ಬೆಂಗಳೂರು. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ (ಡಿಎಂಇ) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ವಿರುದ್ಧ ಟೆಂಡರ್ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಗುರುತರ ಆರೋಪಗಳು ಕೇಳಿಬಂದಿವೆ.
ತಮ್ಮ ವ್ಯಾಪ್ತಿಗೆ ಬರದಿದ್ದರೂ ಜಿಲ್ಲಾ ವೈದ್ಯಕೀಯ ಕಾಲೇಜುಗಳ ಅಧಿಕಾರವನ್ನು ಕಸಿದುಕೊಂಡಿರುವ ಡಿಎಂಇ ಸಂಸ್ಥೆ, ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ 150 ಕೋಟಿ ರೂ. ಅಧಿಕ ಮೌಲ್ಯದ ವೈದ್ಯಕೀಯ ಪರಿಕರಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸುತ್ತಿದೆ. ಇದು ಕೆಟಿಪಿಪಿ ಕಾಯ್ದೆ ವಿರುದ್ಧ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ವ್ಯಾಪ್ತಿಯಡಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಳಗಾವಿ, ಬೀದರ್, ಬೀದರ್, ಗದಗ, ಕಲಬುರಗಿ, ಹಾಸನ, ಕಾರವಾರ, ಕೊಡಗು, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ವಿಜಯನಗರ,ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ, ಹಾವೇರಿ ಮತ್ತು ಚಿತ್ರದುರ್ಗ ಸೇರಿ 22ಕ್ಕೂ ಅಧಿಕ ಜಿಲ್ಲಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳು ಬರಲಿವೆ.
ಕೆಟಿಪಿಪಿ ನಿಯಮದಂತೆ ಆಯಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕಿತ್ತು. ವೈದ್ಯಕೀಯ ಉಪಕರಣಗಳ ಅವಶ್ಯಕತೆ ಅನುಗುಣವಾಗಿ ಇಂಡೆಂಟ್ ಪಡೆದು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದು ಹಾಗೂ ಕೇಂದ್ರ ಸರ್ಕಾರದ ಅನುದಾನ ಬಳಸಿಕೊಂಡು ಆಯಾ ವೈದ್ಯಕೀಯ ಸಂಸ್ಥೆಗಳು ಟೆಂಡರ್ ನಡೆಸುತ್ತೇವೆ. ಅದೇರೀತಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಇಂದಿರಾಗಾಂಧಿ ವಿಜ್ಞಾನ ಸಂಸ್ಥೆಯಲ್ಲಿ ಪ್ರತ್ಯೇಕ ಟೆಂಡರ್ ನಡೆಸಿ ವೈದ್ಯಕೀಯ ಉಪಕರಣ ಖರೀದಿ ಟೆಂಡರ್ ನಡೆಸಲಾಗುತ್ತಿದೆ .ನಿಯಮದಂತೆ ಪ್ರತಿ ವರ್ಷ ಆಯಾ ಜಿಲ್ಲೆಯ ವೈದ್ಯಕೀಯ ಕಾಲೇಜುಗಳಲ್ಲಿ ಟೆಂಡರ್ ನಡೆಸಿಕೊಂಡು ಬರಲಾಗುತ್ತಿದೆ. ಹೀಗಿರುವಾಗ, ಸರ್ಕಾರದಿಂದ ಅನುಮೋದನೆ ಪಡೆಯದೆ ಏಕಪಕ್ಷೀಯ ನಿರ್ಧಾರ ತೆಗದುಕೊಂಡಿರುವ ಡಿಎಂಇ ಸಂಸ್ಥೆಯ ನಿರ್ದೇಶಕಿ, ಬಯೋಮೆಡಿಕಲ್ ಇಂಜಿನಿಯರ್‌ರಾದ ಬಾಲಾಜಿ ಪೈ, ಭರತ್ ಸೇರಿ ಕೆಲ ಉನ್ನತ ಅಧಿಕಾರಿಗಳು, ನಿರ್ದಿಷ್ಟ ಕಂಪನಿಗೆ ಕಾರ್ಯಾದೇಶ ಪತ್ರ ನೀಡಲು ಹುನ್ನಾರ ನಡೆಸಿದ್ದಾರೆ. ಕಮಿಷನ್ ಆಸೆಗಾಗಿ ಟೆಂಡರ್ ಮುನ್ನವೇ ಇಂಥ ಕಂಪನಿಗಳಿಗೆ ಕಾರ್ಯಾದೇಶ ಪತ್ರ ನೀಡುವ ಬಗ್ಗೆ ಈಗಾಲೇ ನಿರ್ಧಾರ ಮಾಡಲಾಗಿದೆ.
ಬರೀ ವಿದೇಶಿ ವೈದ್ಯಕೀಯ ಪರಿಕರಗಳ ಮಾತ್ರ ಬೇಕೆಂತೆ
ಟೆಂಡರ್‌ನಲ್ಲಿ ವಿದೇಶಿ ವೈದ್ಯಕೀಯ ಪರಿಕರಗಳ ಮಾತ್ರ ನೀಡಬೇಕೆಂದು ಹೇಳಲಾಗಿದೆ. ವಿದೇಶಗಳಲ್ಲಿ ಸಿಗುವ ವೈದ್ಯಕೀಯ ಉಪಕರಣಗಳನ್ನು ದೇಶದಲ್ಲಿ ಸಾವಿರಾರು ಕಂಪನಿಗಳು ತಯಾರಿಸುತ್ತಿವೆ. ವಿದೇಶದಲ್ಲಿ 5 ಕೋಟಿ ರೂ.ಗೆ ಸಿಗುವ ಉಪಕರಣಗಳು ದೇಶದಲ್ಲಿ 2 ಕೋಟಿ ರೂ.ಗೆ ದೊರೆಯುತ್ತದೆ. ಆದರೂ, ಡಿಎಂಇ ಸಂಸ್ಥೆಗೆ ವಿದೇಶಿ ಪರಕರಗಳನ್ನೇ ಸರಬರಾಜು ಮಾಡಬೇಕಂತೆ. ನಿಗದಿತ ದರಗಿಂತ ಹೆಚ್ಚು ಹಣ ಕೊಟ್ಟು ಖರೀದಿಸಿದರೆ ಸರ್ಕಾರ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಹೀಗಿರುವಾಗ, ಡಿಎಂಇ ಸಂಸ್ಥೆ, ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದೆ. ಟೆಂಡರ್‌ನಲ್ಲಿ ಹೆಚ್ಚು ಬಿಡ್‌ದಾರರು ಭಾಗಿಯಾಗದಂತೆ ಕೇವಲ ಆಯ್ದ ಕಂಪನಿಗಳು ಮಾತ್ರ ಟೆಂಡರ್ ಗಿಟ್ಟಿಸಿಕೊಳ್ಳುವಂತೆ ನೋಡಿಕೊಳ್ಳಲು ಅಧಿಕಾರಿಗಳು ಈ ತಂತ್ರ ಹೆಣೆದಿದ್ದಾರೆ.