ಬೆಂಗಳೂರು : ಭಾರತೀಯ ಹವಾಮಾನ ಇಲಾಖೆಯು ಪ್ರಸ್ತುತ ಹಾಗೂ ಮೇ ಅಂತ್ಯದವರೆಗೆ ಸೂರ್ಯನ ಬಿಸಿಲು ಮತ್ತು ಬಿಸಿಗಾಳಿ ಹೆಚ್ಚಾಗುವ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿರುತ್ತದೆ. ಜಿಲ್ಲೆಯಲ್ಲಿ ಸೂರ್ಯನ ಶಾಖವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್‍ವೇವ್ (ಶಾಖದ ಹೊಡೆತ) ಸ್ಟ್ರೋಕ್‍ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುವುದರಿಂದ ಎಲ್ಲಾ ಸಾರ್ವಜನಿಕರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಲಹೆಗಳನ್ನು ನೀಡಿದೆ.
ಬೇಸಿಗೆಯಲ್ಲಿನ ಅತೀ ಹೆಚ್ಚು ತಾಪಮಾನದಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಲು ವಹಿಸಬೇಕಾದ ಸೂಚನೆಗಳು : ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವುದು. (ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ), ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯುವುದು. ಮಜ್ಜಿಗೆ, ಎಳನೀರು, ಹಣ್ಣಿನ ರಸ, ಗ್ಲೂಕೋಸ್, ಓಆರ್‍ಎಸ್ ನಂತಹ ದ್ರವ ಪದಾರ್ಥಗಳನ್ನು ಹೆಚ್ಚು ಉಪಯೋಗಿಸಬೇಕು. ಸಾರ್ವಜನಿಕರು ಬಿಸಿಲಿನ ದಿನಗಳಲ್ಲಿ ಕೊಡೆ/ಛತ್ರಿ ಹಾಗೂ ತಂಪು ಕನ್ನಡಕ, ಟವಲ್ ಹಾಗೂ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯುವುದು, ತೆಳುವಾದ ಸಡಿಲವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು. ಗಾಳಿಯಾಡುವ ಪಾದರಕ್ಷೆ ಧರಿಸಬೇಕು.
ಹತ್ತಿಯ ಅಥವಾ ಟರ್ಬನ್ ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಧರಿಸಬೇಕು. ಹಿರಿಯ ನಾಗರಿಕರು ಹಾಗೂ ಮಕ್ಕಳು ಹೆಚ್ಚು ನೀರು ಕುಡಿಯಬೇಕು. ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು, ಹೀಟ್ ಸ್ಟ್ರೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಠ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಬಾತ್ ಮಾಡಬೇಕು ಅಥವಾ ಐಸ್ ಪ್ಯಾಕ್‍ಗಳನ್ನು ಉಪಯೋಗಿಸಬಹುದು ಅಥವಾ ವ್ಯಕ್ತಿಯನ್ನು ಐಸ್‍ಪ್ಯಾಕ್‍ಗಳ ಮದ್ಯ ಇಡಬಹುದು.
ಹೀಟ್‍ವೇವ್ ಸ್ಟ್ರೋಕ್‍ಗೆ ಒಳಗಾದ ವ್ಯಕ್ತಿಗೆ ಯಾವುದೇ ಸುಧಾರಣೆ ಕಂಡು ಬರದಿದ್ದರೆ ಅವರನ್ನು ಕೂಲಿಂಗ್ ವ್ಯವಸ್ಥೆಯೊಂದಿಗೆ ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ಹೊರಾಂಗಣದಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಕಡ್ಡಾಯ ವಿರಾಮವನ್ನು ನಿಗಧಿಪಡಿಸುವುದು, ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬಾರದು. ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಒಳ್ಳೆಯದು ಎಂದು ಸೂಚನೆ ನೀಡಲಾಗಿದೆ.