎಲ್ಲಾ ಇಂಜಿನೀಯರ್ ಗಳು ಹಾಗೂ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ ವೇಳೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೊನ್ನೆ ನಡೆದ ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿ ನಾಗರೀಕರ ಸಂಚಾರಕ್ಕೆ ತೊಂದರೆಯಾಗದಂತೆ ಮೋಟಾರೇಬಲ್ ರಸ್ತೆಗಳನ್ನು ನಗರ ನಾಗರೀಕರಿಗೆ ಲಭ್ಯವಾಗುವಂತೆ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಿರುತ್ತಾರೆ. ಅದರಂತೆ ಮಾನ್ಯ ಉಪ ಮುಖ್ಯಮಂತ್ರಿಯವರು ಸಹ ನಗರದಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಲು ನಿರಂತರವಾಗಿ ನಿರ್ದೇಶನಗಳನ್ನು ನೀಡುತ್ತಿದ್ದು, ಅವರುಗಳ ಆದೇಶದಂತೆ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದ್ದು, ಅದರನ್ವಯ ಗುತ್ತಿಗೆದಾರರು ತುರ್ತಾಗಿ ಕಾಮಗಾರಿಗಳನ್ನು ನಿರ್ವಹಣೆ ಮಾಡಲು ಸೂಚಿಸಿದರು.
ಮುಂದುವರೆದು, ಬಿಸ್ಮೈಲ್ ವತಿಯಿಂದ ರೇಸ್ ಕೋರ್ಸ್ ರಸ್ತೆ, ಕಬ್ಬನ್ ರಸ್ತೆ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ಗುಂಡಿ ಮುಚ್ಚುವ ಕೆಲಸವನ್ನು ತುರ್ತಾಗಿ ನಿರ್ವಹಿಸಲು ಹಲವಾರು ಬಾರಿ ಸೂಚಿಸಿದ್ದರೂ ಸಹ ಗುಂಡಿ ಮುಚ್ಚುವ ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ, ಮುಂದಿನ 3 ದಿನದೊಳಗಾಗಿ ಗುಂಡಿ ಮುಚ್ಚುವ ಕೆಲಸ ನಿರ್ವಹಿಸಲು ಸೂಚಿಸಿದರು. ಒಂದು ವೇಳೆ ಗುಂಡಿ ಮುಚ್ಚುವ ಕಾಮಗಾರಿ ನಿರ್ವಹಿಸದಿದ್ದಲ್ಲಿ ಹಾಗೂ ನಿರ್ಲಕ್ಷ ತೋರಿದಲ್ಲಿ ಅಂತಹ ಗುತ್ತಿಗೆದಾರರ ಟೆಂಡರ್ ರದ್ದುಗೊಳಿಸಲು ಕ್ರಮ ವಹಿಸಿ, ನಗರ ಪಾಲಿಕೆ ವತಿಯಿಂದಲೇ ರಸ್ತೆ ಗುಂಡಿಗಳನ್ನು ಮುಚ್ಚಲು ತುರ್ತು ಕ್ರಮ ವಹಿಸಲಾಗುವುದು ಮತ್ತು ಗುಂಡಿ ಮುಚ್ಚುವ ಕಾರ್ಯಕ್ಕೆ ತಗಲುವ ವೆಚ್ಚವನ್ನು ಸದರಿ ಗುತ್ತಿಗೆದಾರರಿಂದಲೇ ವಸೂಲಿ ಮಾಡಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಮುಖ್ಯ ಅಭಿಯಂತರರಿಗೆ ಸೂಚಿಸಿದರು.
ರಸ್ತೆ ಗುಂಡಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು:
ಇಂಜಿನೀಯರ್ ಗಳು ಅವರವರ ವಿಭಾಗದಲ್ಲಿ ವಾರ್ಡ್ ವಾರು ಗುಂಡಿಗಳ ಪಟ್ಟಿ, ಪ್ಯಾಚ್ ವರ್ಕ್ ಮಾಡಬೇಕಾದ ಪಟ್ಟಿ, ಜಲಮಂಡಳಿಯವರು ಮತ್ತಿತರೆ ಇಲಾಖೆಯವರು ಅಗೆದಿರುವ ಪಟ್ಟಿ ಮಾಡಿ ನೀಡಲು ಸೂಚಿಸಿದರು. ಅದರಂತೆ ತುರ್ತಾಗಿ ಎಲ್ಲಾ ರಸ್ತೆ ಗುಂಡಿಗಳು ಮತ್ತು ಪ್ಯಾಚ್ ವರ್ಕ್ ಗಳ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮುಕ್ತಾಯಗೊಳಿಸಲು ನಿರ್ದೇಶನ ನೀಡಿದರು. ರಸ್ತೆ ಕಾಮಗಾರಿ ನಿರ್ವಹಿಸಲು ವಿಫಲರಾಗುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದೆಂದು ಎಚ್ಚರಿಗೆ ನೀಡಿದರು.
ಜಲಮಂಡಳಿಯವರು ರಸ್ತೆ ಅಗೆದು ಪುನರ್ ನಿರ್ಮಾಣ ಮಾಡದಿದ್ದಲ್ಲಿ ಮೇಲೆ ದಂಡ ವಿಧಿಸಿ:
ಬೆಂಗಳೂರು ಜಲಮಂಡಳಿ ವತಿಯಿಂದ ಡ್ರೈನೇಜ್ ಮತ್ತು ಇತರೆ ಕಾಮಗಾರಿಗಾಗಿ ರಸ್ತೆ ಅಗೆದು ಅವುಗಳನ್ನು ಪುನರ್ ನಿರ್ಮಿಸದಿದ್ದಲ್ಲಿ ಅಂತಹ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ಹಾಗೂ ಅವರು ಕಾಮಗಾರಿ ನಿರ್ವಹಿಸಿದ ನಂತರ ಕಟ್ಟಡದ ತ್ಯಾಜ್ಯ ತೆರವುಗೊಳಿಸದಿದ್ದರೂ ಸಹ ದಂಡ ವಿಧಿಸಿ, ಅವರು ಕಾಮಗಾರಿ ನಿರ್ವಹಿಸುತ್ತಿರುವ ಸಾಮಗ್ರಿಗಳನ್ನು ವಶಪಡೆಯಲು ಸೂಚಿಸಿದರು.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿ ಕಳೆದ ಎರಡು ದಿನಗಳಿಂದ ವಿವಿಧ ರಸ್ತೆಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಚುರುಕಿನಿಂದ ನಡೆದಿದ್ದು, ಅದರಂತೆ ಇಂದು ಸಹ ರಸ್ತೆ ಗುಂಡಿ ಹಾಗೂ ಪ್ಯಾಚ್ ವರ್ಕ್ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗಿದ್ದು, ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದಿಂದ ಕಲಾಸಿಪಾಳ್ಯ ಮುಖ್ಯ ರಸ್ತೆ, ಶಿವಾಜಿನಗರ ವಿಭಾಗದಿಂದ ದೊಮ್ಮಲೂರು, ಓಲ್ಡ್ ಏರ್ಪೊರ್ಟ್ ರಸ್ತೆಯ ಸರ್ವಿಸ್ ರಸ್ತೆ, ವಾರ್ಡ-112 ವ್ಯಾಪ್ತಿಯ ಸರ್ವಿಸ್ ರಸ್ತೆ, ಶಿವಾನಂದ ವೃತ್ತ ಹಾಗೂ ಶಿವಾನಂದ ವೃತ್ತದ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಸರ್ವಿಸ್ ರಸ್ತೆ, ಬಿ.ವಿ.ಕೆ. ಐಯ್ಯಂಗಾರ್ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಹಾಗೂ ಪ್ಯಾಚ್ ವರ್ಕ್ ಕೈಗೊಂಡಿದ್ದು, ಕಳೆದ 2 ದಿನಗಳಲ್ಲಿ ಒಟ್ಟು 3,182 ಚ.ಮೀ. ವಿಸ್ತೀರ್ಣದ ಪ್ಯಾಚ್ ವರ್ಕ್ ಹಾಗೂ 228 ಗುಂಡಿಗಳನ್ನು ಮುಚ್ಚಲಾಗಿರುತ್ತದೆ.
ಈ ವೇಳೆ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಮುಖ್ಯ ಅಭಿಯಂತರರುಗಳಾದ ವಿಜಯಕುಮಾರ್ ಹರಿದಾಸ್, ಸುಗುಣ, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಬಿಸ್ಮೈಲ್ ವಿಭಾಗದ ಅಭಿಯಂತರರು ಹಾಜರಿದ್ದರು.
‘ಪಂಡಿತ್ ವೆಂಕಟೇಶ್ ಕುಮಾರ್’ಗೆ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಪ್ರದಾನ ಮಾಡಿದ ಸಿಎಂ ಸಿದ್ಧರಾಮಯ್ಯ
BREAKING: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯಿಂದ ರೈಲು ಸಂಚಾರ ಸ್ಥಗಿತ | Namma Metro